Photo Credit : NDTV 

ಟ್ರೇಡ್ ಟ್ರ್ಯಾಕರ್ ಸ್ಯಾಕ್ನಿಲ್ಕ್ ನೀಡಿರುವ ಮಾಹಿತಿಯ ಪ್ರಕಾರ, ಪ್ರಸ್ತುತ ಮಾರಾಟಕ್ಕೆ ಲಭ್ಯವಿರುವ ಎಲ್ಲಾ ದಿನಾಂಕಗಳ ಪ್ರದರ್ಶನಗಳಿಗೆ ಸಂಬಂಧಿಸಿದಂತೆ ಈಗಾಗಲೇ ರೂ. 45.96 ಕೋಟಿ ಮೌಲ್ಯದ ಟಿಕೆಟ್ ಗಳು ಮಾರಾಟವಾಗಿವೆ.

ನಿತೀಶ್ ತಿವಾರಿ ನಿರ್ದೇಶನದಲ್ಲಿ ಕನ್ನಡದ ನಟ ಯಶ್ ರಾವಣನ ಪಾತ್ರದಲ್ಲಿ ನಟಿಸಿರುವ ಪ್ರಮುಖ ಸಿನಿಮಾ ‘ರಾಮಾಯಣ’ದ ಮೊದಲ ಭಾಗ ಬಿಡುಗಡೆಗೆ ಇನ್ನೂ ಮೂರು ದಿನಗಳು ಬಾಕಿ ಇರುವಾಗಲೇ ಭಾರತದಲ್ಲಿ ಮುಂಗಡ ಬುಕಿಂಗ್ ಮೂಲಕ ರೂ. 50 ಕೋಟಿ ಗಳಿಕೆಯತ್ತ ಮುನ್ನುಗ್ಗುತ್ತಿದೆ. ಸಿನಿಮಾದಲ್ಲಿ ರಣ್ಬೀರ್ ಕಪೂರ್ ಶ್ರೀರಾಮನ ಪಾತ್ರದಲ್ಲಿ ಹಾಗೂ ಸಾಯಿ ಪಲ್ಲವಿ ಸೀತಾಮಾತೆಯ ಪಾತ್ರದಲ್ಲಿ ನಟಿಸಿದ್ದಾರೆ.

ಮಾಧ್ಯಮಗಳಲ್ಲಿ ವರದಿಯಾಗಿರುವಂತೆ, ಟ್ರೇಡ್ ಟ್ರ್ಯಾಕರ್ ಸ್ಯಾಕ್ನಿಲ್ಕ್ ನೀಡಿರುವ ಮಾಹಿತಿಯ ಪ್ರಕಾರ, ಪ್ರಸ್ತುತ ಮಾರಾಟಕ್ಕೆ ಲಭ್ಯವಿರುವ ಎಲ್ಲಾ ದಿನಾಂಕಗಳ ಪ್ರದರ್ಶನಗಳಿಗೆ ಸಂಬಂಧಿಸಿದಂತೆ ಈಗಾಗಲೇ ರೂ. 45.96 ಕೋಟಿ ಮೌಲ್ಯದ ಟಿಕೆಟ್ ಗಳು ಮಾರಾಟವಾಗಿವೆ. ಈ ಮೊತ್ತದಲ್ಲಿ ‘ಬ್ಲಾಕ್’ ಮಾಡಲಾಗಿರುವ ಸೀಟುಗಳ ಮೌಲ್ಯವೂ ಸೇರಿದೆ. ‘ಬ್ಲಾಕ್’ ಮಾಡಲಾಗಿರುವ ಸೀಟುಗಳನ್ನು ಹೊರತುಪಡಿಸಿದರೆ ಈ ಮೊತ್ತ ರೂ. 36.85 ಕೋಟಿಯಷ್ಟಿದೆ.

ನವೆಂಬರ್ 5ರಂದು ಸಿನಿಮಾ ಬಿಡುಗಡೆಯಾಗಲಿದೆ. ನವೆಂಬರ್ 2ರ ಹೊತ್ತಿಗೆ ‘ರಾಮಾಯಣ’ ಸಿನಿಮಾ 527 ನಗರಗಳಲ್ಲಿರುವ 1,708 ಚಿತ್ರಮಂದಿರಗಳಲ್ಲಿ 35,697 ಪ್ರದರ್ಶನಗಳಿಗೆ ಒಟ್ಟು 11.01 ಲಕ್ಷ ಟಿಕೆಟ್ ಗಳನ್ನು ಮಾರಾಟ ಮಾಡಿದೆ. ಮುಂಗಡ ಬುಕಿಂಗ್ ನಲ್ಲಿನ ಆಕ್ಯುಪೆನ್ಸಿ ಶೇ. 14ರಷ್ಟಿದೆ. ಇದರಲ್ಲಿ 75 ಪ್ರದರ್ಶನಗಳು ಹೌಸ್ಫುಲ್ ಆಗಿದ್ದರೆ, 13 ಪ್ರದರ್ಶನಗಳ ಎಲ್ಲಾ ಟಿಕೆಟ್ ಗಳು ಮಾರಾಟವಾಗಿವೆ.

ಬಿಡುಗಡೆಯ ಮೊದಲ ದಿನದ ಪ್ರದರ್ಶನಗಳಿಗೆ ಅತಿ ಹೆಚ್ಚು ಬೇಡಿಕೆಯಿದೆ. ನವೆಂಬರ್ 5ರಂದು ಗುರುವಾರ ಬಿಡುಗಡೆಯಾಗಲಿರುವ ಸಿನಿಮಾದ ಮೊದಲ ದಿನದ ಪ್ರದರ್ಶನಗಳಿಗೆ, ಬ್ಲಾಕ್ ಮಾಡಲಾದ ಸೀಟುಗಳನ್ನೂ ಒಳಗೊಂಡಂತೆ ರೂ. 25.39 ಕೋಟಿ ಮೌಲ್ಯದ ಮುಂಗಡ ಬುಕಿಂಗ್ ನಡೆದಿದೆ. ಈ ಸೀಟುಗಳ ಮೌಲ್ಯವನ್ನು ಹೊರತುಪಡಿಸಿದರೆ ಮೊತ್ತ ರೂ. 21.30 ಕೋಟಿಯಷ್ಟಿದೆ.

‘ರಾಮಾಯಣ’ದ ಮುಂಗಡ ಬುಕಿಂಗ್ ನಲ್ಲಿ ದಿಲ್ಲಿ ಎನ್ಸಿಆರ್ ಮುಂಚೂಣಿಯಲ್ಲಿದೆ. ಮಹಾರಾಷ್ಟ್ರ ಮತ್ತು ಕರ್ನಾಟಕ ನಂತರದ ಸ್ಥಾನಗಳಲ್ಲಿವೆ. ದಿಲ್ಲಿ ನ್ಯಾಷನಲ್ ಕ್ಯಾಪಿಟಲ್ ರೀಜನ್ ‘ರಾಮಾಯಣ’ ಸಿನಿಮಾಗೆ ಅತಿ ದೊಡ್ಡ ಮಾರುಕಟ್ಟೆಯಾಗಿ ಹೊರಹೊಮ್ಮಿದೆ. ಇಲ್ಲಿ ಬ್ಲಾಕ್ ಮಾಡಲಾದ ಸೀಟುಗಳನ್ನೂ ಸೇರಿಸಿ ರೂ. 6.78 ಕೋಟಿ ಮೌಲ್ಯದ ಮುಂಗಡ ಬುಕಿಂಗ್ ನಡೆದಿದೆ. ರೂ. 6.08 ಕೋಟಿಯೊಂದಿಗೆ ಮುಂಬೈ ಎರಡನೇ ಸ್ಥಾನದಲ್ಲಿದೆ. ಬೆಂಗಳೂರು ರೂ. 5.79 ಕೋಟಿ ಮೌಲ್ಯದ ಮುಂಗಡ ಬುಕಿಂಗ್ ದಾಖಲಿಸಿದೆ. ಹೈದರಾಬಾದ್ನಲ್ಲಿ ರೂ. 2.81 ಕೋಟಿ, ಪುಣೆಯಲ್ಲಿ ರೂ. 2.17 ಕೋಟಿ ಮತ್ತು ಕೋಲ್ಕತ್ತಾದಲ್ಲಿ ರೂ. 1.68 ಕೋಟಿ ಮೌಲ್ಯದ ಮುಂಗಡ ಬುಕಿಂಗ್ ದಾಖಲಾಗಿದೆ.

ರಾಜ್ಯಮಟ್ಟದಲ್ಲಿ ಗಮನಿಸಿದರೆ, ಮಹಾರಾಷ್ಟ್ರವು ರೂ. 9.42 ಕೋಟಿಯೊಂದಿಗೆ ಮುಂಗಡ ಬುಕಿಂಗ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ನಂತರದ ಸ್ಥಾನದಲ್ಲಿರುವ ಕರ್ನಾಟಕದಲ್ಲಿ ರೂ. 7.15 ಕೋಟಿ ಮತ್ತು ದಿಲ್ಲಿಯಲ್ಲಿ ರೂ. 6.78 ಕೋಟಿ ಮೌಲ್ಯದ ಮುಂಗಡ ಬುಕಿಂಗ್ ಆಗಿದೆ. ಗುಜರಾತ್ನಲ್ಲಿ ರೂ. 3.61 ಕೋಟಿ ದಾಖಲಾಗಿದ್ದರೆ, ತೆಲಂಗಾಣದಲ್ಲಿ ರೂ. 2.93 ಕೋಟಿ ಮುಂಗಡ ಬುಕಿಂಗ್ ನಡೆದಿದೆ. ಭಾರತದಲ್ಲಿ ಒಟ್ಟು ಮುಂಗಡ ಬುಕಿಂಗ್ ಮೊತ್ತದ ಪೈಕಿ ಶೇ. 85ರಷ್ಟು ಪಾಲು ಈ ಅಗ್ರ 10 ರಾಜ್ಯಗಳಿಂದಲೇ ಬಂದಿದೆ.

ಭಾಷಾವಾರು ಮುಂಗಡ ಮಾರಾಟವನ್ನು ಗಮನಿಸಿದರೆ, ದೇಶೀಯ ಮಾರುಕಟ್ಟೆಯಲ್ಲಿ ಹಿಂದಿ ಆವೃತ್ತಿಯು ಪ್ರಾಬಲ್ಯ ಮುಂದುವರಿಸಿದೆ. ಮಾರಾಟಕ್ಕೆ ಲಭ್ಯವಿರುವ ಎಲ್ಲಾ ದಿನಾಂಕಗಳನ್ನು ಪರಿಗಣಿಸಿದರೆ, ಹಿಂದಿ ಆವೃತ್ತಿಯು ರೂ. 38.70 ಕೋಟಿ ಗಳಿಸಿದ್ದು, ಒಟ್ಟು ಮುಂಗಡ ಮಾರಾಟದ ಶೇ. 84ರಷ್ಟಿದೆ. ಕನ್ನಡ ಆವೃತ್ತಿಯ ಟಿಕೆಟ್ ಬುಕಿಂಗ್ ರೂ. 4.41 ಕೋಟಿಗೆ ತಲುಪಿದ್ದರೆ, ತೆಲುಗು ಆವೃತ್ತಿಯು ರೂ. 2.35 ಕೋಟಿ ದಾಖಲಿಸಿದೆ. ತಮಿಳು ಆವೃತ್ತಿಯ ಮುಂಗಡ ಮಾರಾಟ ರೂ. 41.66 ಲಕ್ಷದಷ್ಟಿದ್ದರೆ, ಮಲಯಾಳಂ ಆವೃತ್ತಿಯ ಬುಕಿಂಗ್ ರೂ. 8.01 ಲಕ್ಷದಷ್ಟಿದೆ.

ಅಕ್ಟೋಬರ್ 27ರಂದು ಲಾಸ್ ಏಂಜಲೀಸ್ ನ ಅಕಾಡೆಮಿ ಮ್ಯೂಸಿಯಂನ ಡೇವಿಡ್ ಗೆಫೆನ್ ಥಿಯೇಟರ್ನಲ್ಲಿ ನಡೆದ ಅದ್ದೂರಿ ವಿಶ್ವ ಪ್ರಥಮ ಪ್ರದರ್ಶನದ ಬಳಿಕ ಸಿನಿಮಾಕ್ಕೆ ಅಂತಾರಾಷ್ಟ್ರೀಯ ವೀಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹಲವಾರು ಆರಂಭಿಕ ವೀಕ್ಷಕರು ಸಿನಿಮಾವನ್ನು ಶ್ಲಾಘಿಸಿದ್ದಾರೆ. ರಾವಣ ಮತ್ತು ರಾಮನ ಪಾತ್ರಗಳ ಅಭಿನಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕತೆ ಹೇಳುವ ರೀತಿ, ವೇಗ ಮತ್ತು ಸಂಗೀತಕ್ಕೂ ಪ್ರಶಂಸೆ ವ್ಯಕ್ತವಾಗಿದೆ. ಆದರೆ, ಸುದೀರ್ಘ ಆಕ್ಷನ್ ಸನ್ನಿವೇಶಗಳು, ದ್ವಿತೀಯಾರ್ಧದ ನಿಧಾನಗತಿಯ ನಿರೂಪಣೆ ಮತ್ತು ಭಾವನೆಗಳ ಕೊರತೆ ಟೀಕೆಗೆ ಗುರಿಯಾಗಿವೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಿನಿಮಾಕ್ಕೆ ಉತ್ತಮ ರೇಟಿಂಗ್ ದೊರೆತಿದೆ.

ತಾರಾಗಣದಲ್ಲಿ ಯಶ್ ಮತ್ತು ರಣ್ಬೀರ್ ಕಪೂರ್ ಹೊರತಾಗಿ ಸಾಯಿ ಪಲ್ಲವಿ, ಸನ್ನಿ ಡಿಯೋಲ್, ರವಿ ದುಬೆ, ರಕುಲ್ ಪ್ರೀತ್ ಸಿಂಗ್, ಕಾಜಲ್ ಅಗರ್ವಾಲ್, ಲಾರಾ ದತ್ತ, ಅರುಣ್ ಗೋವಿಲ್, ವಿವೇಕ್ ಒಬೆರಾಯ್, ಇಂದಿರಾ ಕೃಷ್ಣನ್ ಮತ್ತು ಶೋಭನಾ ನಟಿಸಿದ್ದಾರೆ.

ನಿತೇಶ್ ತಿವಾರಿ ನಿರ್ದೇಶನದ ಈ ಪೌರಾಣಿಕ ಮಹಾಕಾವ್ಯವನ್ನು ನಮಿತ್ ಮಲ್ಹೋತ್ರಾ ಅವರ ಪ್ರೈಮ್ ಫೋಕಸ್ ಸ್ಟುಡಿಯೋಸ್, DNEG ಮತ್ತು ಯಶ್ ಅವರ ಮಾನ್ಸ್ಟರ್ ಮೈಂಡ್ ಕ್ರಿಯೇಷನ್ಸ್ ಸಹಯೋಗದಲ್ಲಿ ನಿರ್ಮಿಸಿವೆ. ಚಿತ್ರದ ಚಿತ್ರಕಥೆಯನ್ನು ಶ್ರೀಧರ್ ರಾಘವನ್ ಮತ್ತು ತಿವಾರಿ ಬರೆದಿದ್ದಾರೆ. ಆಸ್ಕರ್ ಪ್ರಶಸ್ತಿ ವಿಜೇತ ಸಂಗೀತ ಸಂಯೋಜಕರಾದ ಹ್ಯಾನ್ಸ್ ಜಿಮ್ಮರ್ ಮತ್ತು ಎ.ಆರ್. ರೆಹಮಾನ್ ಚಿತ್ರದ ಸಂಗೀತ ಸಂಯೋಜಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor