×
Ad

Uttar Pradesh | ರಿಕ್ಷಾ ಚಾಲಕಿ ಹತ್ಯೆ: ಗುಂಡು ಹಾರಿಸಿ ಪ್ರಿಯತಮನನ್ನು ಬಂಧಿಸಿದ ಪೊಲೀಸರು

Update: 2026-01-10 21:00 IST

ಸಾಂದರ್ಭಿಕ ಚಿತ್ರ | Photo Credit : freepik

ಝಾನ್ಸಿ, ಜ. 10: ಕೆಲವು ದಿನಗಳ ಹಿಂದೆ ಆಟೊರಿಕ್ಷಾ ಚಾಲಕಿಯೊಬ್ಬರು ಝಾನ್ಸಿಯಲ್ಲಿ ಮೃತಪಟ್ಟಿದ್ದು, ಈ ಘಟನೆಗೆ ಸಂಬಂಧಿಸಿ ಪೊಲೀಸರು ರಿಕ್ಷಾ ಚಾಲಕಿಯ ಪ್ರಿಯತಮನನ್ನು ಬಂಧಿಸಿದ್ದಾರೆ. ಮಹಿಳೆಯನ್ನು ಗುಂಡು ಹಾರಿಸಿ ಕೊಲ್ಲಲಾಗಿದೆ ಎನ್ನುವುದು ಮರಣೋತ್ತರ ಪರೀಕ್ಷೆಯಲ್ಲಿ ಪತ್ತೆಯಾದ ಬಳಿಕ ಈ ಬೆಳವಣಿಗೆ ನಡೆದಿದೆ.

ರಿಕ್ಷಾವೊಂದು ಅಪಘಾತಕ್ಕೀಡಾಗಿ ಅದರ ಚಾಲಕಿ ವಾಹನವೊಂದರ ಅಡಿಗೆ ಸಿಲುಕಿ ಮೃತಪಟ್ಟಿರುವ ಬಗ್ಗೆ ಸೋಮವಾರ ಮುಂಜಾನೆ 2.30ರ ಸುಮಾರಿಗೆ ಪೊಲೀಸ್ ನಿಯಂತ್ರಣ ಕೊಠಡಿಗೆ ಮಾಹಿತಿ ಬಂದಿತ್ತು. ಪೊಲೀಸರು ಸ್ಥಳಕ್ಕೆ ತೆರಳಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದರು.

ಮೃತ ಮಹಿಳೆಯನ್ನು ದ್ವಾರಕ ಚೌಧರಿಯ ಪತ್ನಿ ಅನಿತಾ ಚೌಧರಿ ಎಂದು ಗುರುತಿಸಲಾಗಿತ್ತು. ತನ್ನ ಪತ್ನಿಯನ್ನು ಕೊಲೆಗೈದಿದ್ದಾರೆ ಎಂದು ಆರೋಪಿಸಿ ದ್ವಾರಕ ಚೌಧರಿ ಮೂವರ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದರು.

ಅನಿತಾರನ್ನು ಗುಂಡು ಹಾರಿಸಿ ಕೊಲೆಗೈಯಲಾಗಿದೆ ಎನ್ನುವುದು ಶನಿವಾರ ಬಿಡುಗಡೆಯಾದ ಮರಣೋತ್ತರ ಪರೀಕ್ಷಾ ವರದಿಯಿಂದ ತಿಳಿದುಬಂದಿದೆ. ಪೊಲೀಸರು ಮುಕೇಶ್ ಝಾ, ಅವನ ಮಗ ಶಿವಮ್ ಮತ್ತು ಭಾವ ಮನೋಜ್‌ ನನ್ನು ಬಂಧಿಸಿದ್ದಾರೆ.

ಮುಕೇಶ್ ಝಾ ಕಳೆದ 6–7 ವರ್ಷಗಳಿಂದ ಮಹಿಳೆಯೊಂದಿಗೆ ಸಂಪರ್ಕದಲ್ಲಿದ್ದನು ಹಾಗೂ ಇತ್ತೀಚಿನ ದಿನಗಳಲ್ಲಿ ಅವರ ನಡುವೆ ವೈಷಮ್ಯ ತಲೆದೋರಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಶಿವಮ್ ಮತ್ತು ಮನೋಜ್‌ನನ್ನು ಪೊಲೀಸರು ಸೋಮವಾರವೇ ಬಂಧಿಸಿದ್ದರು. ಪ್ರಧಾನ ಆರೋಪಿ ಮುಕೇಶ್ ತಪ್ಪಿಸಿಕೊಂಡಿದ್ದನು. ಶುಕ್ರವಾರ ರಾತ್ರಿ ಪೊಲೀಸರು ಮುಕೇಶ್‌ ನನ್ನು ಬಂಧಿಸಲು ಪ್ರಯತ್ನಿಸಿದಾಗ ಅವನು ಪೊಲೀಸರತ್ತ ಗುಂಡು ಹಾರಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಬಳಿಕ ಪೊಲೀಸರು ಪ್ರತಿಯಾಗಿ ಅವನ ಕಾಲಿಗೆ ಗುಂಡು ಹಾರಿಸಿ ಬಂಧಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News