×
Ad

ಬೆಳ್ತಂಗಡಿ : ನಾಪತ್ತೆಯಾಗಿದ್ದ ಬಾಲಕನ ಮೃತದೇಹ ಮನೆ ಸಮೀಪದ ಕೆರೆಯಲ್ಲಿ ಪತ್ತೆ

Update: 2026-01-14 12:33 IST

ಬೆಳ್ತಂಗಡಿ: ಕಳಿಯ ಗ್ರಾಮದ ನಾಳ ದೇವಸ್ಥಾನಕ್ಕೆ ಇಂದು ಮುಂಜಾನೆ ಧನುಪೂಜೆಗೆ ಹೊರಟಿದ್ದ ಬಾಲಕನೊಬ್ಬ ನಿಗೂಢವಾಗಿ ನಾಪತ್ತೆಯಾಗಿದ್ದು, ಬಳಿಕ ಮನೆಯ ಸಮೀಪದ ಕೆರೆಯಲ್ಲಿ ಆತನ ಮೃತದೇಹ ಪತ್ತೆಯಾಗಿರುವ ಘಟನೆ ಬೆಳ್ತಂಗಡಿ ತಾಲೂಕಿನ ಕುವೆಟ್ಟು ಗ್ರಾಮದ ಸಂಬೋಳ್ಯ–ಬರಮೇಲು ಪ್ರದೇಶದಲ್ಲಿ ನಡೆದಿದೆ. ಬಾಲಕನ ಅಸಹಜ ಸಾವಿನ ಬಗ್ಗೆ ಹಲವು ಅನುಮಾನಗಳು ಮೂಡಿವೆ.

ಮೃತ ಬಾಲಕನನ್ನು ಕುವೆಟ್ಟು ಗ್ರಾಮದ ಸಂಬೋಳ್ಯ ಬರಮೇಲು ನಿವಾಸಿ ಸುಬ್ರಹ್ಮಣ್ಯ ನಾಯಕ್ ಅವರ ಪುತ್ರ, ಗೇರುಕಟ್ಟೆ ಸರ್ಕಾರಿ ಪ್ರೌಢ ಶಾಲೆಯ 9ನೇ ತರಗತಿ ವಿದ್ಯಾರ್ಥಿ ಸುಮಂತ್ (15) ಎಂದು ಗುರುತಿಸಲಾಗಿದೆ.

ಘಟನೆ ವಿವರ:

ಸುಮಂತ್ ಸೇರಿದಂತೆ ಮೂವರು ಬಾಲಕರು ಪ್ರತಿದಿನ ನಾಳ ದೇವಸ್ಥಾನಕ್ಕೆ ಧನುಪೂಜೆಗೆ ತೆರಳುತ್ತಿದ್ದರು. ಜ.14ರಂದು ಮುಂಜಾನೆ 4 ಗಂಟೆ ಸುಮಾರಿಗೆ ಸುಮಂತ್ ಮನೆಯಿಂದ ಹೊರಟಿದ್ದಾನೆ. ಆದರೆ ಆತ ನಿರ್ದಿಷ್ಟ ಸಮಯಕ್ಕೆ ದೇವಸ್ಥಾನಕ್ಕೆ ತಲುಪದ ಕಾರಣ, ಇತರ ಇಬ್ಬರು ಬಾಲಕರು ಆತನಿಗಾಗಿ ಕಾಯದೆ ದೇವಸ್ಥಾನಕ್ಕೆ ತೆರಳಿದ್ದರು.

ನಂತರ ಸಂಶಯಗೊಂಡ ಬಾಲಕರು ಸುಮಂತ್ ಮನೆಯವರಿಗೆ ಕರೆ ಮಾಡಿದಾಗ, ಆತ ಮುಂಜಾನೆಯೇ ದೇವಸ್ಥಾನಕ್ಕೆ ಹೋಗಿದ್ದಾನೆ ಎಂದು ಮನೆಯವರು ತಿಳಿಸಿದ್ದಾರೆ. ಆದರೆ ಸುಮಂತ್ ದೇವಸ್ಥಾನಕ್ಕೆ ಬಂದಿಲ್ಲ ಎಂಬ ಮಾಹಿತಿ ತಿಳಿದ ಬಳಿಕ ಕುಟುಂಬಸ್ಥರು ಆತಂಕಗೊಂಡು ಸ್ಥಳೀಯರಿಗೆ ವಿಷಯ ತಿಳಿಸಿದರು.

ಬಾಲಕ ಬರುವ ದಾರಿಯ ಸಮೀಪದ ಕೆರೆಯ ಬಳಿ ರಕ್ತದ ಕಲೆಗಳು ಕಂಡುಬಂದ ಹಿನ್ನೆಲೆಯಲ್ಲಿ ಪೊಲೀಸರು, ಅರಣ್ಯ ಇಲಾಖೆ, ಅಗ್ನಿಶಾಮಕ ದಳ ಹಾಗೂ ಸ್ಥಳೀಯರು ಹುಡುಕಾಟ ನಡೆಸಿದರು. ಕೊನೆಗೆ  ಸುಮಾರು 11.30 ರ ವೇಳೆಗೆ ಸುಮಂತ್‌ನ ಮೃತದೇಹ ಕೆರೆಯಲ್ಲಿ ಪತ್ತೆಯಾಗಿದೆ. ಬಾಲಕನ ತಲೆಯ ಭಾಗದಲ್ಲಿ ಗಂಭೀರ ಗಾಯಗಳಿರುವುದು ಕಂಡುಬಂದಿದ್ದು, ಸಾವಿನ ಕುರಿತು ಹಲವು ಅನುಮಾನಗಳು ವ್ಯಕ್ತವಾಗಿವೆ.

ಪರಿಶೀಲನೆ:

ಘಟನಾ ಸ್ಥಳಕ್ಕೆ‌ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅರುಣ್‌ ಕುಮಾರ್, ಬೆಳ್ತಂಗಡಿ ಪೊಲೀಸ್ ಇನ್ಸ್‌ಪೆಕ್ಟರ್ ಸುಬ್ಬಾಪುರ ಮಠ, ಸಬ್ ಇನ್ಸ್‌ಪೆಕ್ಟರ್ ಆನಂದ್ ಎಂ., ತಹಶೀಲ್ದಾರ್ ಪೃಥ್ವಿ ಸಾನಿಕಂ, ಆರ್‌ಐ ಪಾವಡಪ್ಪ, ಬಿಇಒ ತಾರಕೇಶ್ವರಿ, ಆಡಳಿತಾಧಿಕಾರಿಗಳು, ಶಾಲಾ ಶಿಕ್ಷಕರು ಸೇರಿದಂತೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.




Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News