ಧರ್ಮಸ್ಥಳ ಪ್ರಕರಣ | ಜನಾರ್ದನ ರೆಡ್ಡಿ ಆರೋಪದಲ್ಲಿ ಹುರುಳಿಲ್ಲ: ಸಸಿಕಾಂತ್ ಸೆಂಥಿಲ್
''ಇದು ʻಮತಗಳ್ಳತನʼ ಪ್ರಕರಣದಿಂದ ಗಮನ ಬೇರೆಡೆ ಸೆಳೆಯುವ ತಂತ್ರ''
ಮಂಗಳೂರು: ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿ ತನ್ನ ವಿರುದ್ಧ ಬಿಜೆಪಿ ಶಾಸಕ ಗಾಲಿ ಜನಾರ್ದನ ರೆಡ್ಡಿ ಮಾಡಿರುವ ಆರೋಪ ಆಧಾರರಹಿತವಾದದ್ದು, ಅದರಲ್ಲಿ ಹುರುಳಿಲ್ಲ ಎಂದು ದಕ್ಷಿಣ ಕನ್ನಡ ಜಿಲ್ಲೆಯ ಮಾಜಿ ಜಿಲ್ಲಾಧಿಕಾರಿ ಹಾಗೂ ತಮಿಳುನಾಡಿನ ಹಾಲಿ ಸಂಸದ ಸಸಿಕಾಂತ್ ಸೆಂಥಿಲ್ ಹೇಳಿದ್ದಾರೆ.
ಈ ಬಗ್ಗೆ 'ವಾರ್ತಾಭಾರತಿ' ಜೊತೆ ಮಾತನಾಡಿದ ಸಸಿಕಾಂತ್ ಸೆಂಥಿಲ್, "ಬಳ್ಳಾರಿಯಲ್ಲಿ ನಾನು ಸಹಾಯಕ ಆಯುಕ್ತನಾಗಿದ್ದ ವೇಳೆ ಜನಾರ್ದನ ರೆಡ್ಡಿಯವರ ಕೆಲವು ಅಪರಾಧಗಳನ್ನು ಬಹಿರಂಗಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದೆ. ಬಹುಶಃ ಆ ಕಾರಣಗಳಿಂದ ಅವರು ನನ್ನ ಮೇಲೆ ಈ ವೃಥಾರೋಪ ಮಾಡಿರಬಹುದು ಎಂದೆನಿಸುತ್ತದೆ'' ಎಂದು ಹೇಳಿದರು.
''ಇತ್ತಿಚೇಗೆ ಸುದ್ದಿ ಮಾಡುತ್ತಿರುವ ʻಮತಗಳ್ಳತನʼ ಪ್ರಕರಣದಿಂದ ಜನರ ಗಮನವನ್ನು ಬೇರೆಡೆ ಸೆಳೆಯುವ ತಂತ್ರವಾಗಿ ಜನಾರ್ದನ ರೆಡ್ಡಿ ನನ್ನ ಮೇಲೆ ಈ ಆರೋಪ ಮಾಡಿರಲೂಬಹುದು. ಇಂತಹ ವದಂತಿಗಳಿಗೆ ಹೆಚ್ಚು ಪ್ರತಿಕ್ರಿಯೆ ನೀಡುವುದಿಲ್ಲ'' ಎಂದು ಹೇಳಿದ್ದಾರೆ.
ಜನಾರ್ದನ ರೆಡ್ಡಿ ಆರೋಪವೇನು?
‘ಧರ್ಮಸ್ಥಳ ಪ್ರಕರಣ’ ಒಂದು ವ್ಯವಸ್ಥಿತ ಷಡ್ಯಂತ್ರವಾಗಿದ್ದು, ಇದರ ಹಿಂದೆ ದಕ್ಷಿಣ ಕನ್ನಡ ಜಿಲ್ಲೆಯ ಮಾಜಿ ಜಿಲ್ಲಾಧಿಕಾರಿ ಹಾಗೂ ತಮಿಳುನಾಡಿನ ಹಾಲಿ ಸಂಸದ ಸಸಿಕಾಂತ್ ಸೆಂಥಿಲ್ ಅವರ ಕೈವಾಡವಿದೆ ಎಂದು ಕೊಪ್ಪಳ ಜಿಲ್ಲೆ ಗಂಗಾವತಿ ಕ್ಷೇತ್ರದ ಬಿಜೆಪಿಯ ಶಾಸಕ ಜನಾರ್ದನ ರೆಡ್ಡಿ ಮಂಗಳವಾರ ಆರೋಪ ಮಾಡಿದ್ದಾರೆ.
ಸಂಸದ ಸಸಿಕಾಂತ್ ಸೆಂಥಿಲ್ ಒತ್ತಡದ ಮೇರೆಗೆ ರಾಜ್ಯ ಸರಕಾರ ಧರ್ಮಸ್ಥಳ ಪ್ರಕರಣ ಸಂಬಂಧ ವಿಶೇಷ ತನಿಖಾ ತಂಡ(ಎಸ್ಐಟಿ)ವನ್ನು ರಚಿಸಿದೆ. ಅನಾಮಿಕ ಮಾಸ್ಕ್ ಮ್ಯಾನ್ ತಮಿಳುನಾಡು ಮೂಲದವನಾಗಿದ್ದು, ಸಸಿಕಾಂತ್ ಸೆಂಥಿಲ್ ಅವರ ಜತೆ ನಿಕಟ ಸಂಬಂಧ ಹೊಂದಿದ್ದಾನೆ ಎಂದು ಆರೋಪಿಸಿದ್ದರು.