Uttar Pradesh | ದಲಿತ ಯುವಕನನ್ನು ಇಟ್ಟಿಗೆಯಿಂದ ಹೊಡೆದು ಕೊಲೆ: ‘ಮರ್ಯಾದೆಗೇಡು ಹತ್ಯೆ’ ಶಂಕೆ
ಸಾಂದರ್ಭಿಕ ಚಿತ್ರ
ಲಕ್ನೋ: ದಲಿತ ಯುವಕನೊಬ್ಬನನ್ನು ಬರ್ಬರವಾಗಿ ಇಟ್ಟಿಗೆಗಳಿಂದ ಹೊಡೆದು ಹತ್ಯೆಗೈದ ಘಟನೆ ಉತ್ತರಪ್ರದೇಶದ ಮುಝಾಫರ್ನಗರದಲ್ಲಿ ನಡೆದಿದೆ. ಇದೊಂದು ‘ಮರ್ಯಾದೆಗೇಡು’ ಹತ್ಯೆ ಪ್ರಕರಣವೆಂದು ಶಂಕಿಸಲಾಗಿದ್ದು, ಆತನ ಪತ್ನಿಯ ಹಿರಿಯ ಸಹೋದರ ಸೇರಿದಂತೆ ಇಬ್ಬರನ್ನು ಬಂಧಿಸಲಾಗಿದೆ.
ಹತ್ಯೆಯಾದ ಯುವಕನನ್ನು ಬಿಹಾರಿಪುರ ಗ್ರಾಮದ ನಿವಾಸಿ, 23 ವರ್ಷ ವಯಸ್ಸಿನ ಆಕ್ಷಯ್ ಎಂದು ಗುರುತಿಸಲಾಗಿದೆ. ಆತ 20 ವರ್ಷದ ರಿಧಿಮಾ ಎಂಬಾಕೆಯ ಜೊತೆ ವಿವಾಹವಾಗಿದ್ದನು. ಆದರೆ ಪತ್ನಿಯ ಕುಟುಂಬಿಕರು ಈ ವಿವಾಹವನ್ನು ವಿರೋಧಿಸಿದ್ದಲ್ಲದೆ, ಆತನನ್ನು ಗುರಿಯಿರಿಸಿದ್ದರು. ಆನಂತರ ಈ ಜೋಡಿಯು ಒಂದು ವರ್ಷದ ಹಿಂದೆ ಊರು ತೊರೆದು, ನೊಯ್ಡಾದಲ್ಲಿ ಬಂದು ನೆಲೆಸಿತ್ತು.
ಸೋಮವಾರ ಮುಝಾಫರ್ನಗರಕ್ಕೆ ಹಿಂತಿರುಗಿದ ಅಕ್ಷಯ್, ಅಂದು ಸಂಜೆ ತನ್ನ ಬೈಕ್ನಲ್ಲಿ ಆಕಾಶ್ ಜೊತೆ ಪ್ರಯಾಣಿಸುತ್ತಿದ್ದಾಗ, ಖಟೌಲಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮುಸುಕುಧರಿಸಿ ಬೈಕ್ನಲ್ಲಿ ಬಂದ ಮೂವರು ಆರೋಪಿಗಳು , ಅಡ್ಡಗಟ್ಟಿ ಆತನ ಮೇಲೆ ಇಟ್ಟಿಗೆಗಳಿಂದ ಹಲ್ಲೆ ನಡೆಸಿದ್ದರು. ಗಂಭೀರ ಗಾಯಗೊಂಡ ಆಕ್ಷಯ್ ಮಂಗಳವಾರ ಸ್ಥಳೀಯ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು.
ಇದೊಂದು ಪೂರ್ವಯೋಜಿತ ಕೊಲೆಯಾಗಿದ್ದು, ಹಲವಾರು ಮಂದಿ ಸಂಚಿನಲ್ಲಿ ಶಾಮೀಲಾಗಿರುವ ಸಾಧ್ಯತೆಯಿದೆಯೆಂದು ಕತೌಲಿ ಪೊಲೀಸ್ ಠಾಣಾಧಿಕಾರಿ ದಿನೇಶ್ ಬಾಘೇಲ್ ಅವರು ತಿಳಿಸಿದ್ದಾರೆ. ದಾಳಿ ಸಂದರ್ಭ ಅಕ್ಷಯ್ ಜೊತೆಗಿದ್ದ ಆಕಾಶ್ ಎಂಬಾತನನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಅಕ್ಷಯ್ನ ಚಲನವಲನಗಳ ಬಗ್ಗೆ ಆತ ಹಂತಕರಿಗೆ ಮಾಹಿತಿ ನೀಡಿದ್ದನೆಂದು ಪೊಲೀಸರು ಶಂಕಿಸಿದ್ದಾರೆ.