ಉಡುಪಿ | ಮುಂಗಡ ಹಣದ ವಿಚಾರದಲ್ಲಿ ಗಲಾಟೆ: ಮನೆ ಮಾಲಕನ ಮೇಲೆ ಆ್ಯಸಿಡ್ ದಾಳಿ; ಆರೋಪಿ ಬಂಧನ
ಸುರೇಶ್ ಆಚಾರ್ಯ
ಉಡುಪಿ, ಅ.29: ಬಾಡಿಗೆ ಮನೆಯ ಮುಂಗಡ ಹಣ ನೀಡುವ ವಿಚಾರದಲ್ಲಿ ಮಾಲಕನಿಗೆ ವ್ಯಕ್ತಿಯೊಬ್ಬ ತಲವಾರು ತೋರಿಸಿ ಆ್ಯಸಿಡ್ ಎರಚಿ ಹಲ್ಲೆ ನಡೆಸಿರುವ ಘಟನೆ ನಡೆದಿದೆ. ಈ ಸಂಬಂಧ ಆರೋಪಿಯನ್ನು ಪೊಲೀಸರು ಕೆಲವೇ ಗಂಟೆಗಳಲ್ಲಿ ಬಂಧಿಸಿದ್ದಾರೆ.
ಆ್ಯಸಿಡ್ ದಾಳಿಯಿಂದ ತೀವ್ರವಾಗಿ ಗಾಯಗೊಂಡಿರುವ ಕುಂಜಿಬೆಟ್ಟು ಬುಡ್ನಾರು 4ನೇ ಕ್ರಾಸ್ನ ನವೀನ್ ಕುಮಾರ್ (58) ಎಂಬವರು ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಆರೋಪಿಯನ್ನು ಕುಂಜಿಬೆಟ್ಟು ಮನೋಳಿಗುಜ್ಜಿ ಮೂಲದ ಕುಂಜಿಬೆಟ್ಟು ಎಂಜಿಎಂ ಮೈದಾನದ ಬಳಿಯ ನಿವಾಸಿ ಸುರೇಶ್ ಆಚಾರ್ಯ(48) ಎಂದು ಗುರುತಿಸಲಾಗಿದೆ.
ನವೀನ್ ಕುಮಾರ್ ಕಲ್ಕೂರು ಬಿಲ್ಡಿಂಗ್ ರೈಲ್ವೆ ನಿಲ್ದಾಣದ ರಸ್ತೆಯಲ್ಲಿರುವ ಅಂಗಡಿ ಮಾಡಿಕೊಂಡಿದ್ದು, ಇವರು ವಿಷ್ಣುಮೂರ್ತಿ ನಗರದಲ್ಲಿರುವ ಮನೆಯ ಮೊದಲ ಮಹಡಿಯಲ್ಲಿ ಬಾಡಿಗೆ ಇದ್ದ ಸುರೇಶ ಆಚಾರ್ಯ ಮನೆ ಖಾಲಿ ಮಾಡಿದ್ದರು. ಇವರು ಮನೆಗೆ ಮುಂಗಡವಾಗಿ 20ಸಾವಿರ ರೂ. ಹಣವನ್ನು ಕೊಟ್ಟಿದ್ದು, ಮನೆ ಬಿಡುವ ವೇಳೆ ಬಾಡಿಗೆದಾರ ಸುರೇಶ್ ಆಚಾರ್ಯ, ಗೋಡೆ , ಟ್ಯಾಪ್ ಹಾಳು ಮಾಡಿದ್ದು ಈ ಬಗ್ಗೆ ಮುಂಗಡ ಹಣದಲ್ಲಿ ಎರಡು ತಿಂಗಳ ಬಾಡಿಗೆ ಹಾಗೂ ದುರಸ್ತಿ ಹಣವನ್ನು ಕಡಿತಗೊಳಿಸಿಕೊಡುವುದಾಗಿ ನವೀನ್ ಕುಮಾರ್ ಹೇಳಿದ್ದರು.
ಇದಕ್ಕೆ ಒಪ್ಪದ ಸುರೇಶ ಆಚಾರ್ಯ 20 ಸಾವಿರ ರೂ. ಹಣವನ್ನು ಯಾವುದೇ ಕಡಿತ ಮಾಡದೆ ನೀಡಬೇಕು, ಇಲ್ಲದಿದ್ದರೆ ಬಿಡುವುದಿಲ್ಲ ಎಂದು ಅ.23ರಂದು ನವೀನ್ ಕುಮಾರ್ ಅಂಗಡಿಗೆ ಬಂದು ಬೆದರಿಕೆ ಹಾಕಿ ಹೋಗಿದ್ದನು. ಅ.28ರಂದು ಸಂಜೆ 3:30ಗಂಟೆಗೆ ನವೀನ್ ಕುಮಾರ್ ಅಂಗಡಿಗೆ ಬಂದ, ಸುರೇಶ್ ಆಚಾರ್ಯ, ಮನೆಯ ಬಾಡಿಗೆ ಮುಂಗಡ ಹಣದ ಗಲಾಟೆ ಮಾಡಿ, ಸ್ಕೂಟರ್ನಿಂದ ಬಾಟಲಿ ಹಾಗೂ ಕತ್ತಿಯೊಂದನ್ನು ತಂದನು.
ಈ ವೇಳೆ ಆರೋಪಿ, ನವೀನ್ ಕುಮಾರ್ರನ್ನು ಕೊಲೆ ಮಾಡುವ ಉದ್ದೇಶದಿಂದ ಅವರ ಮೈಮೇಲೆ ಆ್ಯಸಿಡ್ ಹಾಕಿ, ನಂತರ ಕತ್ತಿಯನ್ನು ಕಡಿಯಲು ಬಂದಿದ್ದು, ಆಗ ನವೀನ್ ಕುಮಾರ್ ಅವಿತು ಕೊಂಡರೆನ್ನಲಾಗಿದೆ. ಆ್ಯಸಿಡ್ ದಾಳಿಯಿಂದಾಗಿ ನವೀನ್ ಕುಮಾರ್ ಅವರ ಬಲ ಕೈ, ಸೊಂಟ, ಹೊಟ್ಟೆ, ಪಾದ, ಮುಖ, ಎಡ ಕೈ ಸುಟ್ಟಿರುವುದಾಗಿ ದೂರಲಾಗಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಕುರಿತು ತನಿಖೆಗಾಗಿ ಉಡುಪಿ ನಗರ ಠಾಣಾ ಪೊಲೀಸ್ ನಿರೀಕ್ಷಕ ಮಹೇಶ್ ಪ್ರಸಾದ್ರವರ ನೇತೃತ್ವದಲ್ಲಿ ವಿಶೇಷ ತಂಡವನ್ನು ರಚಿಸಿದ್ದು, ತಂಡದಲ್ಲಿ ಎಸ್ಸೈ ಭರತೇಶ್ ಕಂಕಣವಾಡಿ, ಸಿಬ್ಬಂದಿ ಪ್ರಸನ್ನ ಸಿ., ಲೋಕೇಶ್, ಅಬ್ದುಲ್ ಬಶೀರ್, ಹೇಮಂತ್ ಕುಮಾರ್, ಆನಂದ್ ಎಸ್., ಆನಂದಯ್ಯ, ನೇತ್ರಾವತಿ ಅವರನ್ನು ಒಳಗೊಂಡ ತಂಡವು ಕೃತ್ಯ ನಡೆದ ಕೆಲವೇ ಗಂಟೆಗಳಲ್ಲಿ ಆರೋಪಿ ಸುರೇಶ್ ಆಚಾರ್ಯನನ್ನು ಉಡುಪಿ ಎಂಜಿಎಂ ಬಳಿ ಬಂಧಿಸುವಲ್ಲಿ ಯಶಸ್ವಿಯಾಗಿದೆ.
ಆರೋಪಿಯಿಂದ ಕೃತ್ಯಕ್ಕೆ ಬಳಸಿದ ಸ್ಕೂಟರ್ ಹಾಗೂ ತಲವಾರ್ನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ. ಆರೋಪಿ ಸುರೇಶ ಆಚಾರ್ಯ ವಿಪರೀತ ಮದ್ಯವ್ಯಸನಿಯಾಗಿದ್ದು, ಪ್ರಸ್ತುತ ತನ್ನ ಮನೆಯಲ್ಲಿಯೇ ಚಿನ್ನ ಬೆಳ್ಳಿಯ ಕುಸುರಿ ಕೆಲಸ ಮಾಡಿಕೊಂಡಿರುವುದರ ಜೊತೆಗೆ ಪಾರ್ಟ್ಟೈಮ್ ಸ್ವಿಗ್ಗಿ ಡೆಲಿವರಿ ಬಾಯ್ ಆಗಿ ದುಡಿಯುತ್ತಿದ್ದನು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.