ಕೃಷ್ಣಾಪುರ| ಡಿ.19ರಿಂದ ʼಕೆ.ಎಫ್.ಸಿ ಟ್ರೋಫಿ-2025ʼ ಹೊನಲು ಬೆಳಕಿನ ಪಂದ್ಯಾಕೂಟ
ಸುರತ್ಕಲ್: ಕೃಷ್ಣಾಪುರ ಫ್ರೆಂಡ್ಸ್ ಸರ್ಕಲ್ ಇದರ ಬಹುನಿರೀಕ್ಷಿತ ಶುಲ್ಕ ರಹಿತ ಹೊನಲು ಬೆಳಕಿನ ಕೆ.ಎಫ್. ಸಿ ಟ್ರೋಫಿ 2025 ಪಂದ್ಯಾಕೂಟದ ದಿನಾಂಕ ಬಿಡುಗಡೆ ಮತ್ತು ಬ್ರೋಶರ್ ಅನಾವರಣ ಕಾರ್ಯಕ್ರಮ ಕೃಷ್ಣಾಪುರ ಕೆಎಫ್ ಸಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನೆರವೇರಿತು.
ಈ ವೇಳೆ ಕೆಎಫ್ ಸಿ ಟ್ರೋಫಿ - 2025 ಬ್ರೋಶರ್ ಅನ್ನು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ ಇತರ ಗಣ್ಯರು ಸೇರಿ ಅನಾವರಣಗೊಳಿಸಿದರು.
ಬಳಿಕ ಮಾತನಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ ಅವರು, ಕೃಷ್ಣಾಪುರ ಫ್ರೆಂಡ್ಸ್ ಸರ್ಕಲ್ ಕೇವಲ ಕ್ರೀಡೆಗೆ ಮಾತ್ರ ಸೀಮಿತವಾಗಿರದೆ ಸಮಾಜ ಸೇವೆಯಲ್ಲೂ ಮುಂದೆ ಇದೆ. ಇದರ ಸೌದಿ ಅರೆಬಿಯಾ ಘಟಕದ ಸದಸ್ಯರು ತಮ್ಮ ದುಡಿಮೆಯ ಭಾಗವನ್ನು ಜನ್ಮ ಭೂಮಿಗೆ ಸಮರ್ಪಿಸುತ್ತಿರುವುದು ಸಂತೋಷದ ವಿಚಾರ. ಜಿಲ್ಲಾ ಮಟ್ಟದಲ್ಲಿನ ಸಂಸ್ಥೆಯ ಸಾಮಾಜಿಕ ಕಳಕಳಿಯ ಸೇವೆ ಮುಂದಿನ ದಿನಗಳಲ್ಲಿ ರಾಜ್ಯ ಮಟ್ಟಕ್ಕೂ ವಿಸ್ತರಣೆ ಗೊಂಡು ಇನ್ನಷ್ಟು ಜನರಿಗೆ ತಲುಪಲಿ ಎಂದು ಶುಭಹಾರೈಸಿದರು.
ಈ ಸಂದರ್ಭ ಸಂಸ್ಥೆಯ ಅಧ್ಯಕ್ಷ ಸಾದಿಕ್ ಮಾತನಾಡಿ, ಕೃಷ್ಣಾಪುರ ಫ್ರೆಂಡ್ಸ್ ಸರ್ಕಲ್ ನ 7ನೇ ಹೊನಲು ಬೆಳಕಿನ ಪಂದ್ಯಾಕೂಟವು ಡಿ. 19ರಿಂದ 21ರ ವರೆಗೆ ನಡೆಯಲಿದೆ. ಕೇವಲ ಕ್ರೀಡೆ ಮಾತ್ರವಲ್ಲದೆ ಈ ಭಾಗದಲ್ಲಿ ಸುಸಜ್ಜಿತ ಡಯಾಲೀಸಿಸ್ ಕೇಂದ್ರ ಸ್ಥಾಪಿಸುವ ಕನಸು ನಮ್ಮ ಮುಂದಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕೃಷ್ಣಾಪುರ ಫ್ರೆಂಡ್ಸ್ ಸರ್ಕಲ್ ಪ್ರೋತ್ಸಾಹಕರಾದ ಸಾದಿಕ್ ಅಲ್ ಗಸೀಮ್, ನವೀದ್ ಕೃಷ್ಣಾಪುರ, ಕೃಷ್ಣಾಪುರ ಫ್ರೆಂಡ್ಸ್ ಸರ್ಕಲ್ ಉಪಾಧ್ಯಕ್ಷ ಹನೀಫ್, ಉದ್ಯಮಿಗಳಾದ ಕಬೀರ್, ಶಕೀಲ್ ಮತ್ತಿತರರು ಉಪಸ್ಥಿತರಿದ್ದರು.