ʼಬ್ರೇಕಿಂಗ್ ಬ್ಯಾಡ್’ ಖ್ಯಾತಿಯ ನಟ ಆರ್ಜೆ ಮಿಟ್ಟೆ ನಿಧನ; ಹಾಲಿವುಡ್ ಸಂತಾಪ
ಹಾಲಿವುಡ್ ನಟ ಆರ್ಜೆ ಮಿಟ್ಟೆ (Photo Credit : AP)
ಜಾಗತಿಕ ಮಟ್ಟದಲ್ಲಿ ಅಪಾರ ಜನಪ್ರಿಯತೆ ಗಳಿಸಿದ್ದ ‘ಬ್ರೇಕಿಂಗ್ ಬ್ಯಾಡ್’ ಟಿವಿ ಸರಣಿಯ ಮೂಲಕ ಪ್ರಸಿದ್ಧರಾಗಿದ್ದ ಹಾಲಿವುಡ್ ನಟ ಆರ್ಜೆ ಮಿಟ್ಟೆ ಸೋಮವಾರ ನಿಧನರಾಗಿದ್ದಾರೆ. ನಟನ ನಿಧನಕ್ಕೆ ಆತ್ಮಹತ್ಯೆ ಕಾರಣ ಎಂದು ಅಮೆರಿಕದ ಪತ್ರಿಕೆಗಳು ವರದಿ ಮಾಡಿವೆ.
ಜಾಗತಿಕ ಮೆಚ್ಚುಗೆ ಪಡೆದ ‘ಬ್ರೇಕಿಂಗ್ ಬ್ಯಾಡ್’ ಟಿವಿ ಸರಣಿಯಲ್ಲಿ ಮೆಥಾಂಫೆಟಮೈನ್ ಕಿಂಗ್‌ಪಿನ್ ವಾಲ್ಟರ್ ವೈಟ್‌ನ ಮಗ ವಾಲ್ಟರ್ ವೈಟ್ ಜೂನಿಯರ್ ಪಾತ್ರದಲ್ಲಿ ನಟಿಸಿದ್ದ ನಟ ಆರ್ಜೆ ಮಿಟ್ಟೆ ಸೋಮವಾರ 34ನೇ ವಯಸ್ಸಿನಲ್ಲಿ ಟೆಕ್ಸಾಸ್ನ ಬ್ರೌನ್ಸ್ವಿಲ್ಲೆಯಲ್ಲಿ ನಿಧನರಾದರು. ಅವರ ನಿಧನದ ವಾರ್ತೆಯನ್ನು ಅವರ ಪ್ರತಿಭಾ ನಿರ್ವಹಣಾ ಸಂಸ್ಥೆ ದೃಢಪಡಿಸಿದೆ.
“ಪ್ರೀತಿಯ ನಟ, ಸಮಾಜ ಸೇವಕ ಮತ್ತು ವಿಕಲಚೇತನರ ಹಕ್ಕುಗಳ ಪರ ಧ್ವನಿ ಎತ್ತುತ್ತಿದ್ದ ಆರ್ಜೆ ಮಿಟ್ಟೆ ಅವರ ದುರಂತ ನಿಧನವನ್ನು ತೀವ್ರ ದುಃಖದಿಂದ ಹಂಚಿಕೊಳ್ಳುತ್ತೇವೆ” ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.
ನಟನ ನಿಧನಕ್ಕೆ ಆತ್ಮಹತ್ಯೆ ಕಾರಣ ಎಂದು ಅಮೆರಿಕದ ಪತ್ರಿಕೆಗಳು ವರದಿ ಮಾಡಿವೆ. ಆದರೆ ಈ ಬಗ್ಗೆ ಯಾವುದೇ ಅಧಿಕೃತ ವಿವರ ಇನ್ನೂ ಬಹಿರಂಗವಾಗಿಲ್ಲ. ಎಎಂಸಿ ವಾಹಿನಿಯ ಪ್ರಸಿದ್ಧ ‘ಬ್ರೇಕಿಂಗ್ ಬ್ಯಾಡ್’ ಸರಣಿಯಲ್ಲಿ ನಟ ಬ್ರಿಯಾನ್ ಕ್ರಾನ್ಸ್ಟನ್ ಅವರ ಪಾತ್ರದ (ವಾಲ್ಟರ್ ವೈಟ್) ಮಗನಾಗಿ ಮಿಟ್ಟೆ ಅಭಿನಯಿಸಿದ್ದರು. ಬ್ರಿಯಾನ್ ಅವರು ನಟನ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ್ದಾರೆ. ನಿಧನವಾರುವ ಕೆಲವೇ ವಾರಗಳ ಹಿಂದೆ ಒಮ್ಮೆ ಭೇಟಿಯಾಗುವ ಬಗ್ಗೆ ಮಿಟ್ಟೆ ಇಚ್ಛೆ ವ್ಯಕ್ತಪಡಿಸಿದ್ದರು ಎಂದು ಬ್ರಿಯಾನ್ ತಿಳಿಸಿದ್ದಾರೆ.
https://www.instagram.com/p/DeasvPaxoaA/?utm_source=ig_web_button_share_sheet
ನೈಜ ಜೀವನದಲ್ಲೂ ಸೆರೆಬ್ರಲ್ ಪಾಲ್ಸಿ (ಮಿದುಳಿನ ಪಾರ್ಶ್ವವಾಯು) ಸಮಸ್ಯೆಯಿಂದ ಬಳಲುತ್ತಿದ್ದ ಮಿಟ್ಟೆ, ತಮ್ಮ ವೈಯಕ್ತಿಕ ಅನುಭವವನ್ನೇ ಪಾತ್ರದಲ್ಲಿ ನಟಿಸಿ ನೈಜತೆ ಪ್ರದರ್ಶಿಸಿದ್ದರು. ಸರಣಿಯ ಆರಂಭದಲ್ಲಿ ತಂದೆಯನ್ನು ಇಷ್ಟಪಡುವ ಮುಗ್ಧ ಹದಿಹರೆಯದ ಹುಡುಗನಾಗಿ ಮತ್ತು ನಂತರ ಕುಟುಂಬದ ವಿಘಟನೆಯನ್ನು ಎದುರಿಸುವ ಮಗನಾಗುವ ಅವರು ನೀಡಿದ ಅಭಿನಯ ವಿಮರ್ಶಕರ ಮೆಚ್ಚುಗೆಗೆ ಪಾತ್ರವಾಗಿತ್ತು. ಪಾತ್ರವು ಊರುಗೋಲನ್ನು ಬಳಸುತ್ತದೆ. ಮತ್ತು ಮಾತಿನ ದೌರ್ಬಲ್ಯವನ್ನು ಹೊಂದಿದೆ. ಮಿಟ್ಟೆ ನಿಜ ಜೀವನದಲ್ಲೂ ಈ ಸಮಸ್ಯೆಗಳನ್ನು ಎದುರಿಸಿದ್ದರು.
ನಟನೆಯ ಹೊರತಾಗಿ ಮಿಟ್ಟೆ ಅಂಗವಿಕಲರ ಪರವಾಗಿ ಧ್ವನಿ ಎತ್ತಿದ್ದರು. ಸೆರೆಬ್ರಲ್ ಪಾಲ್ಸಿ ಮತ್ತು ಸ್ನಾಯು ನಿಯಂತ್ರಣದ ಮೇಲೆ ಪರಿಣಾಮ ಬೀರುವ ಇತರ ಅಸ್ವಸ್ಥತೆಗಳಿಗೆ ಜಾಗೃತಿ ಮತ್ತು ಹಣವನ್ನು ಸಂಗ್ರಹಿಸುವತ್ತ ಗಮನಹರಿಸಿದ ಹಲವಾರು ಸಮಾಜಸೇವಾ ಸಂಸ್ಥೆಗಳನ್ನು ಬೆಂಬಲಿಸಿದ್ದರು. ‘ಸ್ಕ್ರೀನ್ ಆಕ್ಟರ್ಸ್ ಗಿಲ್ಡ್’ನ ವಿಕಲಚೇತನ ಕಲಾವಿದರ ಅಧಿಕೃತ ವಕ್ತಾರರಾಗಿ ಮತ್ತು ಯುನೈಟೆಡ್ ಸೆರೆಬ್ರಲ್ ಪಾಲ್ಸಿ ಸಂಸ್ಥೆಯ ರಾಯಭಾರಿಯಾಗಿಯೂ ಕೆಲಸ ಮಾಡಿದ್ದಾರೆ.
1992ರಲ್ಲಿ ಮಿಸ್ಸಿಸ್ಸಿಪಿಯಲ್ಲಿ ಜನಿಸಿದ್ದ ಮಿಟ್ಟೆ ಅವರಿಗೆ 3ನೇ ವಯಸ್ಸಿನಲ್ಲಿ ಸೆರೆಬ್ರಲ್ ಪಾಲ್ಸಿ ಇರುವುದು ಪತ್ತೆಯಾಗಿತ್ತು. ವಿಮರ್ಶಕರಿಂದ ವ್ಯಾಪಕವಾಗಿ ಪ್ರಶಂಸೆಗಳಿಸಿದ್ದ ‘ಬ್ರೇಕಿಂಗ್ ಬ್ಯಾಡ್’ 2008ರಿಂದ 2013ರವರೆಗೆ ಪ್ರಸಾರವಾಯಿತು. ಇದು ಅತ್ಯುತ್ತಮ ಡ್ರಾಮಾ ಸರಣಿ ಸೇರಿದಂತೆ 16 ಎಮ್ಮಿ ಪ್ರಶಸ್ತಿಗಳನ್ನು ಗೆದ್ದುಕೊಂಡಿದೆ.
‘ಬ್ರೇಕಿಂಗ್ ಬ್ಯಾಡ್’ ಹೊರತುಪಡಿಸಿ ಅವರು ‘ಟ್ರಯಂಫ್’ ನಲ್ಲಿ ಅವರು ಸೆರೆಬ್ರಲ್ ಪಾಲ್ಸಿ ಇರುವ ಪ್ರೌಢಶಾಲಾ ಕುಸ್ತಿಪಟುವಾಗಿ ನಟಿಸಿದರು. ‘ದಿ ರಿಕಾಲ್’, ‘ದಿ ಓಕ್ ರೂಮ್’ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ನಟಿಸಿದ್ದರು. ಇತ್ತೀಚೆಗಷ್ಟೇ ತಮ್ಮ ಹೊಸ ಸಿನಿಮಾ ‘ಟಾಕಿಂಗ್ ಟು ಸ್ಟ್ರೇಂಜರ್ಸ್’ ಪ್ರಚಾರದಲ್ಲೂ ಭಾಗಿಯಾಗಿದ್ದರು.