Photo Credit : @MadrasTalkies_/X

‘ಇಂಜಿವೆಲ್ಲಂ’ ಸಿನಿಮಾದ ಮೂಲಕ ಸಾಯಿ ಪಲ್ಲವಿ ಮತ್ತು ವಿಜಯ್ ಸೇತುಪತಿ ಮೊದಲ ಬಾರಿಗೆ ತೆರೆ ಮೇಲೆ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದಾರೆ.

ಖ್ಯಾತ ನಿರ್ದೇಶಕ ಮಣಿರತ್ನಂ ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ ರೊಮ್ಯಾಂಟಿಕ್ ಕಥಾಹಂದರದ ‘ಇಂಜಿವೆಲ್ಲಂ’ ಸಿನಿಮಾ ಬಿಡುಗಡೆಗೆ ದಿನಾಂಕ ನಿಗದಿಯಾಗಿದೆ. ವಿಜಯ್ ಸೇತುಪತಿ ಮತ್ತು ಸಾಯಿ ಪಲ್ಲವಿ ಮುಖ್ಯ ತಾರಾಗಣದಲ್ಲಿರುವ ಈ ಸಿನಿಮಾ 2027ರ ಜನವರಿ 29ರಂದು ಬಿಡುಗಡೆಯಾಗಲಿದೆ. ಮೋಷನ್ ಪೋಸ್ಟರ್ ಹಂಚಿಕೊಳ್ಳುವ ಮೂಲಕ ಚಿತ್ರತಂಡ ಸಿನಿಮಾದ ಫಸ್ಟ್ಲುಕ್ ಪರಿಚಯಿಸಿದೆ.

ಈ ಪೋಸ್ಟರ್ ನಲ್ಲಿ ಸಂತೋಷಭರಿತ ಕುಟುಂಬವೊಂದರ ದೃಶ್ಯವನ್ನು ತೋರಿಸಲಾಗಿದೆ. ವಿಜಯ್ ಸೇತುಪತಿ ಕಪ್ಪು ಬಣ್ಣದ ಟಿ-ಶರ್ಟ್ ಧರಿಸಿ ಪುಟ್ಟ ಬಾಲಕಿಯೊಬ್ಬಳನ್ನು ಎತ್ತಿಕೊಂಡು ನಗುತ್ತಿರುವುದನ್ನು ಕಾಣಬಹುದು. ಅವರ ಪಕ್ಕದಲ್ಲಿ ಸೀರೆ ಧರಿಸಿರುವ ಸಾಯಿ ಪಲ್ಲವಿ ನಿಂತಿದ್ದು, ಮತ್ತೊಬ್ಬ ಪುಟ್ಟ ಬಾಲಕಿಯನ್ನು ಹಿಡಿದುಕೊಂಡಿದ್ದಾರೆ. ಇಬ್ಬರೂ ಬಾಲಕಿಯರು ಒಂದೇ ರೀತಿಯ ಉಡುಪು ಮತ್ತು ತಲೆಯ ಪಟ್ಟಿಗಳನ್ನು ಧರಿಸಿದ್ದಾರೆ.

ಯಾವುದೇ ದೊಡ್ಡ ಘೋಷಣೆ ಮಾಡದೆ ಸದ್ದಿಲ್ಲದೆ ಚಿತ್ರೀಕರಣ ಆರಂಭಿಸಿದ್ದ ಈ ಸಿನಿಮಾದ ಕುರಿತು ಹಲವು ದಿನಗಳಿಂದ ಕುತೂಹಲ ಮೂಡಿತ್ತು. ಇದೀಗ ಬಿಡುಗಡೆಯಾಗಿರುವ ಟೈಟಲ್ ಪೋಸ್ಟರ್ನಲ್ಲಿಯೂ ಚಿತ್ರದ ಕಥಾವಸ್ತುವಿನ ಬಗ್ಗೆ ಚಿತ್ರತಂಡ ಹೆಚ್ಚಿನ ವಿವರಗಳನ್ನು ಬಹಿರಂಗಪಡಿಸಿಲ್ಲ. ಈ ಸಿನಿಮಾದ ಮೂಲಕ ಸಾಯಿ ಪಲ್ಲವಿ ಮತ್ತು ವಿಜಯ್ ಸೇತುಪತಿ ಮೊದಲ ಬಾರಿಗೆ ತೆರೆ ಮೇಲೆ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದಾರೆ.

ವರದಿಗಳ ಪ್ರಕಾರ, ಸಿನಿಮಾದ ಬಹುಭಾಗದ ಚಿತ್ರೀಕರಣ ಕೋಲ್ಕತ್ತಾದಲ್ಲಿ ನಡೆದಿದೆ. ಆದರೆ, ಪಾತ್ರಗಳು ಮತ್ತು ಕಥೆಯ ವಿವರಗಳನ್ನು ಗೌಪ್ಯವಾಗಿ ಇಡಲಾಗಿದೆ. ಆಸ್ಕರ್ ಪ್ರಶಸ್ತಿ ವಿಜೇತ ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ ಸಿನಿಮಾಗೆ ಸಂಗೀತ ನೀಡುತ್ತಿದ್ದಾರೆ. ಈ ಸಿನಿಮಾ ಮಣಿರತ್ನಂ ಮತ್ತು ರೆಹಮಾನ್ ಅವರ ಮತ್ತೊಂದು ಸಹಯೋಗವಾಗಿದೆ. ಹಲವು ವರ್ಷಗಳಿಂದ ಈ ಜೋಡಿ ಅನೇಕ ಸಿನಿಮಾಗಳಲ್ಲಿ ಒಟ್ಟಾಗಿ ಕೆಲಸ ಮಾಡಿ ಯಶಸ್ವಿ ಸಂಗೀತ ನೀಡಿದ್ದಾರೆ.

ಸಿನಿಮಾಗೆ ಅವಿಕ್ ಮುಖೋಪಾಧ್ಯಾಯ ಛಾಯಾಗ್ರಹಣ ಮಾಡಿದ್ದು, ಶ್ರೀಕರ್ ಪ್ರಸಾದ್ ಸಂಕಲನದ ಜವಾಬ್ದಾರಿ ನಿರ್ವಹಿಸಿದ್ದಾರೆ. ಮದ್ರಾಸ್ ಟಾಕೀಸ್ ಮತ್ತು ಲೈಕಾ ಪ್ರೊಡಕ್ಷನ್ಸ್ ಬ್ಯಾನರ್ ಗಳ ಅಡಿಯಲ್ಲಿ ಸುಭಾಸ್ಕರನ್, ಮಣಿರತ್ನಂ ಮತ್ತು ಶಿವ ಅನಂತ್ ಸಿನಿಮಾ ನಿರ್ಮಿಸುತ್ತಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor