×
Ad

ಚಿಕ್ಕಮಗಳೂರು ಜಿಲ್ಲಾದ್ಯಂತ ಭಾರೀ ಮಳೆ: ಮೂಡಿಗೆರೆಯ ಕೆಳಗೂರು ಬಳಿ ರಸ್ತೆಗೆ ಮರ ಉರುಳಿ ವಾಹನ ಸಂಚಾರ ಸ್ಥಗಿತ

Update: 2026-05-16 19:16 IST

ಚಿಕ್ಕಮಗಳೂರು : ಜಿಲ್ಲಾದ್ಯಂತ ಶನಿವಾರ ಸಂಜೆ ಭಾರೀ ಮಳೆಯಾಗಿದೆ. ಬಂಗಾಳಕೊಲ್ಲಿಯಲ್ಲಿ ಉಂಟಾದ ವಾಯುಭಾರ ಕುಸಿತದಿಂದ ರಾಜ್ಯದ ಹಲವೆಡೆ ಇಂದು ಧಾರಾಕಾರ ಮಳೆಯಾಗಿದ್ದು, ಕಾಫಿನಾಡಿನಲ್ಲೂ ಮಳೆಯ ಆರ್ಭಟ ಜೋರಾಗಿತ್ತು. ದಿಢೀರ್ ಸುರಿದ ಭಾರೀ ಮಳೆಯಿಂದಾಗಿ ಮಲೆನಾಡು ಭಾಗದಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿತ್ತು.

ಶನಿವಾರ ಸಂಜೆ ಜಿಲ್ಲೆಯ ಹಲವು ಭಾಗಗಳಲ್ಲಿ ಬಿರುಗಾಳಿ ಸಹಿತ ಧಾರಾಕಾರ ಮಳೆಯಾಗಿದ್ದು, ಅಲ್ಲಲ್ಲಿ ಮರಗಳು, ವಿದ್ಯುತ್ ಕಂಬಗಳು ಧರೆಗುರುಳಿವೆ. ವಿದ್ಯುತ್ ಮಾರ್ಗಗಳು ತುಂಡಾಗಿರುವ ಪರಿಣಾಮ ಮಲೆನಾಡು ಭಾಗದ ಹಲವಾರು ಗ್ರಾಮಗಳಿಗೆ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ.

ಇಂದು ಬೆಳಗ್ಗೆಯಿಂದಲೇ ಮೋಡಕವಿದ ವಾತಾವರಣವಿತ್ತು ಸಂಜೆ ದಿಢೀರ್ ಸುರಿದ ಮಳೆಯಿಂದ ಜನಜೀವನ ಅಸ್ತವ್ಯಸ್ತಗೊಂಡಿತ್ತು. ಚಿಕ್ಕಮಗಳೂರು, ಆಲ್ದೂರು, ಮೂಡಿಗೆರೆ, ಬಣಕಲ್, ಗೋಣಿಬೀಡು, ಕಳಸ, ಬಾಳೆಹೊನ್ನೂರು, ಶೃಂಗೇರಿ, ಕೊಪ್ಪ, ಎನ್.ಆರ್.ಪುರ, ಚಾರ್ಮಾಡಿ ಘಾಟ್ ಸುತ್ತಮುತ್ತ ವ್ಯಾಪಕವಾದ ಮಳೆಯಾಗಿದೆ.

ಮಳೆ ಮತ್ತು ಗಾಳಿಯಿಂದ ಅನೇಕ ಕಡೆ ಮರಗಳು ಧರೆಗುರುಳಿವೆ. ಚಿಕ್ಕಮಗಳೂರು ಮೂಡಿಗೆರೆ ರಸ್ತೆಯ ಕೆಳಗೂರು ಸಮೀಪ ಬೃಹತ್ ಗಾತ್ರದ ಮರವೊಂದು ಧರೆಗುರುಳಿದ್ದು, ಜೊತೆಗೆ ಅನೇಕ ಸಣ್ಣಪುಟ್ಟ ಮರಗಳು ರಸ್ತೆ ಮೇಲೆ ಉರುಳಿ ಬಿದ್ದಿವೆ. ಇದರಿಂದ ರಸ್ತೆ ಸಂಚಾರ ಸ್ಥಗಿತಗೊಂಡಿದೆ. ಮರತೆರವು ಕಾರ್ಯಾಚರಣೆ ಭರದಿಂದ ಸಾಗಿದೆ. ರಸ್ತೆಯ ಎರಡು ಬದಿಯಲ್ಲಿ ನೂರಾರು ವಾಹನಗಳು ಸಾಲುಗಟ್ಟಿ ನಿಂತಿವೆ. ಮೂಡಿಗೆರೆ ಚಿಕ್ಕಮಗಳೂರು ನಡುವೆ ಸಂಚರಿಸುವ ವಾಹನಗಳನ್ನು ಹಾಂದಿ ಆಲ್ದೂರು, ವಸ್ತಾರೆ ಮೂಲಕ ಕಳುಹಿಸಲಾಗುತ್ತಿದೆ. ಹಲವು ವಿದ್ಯುತ್ ಕಂಬಗಳು ನೆಲಕ್ಕೆ ಉರುಳಿದ್ದು ವಿದ್ಯುತ್ ಕಡಿತ ಉಂಟಾಗಿದೆ.

ಚಾರ್ಮಾಡಿ ಘಾಟ್, ಕೊಟ್ಟಿಗೆಹಾರ, ಬಣಕಲ್ ವ್ಯಾಪ್ತಿಯಲ್ಲಿ ಅತೀ ಹೆಚ್ಚು ಮಳೆಯಾಗಿದ್ದು, ಭಾರೀ ಮಳೆಯಿಂದಾಗಿ ಚಾರ್ಮಡಿ ಘಾಟ್ ಹೆದ್ದಾರಿಯಲ್ಲಿ ವಾಹನಗಳ ಸಂಚಾರಕ್ಕೆ ತೊಂದರೆಯಾಗಿತ್ತು. ಧಟ್ಟ ಮಂಜು ಘಾಟ್ ಉದ್ದಕ್ಕೂ ವ್ಯಾಪಿಸಿದ್ದರಿಂದ ವಾಹನ ಸವಾರರು ಪರದಾಡುವ ಪರಿಸ್ಥಿತಿ ಉಂಟಾಗಿತ್ತು.

ಮೂಡಿಗೆರೆ ತಾಲೂಕಿನ ಗಾಳಿಗಂಡಿ ಗ್ರಾಮದಲ್ಲಿ ಭಾರೀ, ಗಾಳಿ ಪರಿಣಾಮ ಜಹೀರ್ ಎಂಬವರ ಗೊಬ್ಬರದ ಗೋದಾಮಿನ ಸೀಟುಗಳ ಹಾರಿ ಹೋಗಿದ್ದು, ಹಾನಿಯಾಗಿದೆ. ಗೋದಾಮಿನಲ್ಲಿ ಸಂಗ್ರಹಿಸಿಟ್ಟಿದ್ದ ಗೊಬ್ಬರ ಮಳೆ ನೀರು ಬಿದ್ದು ಅಪಾರ ಹಾನಿ ಸಂಭವಿಸಿದೆ.

ಶನಿವಾರ ಸಂಜೆ ಸುಮಾರು ನಾಲ್ಕರಿಂದ ಐದು ಗಂಟೆಯ ಸಮಯದಲ್ಲಿ ಸುರಿದ ಮಳೆಯಿಂದ ಭೂಮಿ ತಂಪಾಗಿದ್ದು, ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ. ಇನ್ನೂ ಎರಡು ದಿನ ಮಲೆನಾಡು ಭಾಗದಲ್ಲಿ ವ್ಯಾಪಕ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ.

ಚಿಕ್ಕಮಗಳೂರು ನಗರ ಸೇರಿದಂತೆ ತಾಲೂಕಿನಾದ್ಯಂತ ಶನಿವಾರ ಉತ್ತಮ ಮಳೆಯಾಗಿದ್ದು, ಭಾರೀ ಮಳೆಯಿಂದಾಗಿ ನಗರದಲ್ಲಿ ವಾಹನಗಳ ಸಂಚಾರಕ್ಕೆ ತೊಂದರೆಯಾಗಿತ್ತು. ಜಿಲ್ಲೆಯ ಬಯಲು ಭಾಗವಾದ ಕಡೂರು, ತರೀಕೆರೆ, ಅಜ್ಜಂಪುರ ತಾಲೂಕುಗಳ ವ್ಯಾಪ್ತಿಯಲ್ಲೂ ಶನಿವಾರ ಉತ್ತಮ ಮಳೆಯಾದ ಬಗ್ಗೆ ವರದಿಯಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News