ಸಿಂಥೆಟಿಕ್ ಡ್ರಗ್ಸ್ ಗೆವಿದೇಶಿ ನಂಟು; ಬಗೆದಷ್ಟೂ ಮೊಗೆಯುವ ಜಾಲ

Update: 2023-09-04 04:32 GMT

ಮಂಗಳೂರು: ದ.ಕ. ಜಿಲ್ಲೆಯನ್ನು ಒಳಗೊಂಡು ರಾಜ್ಯದಲ್ಲಿ ರಾಸಾಯನಿಕ ಪದಾರ್ಥಗಳನ್ನು ಬಳಸಿ ತಯಾರಿಸಲಾಗುವ ಸಿಂಥೆಟಿಕ್ ಡ್ರಗ್ಸ್ (ಎಂಡಿಎಂಎ, ಎಲ್‌ಎಸ್‌ಡಿ, ಮೆಥಾಂಫೆಟಮೈನ್, ಆ್ಯಂಫೆಟಮೈನ್, ಎಕ್ಸ್‌ಟೆಸ್ಸಿ, ಕೆಟಾಮಿನ್, ಟ್ರಮಡೋಲ್, ಎಕ್ಸ್‌ಟೆಪ್ಸಿ, ಕೊಕೇನ್ ಮೊದಲಾದವು) ವ್ಯವಹಾರದಲ್ಲಿ ವಿದೇಶಿ ನಂಟು ಮತ್ತೆ ಮತ್ತೆ ಸಾಬೀತಾಗುತ್ತಿದೆ. ಇದಕ್ಕೆ ಪೂರಕ ಎಂಬಂತೆ ಮಂಗಳೂರು ಸಿಸಿಬಿ ಪೊಲೀಸರು ದ.ಕ. ಜಿಲ್ಲೆ ಹಾಗೂ ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಎಂಡಿಎಂಎ ಪೂರೈಕೆಯ ಕಿಂಗ್ ಪಿನ್ ಆಗಿದ್ದ ನೈಜೀರಿಯಾ ದೇಶದ ಮಹಿಳೆಯನ್ನು ಬಂಧಿಸಿದ್ದಾರೆ.

ಕಳೆದೊಂದು ವರ್ಷದಿಂದೀಚೆಗೆ ಅಂದಾಜು ಕೋಟ್ಯಂತರ ಮೌಲ್ಯದ ಸಿಂಥೆಟಿಕ್ ಡ್ರಗ್ಸ್ ದ.ಕ. ಜಿಲ್ಲೆಯಾದ್ಯಂತ ಪೊಲೀಸರು ಕಾರ್ಯಾಚರಣೆಯಲ್ಲಿ ವಶಪಡಿಸಿಕೊಂಡಿದ್ದಾರೆ. ಅದರಲ್ಲೂ ಜಿಲ್ಲೆಯಲ್ಲಿ ಮುಖ್ಯವಾಗಿ ಚಲಾವಣೆಯಲ್ಲಿರುವ ಸಿಂಥೆಟಿಕ್ ಡ್ರಗ್ಸ್ ಎಂಡಿಎಂಎ ಕಳೆದ ಮೂರು ತಿಂಗಳ ಅವಧಿಯಲ್ಲಿ ಸುಮಾರು ಒಂದೂವರೆ ಕಿಲೋನಷ್ಟು ವಶವಾಗಿದೆ. ಮಾರುಕಟ್ಟೆಯಲ್ಲಿ ಈ ಎಂಡಿಎಂಎ ಬೆಲೆ ಅಂದಾಜು ಗ್ರಾಂಗೆ ೨,೫೦೦ರೂ.ನಿಂದ ೪,೦೦೦ ರೂ.ಗಳಾಗಿವೆ.

ಅತ್ಯಧಿಕ ಪ್ರಮಾಣದ ಎಂಡಿಎಂಎ ವಶ

ದ.ಕ. ಜಿಲ್ಲೆಯಲ್ಲಿ ಪೆಡ್ಲರ್‌ಗಳು ಸೇರಿದಂತೆ ಪೊಲೀಸರ ಕಾರ್ಯಾಚರಣೆ ವೇಳೆ ಸಿಂಥೆಟಿಕ್ ಡ್ರಗ್ಸ್ ಪತ್ತೆಯಾಗುವ ಪ್ರಮಾಣ ೧೦ ಗ್ರಾಂ, ೫೦ ಗ್ರಾಂಗಳಾಗಿರುತ್ತಿತ್ತು. ಇದೀಗ ಡ್ರಗ್ಸ್ ಜಾಲ ಕಿಂಗ್‌ಪಿನ್ ನೈಜೀರಿಯಾ ಮಹಿಳೆಯಿಂದ ವಶಪಡಿಸಿಕೊಂಡ ಎಂಡಿಎಂಎ ೪೦೦ ಗ್ರಾಂ. ಇದರ ಮೌಲ್ಯ ೨೦ ಲಕ್ಷ ರೂ. ಮೌಲ್ಯ ಎಂದು ಅಂದಾಜಿಸಲಾಗಿದೆ.

ಡ್ರಗ್ಸ್ ಕಿಂಗ್‌ಪಿನ್‌ಗಳದ್ದು ಐಷಾರಾಮಿ ಜೀವನ: ಡ್ರಗ್ಸ್ ಮುಕ್ತ ದ.ಕ. ಜಿಲ್ಲೆಯ ಅಭಿಯಾನದ ನಿಟ್ಟಿನಲ್ಲಿ ಪೊಲೀಸರು ಪೆಡ್ಲರ್‌ಗಳ ಬೆನ್ನು ಬಿದ್ದಿದ್ದು, ಕಳೆದ ಮೂರು ತಿಂಗಳಿನಿಂದ ಮಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲಿ ೪೦ಕ್ಕೂ ಅಧಿಕ ಪೆಡ್ಲರ್‌ಗಳನ್ನು ಬಂಧಿಸಿ, ಜೈಲಿಗಟ್ಟಿದ್ದಾರೆ. ಆ ಪೆಡ್ಲರ್‌ಗಳಿಗೆ ಮುಖ್ಯವಾಗಿ ಸಿಂಥೆಟಿಕ್ ಡ್ರಗ್ಸ್ ಪೂರೈಕೆ ಮಾಡುವ ವಿದೇಶಿ ಕಿಂಗ್ ಪಿನ್‌ಗಳದ್ದು, ಸ್ಟಾರ್ ಹೋಟೇಲ್‌ಗಳಲ್ಲಿ ಐಷಾರಾಮಿ ಜೀವನ. ಮಂಗಳೂರು ಸಿಸಿಬಿ ಪೊಲೀಸರಿಂದ ಬೆಂಗಳೂರಿನಲ್ಲಿ ಬಂಧಿಸಲ್ಪಟ್ಟ ನೈಜೀರಿಯಾದ ನಿವಾಸಿ, ಡ್ರಗ್ಸ್ ಕಿಂಗ್‌ಪಿನ್ ಮಹಿಳೆ. ವ್ಯಾಸಂಗ ವೀಸಾದಡಿ ಭಾರತಕ್ಕೆ ಬಂದಾಕೆ. ವಿದ್ಯಾಭ್ಯಾಸದ ಬಳಿಕ ಬೆಂಗಳೂರಿನಲ್ಲೇ ಸ್ವಲ್ಪ ಸಮಯ ನರ್ಸಿಂಗ್ ಕೆಲಸ ಮಾಡಿಕೊಂಡಿದ್ದ ಆಕೆ ಕೆಲಸ ಬಿಟ್ಟು ಡ್ರಗ್ಸ್ ದಂಧೆಯಲ್ಲಿ ತೊಡಗಿಸಿಕೊಂಡಿದ್ದಳು. ಇತ್ತೀಚೆಗೆ ಕಂಕನಾಡಿ ನಗರ, ಮಂಗಳೂರು ಉತ್ತರ, ಉಳ್ಳಾಲ, ಸೆನ್ ಪೊಲೀಸ್ ಠಾಣೆ, ಕೊಣಾಜೆ, ಸುರತ್ಕಲ್ ಪೊಲೀಸ್ ಠಾಣೆ ಸೇರಿದಂತೆ ಏಳು ಪ್ರಕರಣಗಳಲ್ಲಿ ಮಂಗಳೂರು ಪೊಲೀಸರಿಂದ ಬಂಧಿಸಲ್ಪಟ್ಟ ಡ್ರಗ್ಸ್ ಪೆಡ್ಲರ್‌ಗಳಿಗೆ ಈಕೆಯೇ ಮಾದಕ ವಸ್ತುಗಳನ್ನು ಪೂರೈಕೆ ಮಾಡುತ್ತಿದ್ದ ಬಗ್ಗೆ ಪೊಲೀಸ್ ವಿಚಾರಣೆಯಿಂದ ತಿಳಿದು ಬಂದಿದೆ. ಹಾಗಾಗಿ ನಗರದಲ್ಲಿ ಬಹು ಮುಖ್ಯವಾಗಿ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಪೂರೈಕೆಯಾಗುತ್ತಿದ್ದ ಸಿಂಥೆಟಿಕ್ ಡ್ರಗ್ಸ್ ಜಾಲದ ಪ್ರಮುಖ ಕಿಂಗ್‌ಪಿನ್ ಬಂಧನವಾದಂತಾಗಿದೆ ಎನ್ನುವುದು ನಗರದ ಹಿರಿಯ ಪೊಲೀಸ್ ಅಧಿಕಾರಿಗಳ ಅಭಿಪ್ರಾಯ.

ವ್ಯಸನಿಗಳಿಂದ ಎಂಡಿಎಂಎ ಬಳಕೆ ಹೇಗೆ?

ದ.ಕ. ಜಿಲ್ಲೆ ಹಾಗೂ ಸುತ್ತಮುತ್ತ ಸದ್ಯ ಹೆಚ್ಚಾಗಿ ಬಳಕೆಯಲ್ಲಿರುವ ಸಿಂಥೆಟಿಕ್ ಡ್ರಗ್ಸ್ ಎಂಡಿಎಂಎ ಹಾಗೂ ಎಲ್‌ಎಸ್‌ಡಿ. ಎಲ್‌ಎಸ್‌ಡಿ ನಾನಾ ರೂಪದ ಸ್ಟಾಂಪ್ ಮಾದರಿಯಲ್ಲಿದ್ದು, ನಾಲಗೆಯಡಿ ಬಾಯಿಯಲ್ಲಿರಿಸಿ ಚಾಕಲೇಟ್ ತರ ಬಳಕೆಯಾಗುತ್ತದೆ. ಇನ್ನು ಎಂಡಿಎಂಎ ಕಲ್ಲುಸಕ್ಕರೆ ಹುಡಿಯಂತಿರುತ್ತದೆ. ಇದನ್ನು ಕೆಲವರು ಡಿಸ್ಟಿಲ್ ನೀರಿನ ಜತೆ ಬೆರೆಸಿ ದೇಹಕ್ಕೆ ಇಂಜೆಕ್ಟ್ ಮಾಡಿಕೊಂಡರೆ, ಮತ್ತೆ ಕೆಲವರು ಧೂಮಪಾನ ಮಾದರಿಯಲ್ಲಿ ಬಳಕೆ ಮಾಡುತ್ತಾರೆ. ಈ ಎಂಡಿಎಂಎ ಬಿಸಿಗೆ ಆವಿಯಾಗುವುದರಿಂದ ಲ್ಯಾಂಪ್ ಕೆಳಗಿರಿಸಿಕೊಂಡು ಅದರ ಆವಿಯನ್ನು ಮೂಗಿನ ಮೂಲಕ ದೇಹಕ್ಕೆ ಎಳೆದುಕೊಳ್ಳುವವರೂ ಇದ್ದಾರೆ. ಹೀಗೆ ವಿಭಿನ್ನ ರೀತಿಯಲ್ಲಿ ರಾಸಾಯನಿಕಯುಕ್ತ ಎಂಡಿಎಂಎ ನಶೆಯನ್ನು ವ್ಯಸನಿಗಳು ತಮ್ಮ ದೇಹಕ್ಕೆ ಸೇರಿಸಿಕೊಳ್ಳುತ್ತಾರೆ ಎನ್ನುತ್ತಾರೆ ತಜ್ಞರು.

ಮಂಗಳೂರು ನಗರವನ್ನು ಕೇಂದ್ರವಾಗಿಸಿಕೊಂಡು ದ.ಕ. ಜಿಲ್ಲೆ, ಉಪ್ಪಳ, ಮಂಜೇಶ್ವರದ ಸುತ್ತಮುತ್ತಲಿನ ಡ್ರಗ್ಸ್ ಪೆಡ್ಲರ್‌ಗಳಿಗೆ ಎಂಡಿಎಂಎ ಪೂರೈಕೆ ಮಾಡುತ್ತಿದ್ದ ಮಹಿಳೆ ಈಕೆ. ಸಿಂಥೆಟಿಕ್ ಡ್ರಗ್ಸ್‌ಗೆ ಶಾಲಾ-ಕಾಲೇಜು ವಿದ್ಯಾರ್ಥಿಗಳೇ ಮುಖ್ಯ ಟಾರ್ಗೆಟ್. ಗ್ರಾಹಕ ವಿದ್ಯಾರ್ಥಿಗಳ ಮೂಲಕವೇ ಇತರ ಅಮಾಯಕ ವಿದ್ಯಾರ್ಥಿಗಳಿಗೆ ಬಲೆ ಬೀಸುವ ಈ ಜಾಲ, ಆರಂಭದಲ್ಲಿ ಎರಡು ಮೂರು ಬಾರಿ ಉಚಿತವಾಗಿಯೇ ಈ ಡ್ರಗ್ಸ್ ಪೂರೈಕೆ ಮಾಡುತ್ತದೆ. ಗೇಟ್ ವೇ ಡ್ರಗ್ಸ್‌ಗಳ ಹವ್ಯಾಸ ಹೊಂದಿರುವ ಹದಿ ಹರೆಯದ ಮಕ್ಕಳಿಗೆ ಉಚಿತವಾಗಿ ಸಿಗುವ ಈ ನಶೆ ಬಳಿಕ ಮತ್ತೆ ಬೇಕೆನ್ನಿಸುತ್ತದೆ. ಬಳಿಕ ಹಣಕೊಟ್ಟು ಪಡೆಯಲು ನಾನಾ ದಾರಿಯನ್ನು ಹುಡುಕಲಾರಂಭಿಸುತ್ತಾರೆ. ಸುಮಾರು ಎರಡು ತಿಂಗಳ ಅವಧಿಗೆ ಈ ಸಿಂಥೆಟಿಕ್ ಡ್ರಗ್ಸ್ ಸೇವನೆ ಮುಂದುವರಿಸಿಕೊಂಡವರು ವ್ಯಸನಿಯಾಗುತ್ತಾರೆ. ಗೇಟ್‌ವೇ ಮಾದಕ ದ್ರವ್ಯಗಳಂತೆ ಈ ಸಿಂಥೆಟಿಕ್ ಡ್ರಗ್ಸ್ ಗ್ರಾಹಕರನ್ನು ಅಷ್ಟು ಸುಲಭವಾಗಿ ಪತ್ತೆ ಹಚ್ಚಲು ಸಾಧ್ಯವಿರುವುದಿಲ್ಲ. ಹಾಗಾಗಿ ವಿದ್ಯಾರ್ಥಿ ಸಮೂಹವೇ ಅಧಿಕವಾಗಿರುವ ಈ ಸಿಂಥೆಟಿಕ್ ಡ್ರಗ್ಸ್ ವ್ಯಸನಿಗಳು ಮಾನಸಿಕ ಅಸಮತೋಲನಕ್ಕೆ ತಲುಪುವವರೆಗೂ ಅವರ ಮನೆಯವರಿಗೂ ಇದರ ಸುಳಿವು ಸಿಗುವುದಿಲ್ಲ. ಒಬ್ಬ ಪೆಡ್ಲರ್ ಕನಿಷ್ಠ ೧೦ರಿಂದ ೫೦ ಗ್ರಾಂ.ನಷ್ಟು ಎಂಡಿಎಂಎಯನ್ನು ಗ್ರಾಂ ರೂಪದಲ್ಲಿ ಗ್ರಾಹಕರಿಗೆ ಪೂರೈಸುತ್ತಾನೆ. ಒಂದು ಗ್ರಾಂ ಎಂಡಿಎಂಎಯನ್ನು ವ್ಯಸನಿಯೊಬ್ಬ ಒಂದೆರಡು ದಿನ ಬಳಸಿದರೆ, ಮತ್ತೆ ಕೆಲವರು ಒಂದು ವಾರದವರೆಗೂ ಬಳಸುತ್ತಾರೆ. ಹೀಗೆ ಚೈನ್ ಲಿಂಕ್ ರೂಪದಲ್ಲಿ ಸಾಗುವ ಈ ಸಿಂಥೆಟಿಕ್ ಡ್ರಗ್ಸ್ ವ್ಯವಹಾರ ಹದಿಹರೆಯದ ಮಕ್ಕಳನ್ನು ಮನೆಗಳಲ್ಲಿ ಹಣಕ್ಕಾಗಿ ಪೋಷಕರನ್ನು ಪೀಡಿಸುವುದು, ವಸ್ತು ಅಥವಾ ಹಣ ಕಳ್ಳತನ, ತನ್ನ ತಪ್ಪನ್ನು ಮನೆ ಮಂದಿ ಅಥವಾ ಮನೆ ಕೆಲಸದಾಳುಗಳ ಮೇಲೆ ಹಾಕುವವರೆಗೂ ಮುಂದುವರಿಯುತ್ತವೆ.

ಪೋಷಕರಲ್ಲೂ ಹೆಚ್ಚಿದ ಜಾಗೃತಿ: ದ.ಕ. ಜಿಲ್ಲಾಡಳಿತದ ನೇತೃತ್ವದಲ್ಲಿ ನಡೆಯುತ್ತಿರುವ ಡ್ರಗ್ಸ್ ವಿರೋಧಿ ಅಭಿಯಾನದ ಕಾರಣದಿಂದ ಇದೀಗ ಪೋಷಕರೂ ಜಾಗೃತರಾಗುತ್ತಿದ್ದಾರೆ. ಹದಿಹರೆಯದ ಮಕ್ಕಳಿಂದ ಕದ್ದು ಮುಚ್ಚಿ ನಡೆಯುವ ಡ್ರಗ್ಸ್ ಸೇವನೆ ಬಗ್ಗೆ ಪೊಲೀಸರಿಂದ ತಪಾಸಣೆ ತೀವ್ರಗೊಂಡಿರುವ ಜೊತೆಯಲ್ಲೇ, ಮಕ್ಕಳ ಡ್ರಗ್ಸ್ ಸೇವನೆಯ ಅನುಮಾನದ ಬಗ್ಗೆ ಪೋಷಕರು ಕೂಡಾ ಪೊಲೀಸರಿಗೆ ಮಾಹಿತಿ ನೀಡುತ್ತಿದ್ದಾರೆ. ವೈದ್ಯರ ಮೂಲಕ ಅಂತಹ ಮಕ್ಕಳ ತಪಾಸಣೆ ನಡೆಸಿ ಅವರಿಗೆ ಕೌನ್ಸೆಲಿಂಗ್ ನೀಡುವ ಕಾರ್ಯ ಇಲಾಖೆಯಿಂದ ನಡೆಯುತ್ತಿದೆ. ಈ ನಶೆಯ ಚಟ ಹದಿಹರೆಯದ ಮುಖ್ಯವಾಗಿ ೯ನೇ ತರಗತಿಯಿಂದ ಪಿಯುಸಿ ವಿದ್ಯಾರ್ಥಿಗಳಲ್ಲೇ ಹೆಚ್ಚಾಗಿ ಕಂಡು ಬರುತ್ತಿದ್ದು, ಗಂಡು ಹೆಣ್ಣು ಎಂಬ ಬೇಧವಿಲ್ಲದೆ ನಡೆಯುತ್ತಿದೆ. ಚಂಚಲ ಮನಸ್ಸಿನ, ಸರಿ ತಪ್ಪು ಯಾವುದೆಂದು ವಿವೇಚಿಸಲು ಕಷ್ಟ ಪಡುವ ವಯಸ್ಸಿನವರನ್ನೇ ಈ ಡ್ರಗ್ಸ್ ಜಾಲ ತನ್ನ ಗ್ರಾಹಕರನ್ನಾಗಿಸುತ್ತದೆ.

Writer - ವಾರ್ತಾಭಾರತಿ

contributor

Editor - jafar sadik

contributor

Contributor - ಸತ್ಯಾ ಕೆ.

contributor

Similar News