ಮಣಿಪಾಲ: ಗರುಡ ಗ್ಯಾಂಗ್‌ ಮೇಲೆ ದಾಳಿ ನಡೆಸಲು ಮಾರಕಾಯುಧಗಳೊಂದಿಗೆ ಸಂಚು ರೂಪಿಸುತ್ತಿದ್ದ ಓರ್ವ ಆರೋಪಿಯನ್ನು ಮಣಿಪಾಲ ಪೊಲೀಸರು ಅ.24ರಂದು ಮಣಿಪಾಲ ವಿದ್ಯಾರತ್ನ ನಗರ ಸಮೀಪ ಬಂಧಿಸಿದ್ದಾರೆ.

ಕಿನ್ನಿಮುಲ್ಕಿಯ ಪರ್ವೇಝ್(26) ಬಂಧಿತ ಆರೋಪಿ‌ ಎಂದು ಪೊಲೀಸರು ತಿಳಿಸಿದ್ದಾರೆ. ಈತನಿಂದ ಕಬ್ಬಿಣದ ಲಾಂಗ್, ಕಬ್ಬಿಣದ ಚಾಕು ವಶಪಡಿಸಿಕೊಳ್ಳಲಾಗಿದೆ. ಈತ ಆಯುಧಗಳನ್ನು ಇಟ್ಟುಕೊಂಡು ಅನುಮಾನಾಸ್ಪದವಾಗಿ ವರ್ತಿಸುತ್ತಿರುವ ಬಗ್ಗೆ ದೊರೆತ ಮಾಹಿತಿಯಂತೆ ಮಣಿಪಾಲ ಎಸ್ಸೈ ಶಂಭುಲಿಂಗಯ್ಯ ಎಂ.ಇ. ಹಾಗೂ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿ, ಆಯುಧಗಳನ್ನು ವಶಪಡಿಸಿಕೊಂಡಿದ್ದಾರೆ.

ಪರ್ವೇಝ್ ವಿರುದ್ಧ ಈಗಾಗಲೇ ಉಡುಪಿ ನಗರ, ಶಿರ್ವ, ಸೆನ್ ಮತ್ತು ಮಂಗಳೂರು ನಗರದ ಕಾವೂರು ಪೊಲೀಸ್ ಠಾಣೆಗಳಲ್ಲಿ ಮಾದಕ ವಸ್ತು ಮಾರಾಟ ಹಾಗೂ ಸೇವನೆ ಬಗ್ಗೆ ಪ್ರಕರಣಗಳು ದಾಖಲಾಗಿವೆ. ಪರ್ವೇಝ್ ಮತ್ತು ಗರುಡ ಗ್ಯಾಂಗ್‌ನ ದಾವೂದ್, ಇಸಾಕ್ ಹಾಗೂ ಕೆಲವರ ಮಧ್ಯೆ ವೈಮನಸ್ಸು ಇದ್ದು ಅವರ ಮೇಲೆ ದಾಳಿ ನಡೆಸಿ ಹಲ್ಲೆ ಮಾಡುವ ಉದ್ದೇಶದಿಂದ ಪರ್ವೇಝ್ ಆಯುಧಗಳನ್ನು ಇಟ್ಟುಕೊಂಡಿರುವುದಾಗಿ ತನಿಖೆಯಿಂದ ತಿಳಿದುಬಂದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ನ್ಯಾಯಾಲಯವು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor