×
Ad

ಪಂಜಾಬ್ ನಲ್ಲಿ ಧರ್ಮಸ್ಥಳದ ಯುವತಿಯ ನಿಗೂಢ ಮೃತ್ಯು ಪ್ರಕರಣಕ್ಕೆ ತಿರುವು

Update: 2025-05-19 10:23 IST

ಬೆಳ್ತಂಗಡಿ, ಮೇ 19: ಧರ್ಮಸ್ಥಳ ಮೂಲದ ಏರೋಸ್ಪೇಸ್ ಉದ್ಯೋಗಿ ಆಕಾಂಕ್ಷಾ ಎಸ್. ನಾಯರ್(22) ನಿಗೂಢ ಸಾವು ಪ್ರಕರಣ ಇದೀಗ ದೊಡ್ಡ ತಿರುವು ಪಡೆದಿದ್ದು, ಅವರು ಕಾಲೇಜು ಕಟ್ಟಡದಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಅಲ್ಲಿನ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಅತ್ಮಹತ್ಯೆಗೆ ಪ್ರೇಮ ವೈಫಲ್ಯ ಕಾರಣ ಎಂಬುದು ತನಿಖೆ ವೇಳೆ ಬೆಳಕಿಗೆ ಬಂದಿದೆ. ಆಕಾಂಕ್ಷಾ ಪಂಜಾಬ್ ನ ಫಗ್ವಾರದಲ್ಲಿರುವ ಲವ್ಲಿ ಪ್ರೊಫೆಶನಲ್ ವಿಶ್ವವಿದ್ಯಾನಿಲಯದ ಪ್ರೊಫೆಸರ್ ಬಿಜಿಲ್ ಮ್ಯಾಥ್ಯೂ ಎಂಬಾತನನ್ನು ಪ್ರೀತಿಸುತ್ತಿದ್ದರೆನ್ನಲಾಗಿದೆ. ಬಿಜಿಲ್ ಮ್ಯಾಥ್ಯೂ ಕೇರಳದ ಕೊಟ್ಟಾಯಂ ನಿವಾಸಿಯಾಗಿದ್ದು, ಎರಡು ಮಕ್ಕಳ ತಂದೆ. ಪಂಜಾಬ್ ತೆರಳಿದ್ದ ಆಕಾಂಕ್ಷಾ ಅವರು ಮ್ಯಾಥ್ಯೂ ಮನೆಗೆ ಹೋಗಿ ಜಗಳವಾಡಿದ್ದು, ಬಳಿಕ ವಿಶ್ವವಿದ್ಯಾನಿಲಯದಲ್ಲೂ ಆತನ ಜೊತೆ ಜಗಳವಾಡಿದ್ದಾರೆ. ಬಳಿಕ ಆತನ ಕಚೇರಿಯಿಂದ ಹೊರಬಂದು ಅದೇ ಕಟ್ಟಡದ ನಾಲ್ಕನೇ ಮಹಡಿಯಿಂದ ಕೆಳಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಅಲ್ಲಿನ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿದು ಬಂದಿದೆ.

ಈ ಮಧ್ಯೆ ಆಕಾಂಕ್ಷಾರಿಗೆ ಪ್ರೊಫೆಸರ್ ಕಿರುಕುಳ ನೀಡುತ್ತಿದ್ದ ಎಂಬ ಆರೋಪವೂ ಕೇಳಿ ಬಂದಿದೆ. ಹೆಚ್ಚಿನ ಮಾಹಿತಿಗಳು ಮುಂದಿನ ತನಿಖೆಯಿಂದ ತಿಳಿದು ಬರಬೇಕಾಗಿದೆ.

ಪ್ರೊಫೆಸರ್ ವಿರುದ್ಧ ಪ್ರಕರಣ ದಾಖಲು:

ಆತ್ಮಹತ್ಯೆಗೆ ಪ್ರೇರಣೆ ಹಿನ್ನಲೆಯಲ್ಲಿ ಪ್ರಾಧ್ಯಾಪಕ ಮ್ಯಾಥ್ಯೂ ವಿರುದ್ಧ ಪಂಜಾಬ್ ನ ಜಲಂಧರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಶ್ವವಿದ್ಯಾನಿಲಯದಿಂದ ಸರ್ಟಿಫಿಕೆಟ್ ಪಡೆಯಲೆಂದು ಪಂಜಾಬಿಗೆ ಹೋಗಿದ್ದ ಆಕಾಂಕ್ಷಾ ಅಲ್ಲಿ ವಿಶ್ವವಿದ್ಯಾನಿಲಯ ಕಟ್ಟಡದಿಂದ ಹಾರಿ ಮೃತಪಟ್ಟಿದ್ದಾರೆ ಎನ್ನುವುದು ಹಲವಾರು ಅನುಮಾನಗಳಿಗೆ ಕಾರಣವಾಗಿತ್ತು. ಇದೀಗ ಆಕಾಂಕ್ಷಾ ಅವರ ತಂದೆತಾಯಿ ಹಾಗೂ ಸಹೋದರ ಪಂಜಾಬಿಗೆ ತೆರಳಿ ಪೊಲೀಸರಿಂದ ಮಾಹಿತಿಗಳನ್ನು ಪಡೆದುಕೊಂಡಿದ್ದಾರೆ.

ಸ್ಥಳೀಯ ಪೊಲೀಸರು ಕಾಲೇಜಿನ ಸಿಸಿಟಿವಿ ದಾಖಲೆಗಳನ್ನು ಪರಿಶೀಲಿಸಿದ್ದಾರೆ ನಿಗೂಢ ಸಾವು ಪ್ರಕರಣ ಪಡೆದುಕೊಂಡಿರುವುದಾಗಿ ತಿಳಿದು ಬಂದಿದೆ.

ಸೋಮವಾರ ಮರಣೋತ್ತರ ಪರೀಕ್ಷೆ ನಡೆಯಲಿದ್ದು ಬಳಿಕ ಹೆತ್ತವರಿಗೆ ಮೃತದೇಹ ಹಸ್ತಾಂತರವಾಗಲಿದೆ. ಇದಾದ ಬಳಿಕ ಮೃತದೇಹವನ್ನು ಧರ್ಮಸ್ಥಳಕ್ಕೆ ತರಲಿದ್ದು ಮಂಗಳವಾರ ಇಲ್ಲಿ ಅಂತ್ಯ ಸಂಸ್ಕಾರ ನೆರವೇರಲಿದೆ ಎಂದು ತಿಳಿದುಬಂದಿದೆ.

ಆಕಾಂಕ್ಷಾ ಎಸ್. ನಾಯರ್ ಧರ್ಮಸ್ಥಳದ ಬೋಳಿಯೂರು ನಿವಾಸಿ ಸುರೇಂದ್ರ ನಾಯರ್ ಹಾಗೂ ಸಿಂಧೂದೇವಿ ದಂಪತಿಯ ಪುತ್ರಿ. ಏರೋಸ್ಪೇಸ್ ಇಂಜಿನಿಯರ್ ಆಗಿ ದಿಲ್ಲಿಯಲ್ಲಿ ಉದ್ಯೋಗದಲ್ಲಿದ್ದ ಇವರು ಮುಂದೆ ಜಪಾನ್ ಗೆ ಉದ್ಯೋಗಕ್ಕೆ ತೆರಳುವವರಿದ್ದರು. ಇದೇ ಕಾರಣಕ್ಕೆ ತಾನು ಕಲಿತ ಪಂಜಾಬ್ ನ ಲವ್ಲಿ ಪ್ರೊಫೆಸನಲ್ ವಿಶ್ವವಿದ್ಯಾನಿಲಯದಿಂದ ಸರ್ಟಿಫಿಕೆಟ್ ಗಳನ್ನು ಪಡೆಯುವುದಕ್ಕಾಗಿ ತೆರಳಿದ್ದರು. ಮೇ 17ರಂದು ಲವ್ಲಿ ಪ್ರೊಫೆಶನಲ್ ವಿಶ್ವವಿದ್ಯಾನಿಲಯದ ಕಾಲೇಜು ಕಟ್ಟಡದ ನಾಲ್ಕನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಅವರ ಮೃತದೇಹ ಪತ್ತೆಯಾಗಿತ್ತು. ಇದು ಹಲವು ಅನುಮಾನಗಳಿಗೆ ಕಾರಣವಾಗಿತ್ತು.

ಆತ್ಮಹತ್ಯೆಯ ಯೋಚನೆ ಬಂದಾಗ ಅದನ್ನು ನಿಗ್ರಹಿಸಲು ರಾಜ್ಯ ಸರಕಾರದ ಅರೋಗ್ಯ ಇಲಾಖೆಯ ಹೆಲ್ಪ್ ಲೈನ್ 104 ಸಹಾಯ ಮಾಡುತ್ತದೆ. ಅದರ ಜೊತೆಗೆ Tele-MANAS ನ 14416 ಅನ್ನೂ ಸಂಪರ್ಕಿಸಬಹುದು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News