ವಿಧಾನ ಪರಿಷತ್ ಸದಸ್ಯೆಯಾಗಿ ಗಾಯತ್ರಿ ಶಾಂತೇಗೌಡ ಇಂದು ಪ್ರಮಾಣವಚನ
ಚಿಕ್ಕಮಗಳೂರು: ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ವಿಧಾನ ಪರಿಷತ್ತಿಗೆ ನಡೆದ ಚುನಾವಣೆಯ ತೀವ್ರ ಕುತೂಹಲ ಮೂಡಿಸಿದ್ದ ಕಾನೂನು ಹೋರಾಟದಲ್ಲಿ ಕಾಂಗ್ರೆಸ್ ನ ಗಾಯತ್ರಿ ಶಾಂತೇಗೌಡ 9 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದನ್ನು ಹೈಕೋರ್ಟ್ ಹಾಗೂ ಸರ್ವೋಚ್ಚ ನ್ಯಾಯಾಲಯದ ನಿರ್ದೇಶನದಂತೆ ನಡೆದ ಮರು ಮತ ಎಣಿಕೆಯಲ್ಲಿ ಅಧಿಕೃತವಾಗಿ ಎತ್ತಿಹಿಡಿಯಲಾಗಿತ್ತು, ಹೀಗಾಗಿ ಇಂದು (ಆ.7) ಅವರು ಬೆಂಗಳೂರಿನಲ್ಲಿ ಅವರು ವಿಧಾನ ಪರಿಷತ್ ಸದಸ್ಯೆಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.
ಬಿಜೆಪಿಯ ಎಂ.ಕೆ. ಪ್ರಾಣೇಶ್ ವಿರುದ್ಧ ನಡೆದ ಈ ಸುದೀರ್ಘ ಕಾನೂನು ಹೋರಾಟದಲ್ಲಿ ಹೈಕೋರ್ಟ್ ನೀಡಿದ ಮಹತ್ವದ ಆದೇಶದ ಬಳಿಕ, 9 ಮತಗಳ ಅಂತರದಿಂದ ಗಾಯತ್ರಿ ಶಾಂತೇಗೌಡ ಜಯಭೇರಿ ಬಾರಿಸಿದ್ದರು. ಈ ಮೂಲಕ ಚಿಕ್ಕಮಗಳೂರು ಕ್ಷೇತ್ರದಿಂದ ಮೇಲ್ಮನೆ ಪ್ರತಿನಿಧಿಸುವ ಅವರ ಹಾದಿ ಅಧಿಕೃತವಾಗಿ ಸುಗಮವಾಗಿದೆ.
ಗಾಯತ್ರಿ ಶಾಂತೇಗೌಡ ವಿಧಾನಪರಿಷತ್ ಸದಸ್ಯೆಯಾಗಿ ಪ್ರಮಾಣವಚನ ಸ್ವೀಕರಿಸುವ ಮುನ್ನವೇ ರಾಜ್ಯ ಸಚಿವ ಸಂಪುಟ ವಿಸ್ತರಣೆಯ ಪಟ್ಟಿಯಲ್ಲಿ ಅವರ ಹೆಸರು ಘೋಷಣೆಯಾಗಿ ಅಚ್ಚರಿಗೆ ಕಾರಣವಾಗಿತ್ತು. ಆದರೆ ರಾಜಕೀಯದ ಕ್ಷಿಪ್ರ ಬೆಳವಣಿಗೆಗಳಿಂದಾಗಿ ಅಂತಿಮ ಹಂತದಲ್ಲಿ ಅವರ ಹೆಸರು ಕೈಬಿಡಲಾಗಿತ್ತು.