ಮೂಡಿಗೆರೆ : ಕಾಡಾನೆಗಳ ಹಾವಳಿಯಿಂದ ಈಗಾಗಲೇ ಕಾಫಿ ತೋಟಗಳು ನಾಶವಾಗಿ, ರೈತರು, ಬೆಳೆಗಾರರು ಸಂಕಷ್ಟ ಅನುಭವಿಸುತ್ತಿದ್ದಾರೆ. ಬೇಲೂರಿನಿಂದ ತಾಲೂಕಿಗೆ ಬಂದ ಕಾಡಾನೆಗಳನ್ನು ಬಂದ ದಾರಿಯಲ್ಲಿ ವಾಪಾಸು ಅಟ್ಟಬೇಕು. ರಾಜ್ಯ ಸರಕಾರ ಭದ್ರ ಅಭಯಾರಣ್ಯಕ್ಕೆ ಕಾಡಾನೆಗಳನ್ನು ಅಟ್ಟುವ ನಿರ್ಧಾರ ಕೈ ಬಿಡಬೇಕೆಂದು ಆಗ್ರಹಿಸಿ ಬುಧವಾರ ನಡೆಸಿದ ಮೂಡಿಗೆರೆ ಬಂದ್ ಯಶಸ್ವಿಯಾಗಿದೆ.

ಬೆಳಿಗ್ಗೆ 6 ರಿಂದ ಬಂದ್ ಪ್ರಕ್ರಿಯೆ ಆರಂಭವಾಗಿ ಸಂಜೆಯವರೆಗೂ ಮುಂದುವರೆಯಿತು. ಪಟ್ಟಣದ ಬಹುತೇಕ ಎಲ್ಲಾ ಶಾಲೆ-ಕಾಲೇಜಿಗೆ ರಜೆ ಘೋಷಿಸಲಾಗಿತ್ತು. ಆಟೊಗಳು ರಸ್ತೆಗಿಳಿಯಲಿಲ್ಲ. ವಕೀಲರು ಕಲಾಪದಲ್ಲಿ ಪಾಲ್ಗೊಳ್ಳದೆ ನ್ಯಾಯಾಲಯದಿಂದ ಮೆರವಣಿಗೆ ನಡೆಸಿ ಪ್ರತಿಭಟನೆಗೆ ಕೈ ಜೋಡಿಸಿದರು. ಪಟ್ಟಣದಲ್ಲಿ ವ್ಯಾಪಕ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.

ಆರಂಭದಲ್ಲಿ ಪಶ್ಚಿಮ ವಲಯ ಐಜಿಪಿ ಶಶಿಕುಮಾರ್, ಎಸ್‍ಪಿ ಜಿತೇಂದ್ರ ಕುಮಾರ್ ದಯಾಮ ಅವರು ಸ್ಥಳಕ್ಕೆ ಭೇಟಿ ನೀಡಿ ಬಂದೋಬಸ್ತ್ ವ್ಯವಸ್ಥೆ ಪರಿಶೀಲಿಸಿ ಪ್ರತಿಭಟನಾಕಾರರೊಂದಿಗೆ ಚರ್ಚಿಸಿದರು. ಸುಮಾರು 1 ಗಂಟೆ ಮೂಡಿಗೆರೆ-ಕಡೂರು ರಾಷ್ಟ್ರೀಯ ಹೆದ್ದಾರಿ 173 ತಡೆದು ಪ್ರತಿಭಟನೆ ನಡೆಸಲಾಯಿತು. ಆನೆಗಳಿಂದ ಧ್ವಂಸಗೊಂಡ ಕಾಫಿ ಮತ್ತು ಅಡಿಕೆ ಗಿಡಗಳನ್ನು ತಂದು ರಸ್ತೆಯಲ್ಲಿಟ್ಟು ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಶಿವಲಿಂಗೇಗೌಡ ಅವರ ಭಾವಚಿತ್ರಕ್ಕೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನಾ ಸ್ಥಳಕ್ಕೆ ಡಿಸಿಎಫ್ ಭೇಟಿ ನೀಡುವವರೆಗೂ ಕದಲುವುದಿಲ್ಲ ಎಂದು ಪಟ್ಟು ಹಿಡಿದರು. ನಂತರ ಪೊಲೀಸರು ರಸ್ತೆ ತಡೆ ಕೈಬಿಡುವಂತೆ ಮನವೊಲಿಸಿದಾಗ, ಅರಣ್ಯ ಇಲಾಖೆ ಕಚೇರಿಗೆ ಮುತ್ತಿಗೆ ಹಾಕಲು ಹೊರಟರು. ಬಳಿಕ ಡಿಸಿಎಫ್ ಬೋರಯ್ಯ ಸ್ಥಳಕ್ಕೆ ಭೇಟಿ ನೀಡಿ ಮನವಿ ಸ್ವೀಕರಿಸಿದರು. ನಂತರ ಮಾತನಾಡಿ, ಬೆಂಗಳೂರಿನಲ್ಲಿ ಸಚಿವರು, ಶಾಸಕರು ಮತ್ತು ಹಿರಿಯ ಅಧಿಕಾರಿಗಳ ಸಭೆ ನಡೆಯುತ್ತದೆ. ಅಲ್ಲಿ ತೀರ್ಮಾನವಾಗುವವರೆಗೂ ಕಾಡಾನೆ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿದೆ ಎಂದು ಹೇಳಿದರು.

ಪ್ರತಿಭಟನಾ ಸ್ಥಳದಲ್ಲಿ ಮಾಜಿ ಉಪಸಭಾಪತಿ ಎಂ.ಕೆ.ಪ್ರಾಣೇಶ್ ಮಾತನಾಡಿ, ತಾಲೂಕಿನ ಜನ ತಾಳ್ಮೆ ವಹಿಸಿದ್ದಾರೆ. ಅದನ್ನು ಪರೀಕ್ಷಿಸಬೇಡಿ, ನಿಮ್ಮ ಪರಿಹಾರ ನಮಗೆ ಅಗತ್ಯವಿಲ್ಲ. ಕಾಡಾನೆಗಳನ್ನು ನಾಗರಹೊಳೆ ಅಥವಾ ಬಂಡೀಪುರ ಅರಣ್ಯಕ್ಕೆ ಓಡಿಸುವ ತೀರ್ಮಾನ ಕೈಗೊಳ್ಳಬೇಕು. ಶಾಸಕಿ ನಯನಾ ಮೋಟಮ್ಮ ರಾಜೀನಾಮೆ ನೀಡಿ ಜನರಿಂದ ಸಿಂಪತಿ ಗಿಟ್ಟಿಸಿಕೊಳ್ಳಲು ಯತ್ನಿಸಿ ಜನರ ದಿಕ್ಕುತಪ್ಪಿಸಲು ಹೊರಟಿದ್ದಾರೆ. ಆಡಳಿತ ಪಕ್ಷ ಶಾಸಕರಿಗೆ ಸರಕಾರದ ಮಟ್ಟದಲ್ಲಿ ಸಾಮಥ್ರ್ಯವಿರುತ್ತದೆ. ಅದನ್ನು ಬಳಸಿಕೊಂಡು ಕಾಡಾನೆ ಹಾವಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕಿತ್ತು ಎಂದು ಹೇಳಿದರು.

ಜೆಡಿಎಸ್ ಜಿಲ್ಲಾಧ್ಯಕ್ಷ ರಂಜನ್ ಅಜಿತ್ ಕುಮಾರ್ ಮಾತನಾಡಿ, ಈಗ ಕಾಫಿ ಕೊಯ್ಲು ಸಮಯ. ಗೌತಹಳ್ಳಿ ಮತ್ತು ಬಾರದಹಳ್ಳಿ ಸುತ್ತಮುತ್ತಲಿನ ಗ್ರಾಮದಲ್ಲಿ ಕಾಡಾನೆಗಳಿಂದ ಬೆಳೆ ಸಂಪೂರ್ಣ ನಾಶವಾಗುತ್ತಿದೆ. ಆಟೋ ಚಾಲಕರು ಆ ಭಾಗಕ್ಕೆ ಬಾಡಿಗೆ ಹೋಗಲಾಗುತ್ತಿಲ್ಲ. ಮಕ್ಕಳು ಶಾಲೆಗೆ ತೆರಳಲು ಸಾಧ್ಯವಾಗುತ್ತಿಲ್ಲ. ಇಂತಹ ಗಂಭೀರ ಸಮಸ್ಯೆ ಬಗ್ಗೆ ಚಿಂತಿಸದೇ ಮಾನವೀಯತೆ ಮರೆತಿರುವ ಸಚಿವ ಶಿವಲಿಂಗೇಗೌಡ ಅವರನ್ನು ಸಚಿವ ಸ್ಥಾನದದಿಂದ ವಜಾಗೊಳಿಸಬೇಕು. ಶಾಸಕಿ ನಯನಾ ಮೋಟಮ್ಮ ರಾಜೀನಾಮೆ ನೀಡಿ ಹೈಡ್ರಾಮ ಮಾಡುವ ಬದಲು ನಮ್ಮ ಹೋರಾಟಕ್ಕೆ ಕೈಜೋಡಿಸಬೇಕಿತ್ತು ಎಂದು ಹೇಳಿದರು.

ಪಪಂ ಮಾಜಿ ಅಧ್ಯಕ್ಷ ಪಿ.ಜಿ.ಅನುಕುಮಾರ್ ಮಾತನಾಡಿದರು.

ಪ್ರತಿಭಟನೆಯಲ್ಲಿ ವಿವಿಧ ಪಕ್ಷದ ಮುಖಂಡರಾದ ಜೆ.ಎಸ್.ರಘು, ಕೆ.ಸಿ.ರತನ್, ಜಾಕಿರ್ ಹುಸೇನ್, ಭರತ್ ಬಾಳೂರು, ಎಂ.ಸಿ.ಹೂವಪ್ಪ, ಡಿ.ಎಸ್.ರಮೇಶ್‍ಗೌಡ, ಬಿ.ಸಿ.ದಯಾಕರ್, ಗಬ್ಬಳ್ಳಿ ಚಂದ್ರೇಗೌಡ, ವಿಜಯ್‍ಕುಮಾರ್, ವಿಭಾ ಸುಷ್ಮಾ, ವಿಕ್ರಂ ಬಣಕಲ್, ಟಿ.ಎಂ.ಗಜೇಂದ್ರ, ಹಾಲಪ್ಪಗೌಡ, ಸಿ.ಆರ್.ನೇಮರಾಜ್, ಎಲ್.ಬಿ.ರಮೇಶ್, ಸಂಜಯ್ ಕೊಟ್ಟಿಗೆಹಾರ, ಯು.ಪಿ.ಜಗದೀಶ್, ದೀಪಕ್ ದೊಡ್ಡಯ್ಯ, ಡಿ.ಕೆ.ಲಕ್ಷ್ಮಣ್‍ಗೌಡ, ಜಕರಿಯ ಜಾಕಿರ್, ಬ್ರಿಜೇಶ್ ಕಡಿದಾಳ್, ವಕೀಲರಾದ, ವಕೀಲ ರಘು, ಡಿ.ಕೆ.ಪ್ರಸನ್ನಕುಮಾರ್, ಮಂಜುನಾಥ್ ಬೆಟ್ಟಗೆರೆ ಮತ್ತಿತರರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಕೆ.ಎಲ್.ಶಿವು/ವಾರ್ತಾಭಾರತಿ

contributor

ಶಿವ ಕೆ.ಎಲ್ ಇವರು ಕಳೆದ 15 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಮೂಲತಃ ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕು ಕೋಣೇಬೈಲು ಗ್ರಾಮದವರಾದ ಇವರು ಹಲವು ದಿನ ಪತ್ರಿಕೆ ಮತ್ತು ದೃಶ್ಯ ಮಾಧ್ಯಮಗಳಲ್ಲಿ ಕೆಲಸ ಮಾಡಿದ್ದಾರೆ. ಕಳೆದ 10 ವರ್ಷಗಳಿಂದ ವಾರ್ತಾಭಾರತಿ ದಿನ ಪತ್ರಿಕೆಯ ಚಿಕ್ಕಮಗಳೂರು ಜಿಲ್ಲಾ ವರದಿಗಾರರಾಗಿ ಕೆಲಸ ಮಾಡುತ್ತಿದ್ದಾರೆ. ಪ್ರವಾಸಿ ತಾಣಗಳು ಮತ್ತು ಜನರ ಸಮಸ್ಯೆಗಳ ಬಗ್ಗೆ ವಿಶೇಷ ಲೇಖನಗಳನ್ನು ಬರೆಯುವುದು ಇವರ ಹವ್ಯಾಸವಾಗಿದೆ.