Chikkamagaluru | ಬಿಜೆಪಿ ಜಿಲ್ಲಾಧ್ಯಕ್ಷ ಸೇರಿ ಹಲವರ ವಿರುದ್ಧ ಪ್ರಕರಣ ದಾಖಲು
ಚಿಕ್ಕಮಗಳೂರು : ಸಚಿವ ನಾಗೇಂದ್ರ ಅವರನ್ನು ಸಂಪುಟದಿಂದ ಕೈಬಿಡುವಂತೆ ಆಗ್ರಹಿಸಿ ಬಿಜೆಪಿ ನಡೆಸಿದ ಪ್ರತಿಭಟನಾ ಮೆರವಣಿಗೆಯ ವೇಳೆ ಅನುಮತಿ ಉಲ್ಲಂಘಿಸಿ ಜಿಲ್ಲಾಧಿಕಾರಿ ಕಚೇರಿ ಮುತ್ತಿಗೆಗೆ ಯತ್ನಿಸಿದ ಮತ್ತು ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಡಿ ಬಿಜೆಪಿ ಜಿಲ್ಲಾಧ್ಯಕ್ಷ ದೇವರಾಜ್ ಶೆಟ್ಟಿ ಸೇರಿದಂತೆ ಹಲವರ ವಿರುದ್ಧ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಾಲೂಕು ಕಚೇರಿಯಿಂದ ಎಂ.ಜಿ. ರಸ್ತೆ ಮಾರ್ಗವಾಗಿ ಆಝಾದ್ ಪಾರ್ಕ್‌ವರೆಗೆ ಮಧ್ಯಾಹ್ನ 3ರ ಬಳಿಕ ಶಾಂತಿಯುತ ಪ್ರತಿಭಟನೆ ನಡೆಸಲು ಮಾತ್ರ ಪೊಲೀಸರು ಷರತ್ತುಬದ್ಧ ಅನುಮತಿ ನೀಡಿದ್ದರು. ಆದರೆ, ನಿಗದಿತ ಸಮಯಕ್ಕಿಂತ ಮುಂಚಿತವಾಗಿ ಅಂದರೆ ಮಧ್ಯಾಹ್ನ 12:30ಕ್ಕೆ ಮೆರವಣಿಗೆ ಆರಂಭಿಸಿದ ಕಾರ್ಯಕರ್ತರು, ಆಝಾದ್ ಪಾರ್ಕ್ ತಲುಪುತ್ತಿದ್ದಂತೆ ಏಕಾಏಕಿ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಲು ನುಗ್ಗಿದ್ದಾರೆ. ಈ ಸಂದರ್ಭದಲ್ಲಿ ಸಾರ್ವಜನಿಕ ರಸ್ತೆಯಲ್ಲಿ ವಾಹನ ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡು ಸಾರ್ವಜನಿಕರು ತೊಂದರೆ ಅನುಭವಿಸುವಂತಾಯಿತು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಸ್ಥಳದಲ್ಲಿದ್ದ ನಗರ ಠಾಣಾ ಪೊಲೀಸ್ ನಿರೀಕ್ಷಕ ಅಭಯಪ್ರಕಾಶ್ ಸೋಮನಾಳ, ಪಿಎಸ್ಸೈಗಳಾದ ಸುನೀತಾ, ಧನರಾಜ್ ಹಾಗೂ ಸಿಬ್ಬಂದಿ ಪ್ರತಿಭಟನಾಕಾರರನ್ನು ನಿಯಂತ್ರಿಸಲು ಯತ್ನಿಸಿದರು. ಜಿಲ್ಲಾ ಪೊಲೀಸ್ ಕಚೇರಿ ಪಕ್ಕದ ರಸ್ತೆಯಲ್ಲಿ ಬ್ಯಾರಿಕೇಡ್ ಹಾಕಿ ತಡೆದಾಗ, ಉದ್ರಿಕ್ತಗೊಂಡ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಪೊಲೀಸರೊಂದಿಗೆ ತಳ್ಳಾಟ ನಡೆಸಿ ಕರ್ತವ್ಯ ನಿರ್ವಹಣೆಗೆ ಅಡ್ಡಿಪಡಿಸಿದ್ದಾರೆ ಎಂದು ದೂರಿನಲ್ಲಿ ವಿವರಿಸಲಾಗಿದೆ.
ಪೊಲೀಸ್ ನಿರೀಕ್ಷಕ ಅಭಯಪ್ರಕಾಶ್ ಸೋಮನಾಳ ನೀಡಿದ ದೂರಿನನ್ವಯ, ಬಿಜೆಪಿ ಜಿಲ್ಲಾಧ್ಯಕ್ಷ ದೇವರಾಜ ಶೆಟ್ಟಿ, ಪ್ರಮುಖರಾದ ಪುಷ್ಪರಾಜ್, ಜಯರಾಮ್, ಪುಟ್ಟಸ್ವಾಮಿ, ರವೀಂದ್ರ ಬೆಳವಾಡಿ, ಸಂತೋಷ್ ಕೋಟ್ಯಾನ್, ರಾಜೇಶ್, ಕೆ.ಪಿ. ವೆಂಕಟೇಶ್, ಸಚಿನ್ ಗೌಡ, ಜೀವನ್ ರಂಗನಾಥ್, ಕಬೀರ್, ಕೌಶಿಕ್, ಪುಣ್ಯಪಾಲ್, ನರೇಂದ್ರ, ಚಂಪಾ ಜಗದೀಶ್, ಭವ್ಯಾ ನಟೇಶ್, ಸಂಗೀತಾ ಪ್ರಸಾದ್, ಕಿಟ್ಟಿ, ರವಿ ಸೇರಿದಂತೆ 15 ರಿಂದ 20 ಕಾರ್ಯಕರ್ತರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ಈ ಕುರಿತು ಪೊಲೀಸರು ಮುಂದಿನ ತನಿಖೆ ಮುಂದುವರಿಸಿದ್ದಾರೆ.