ಪುತ್ರನ ವಂಚನೆ ಪ್ರಕರಣ: ಪುತ್ತೂರಿನ ಬಿಜೆಪಿ ಮುಖಂಡ ಜಗನ್ನಿವಾಸ್ ರಾವ್ ಪಕ್ಷದಿಂದ ಉಚ್ಛಾಟನೆ
ಜಗನ್ನಿವಾಸ್ ರಾವ್
ಮಂಗಳೂರು: ಪುತ್ತೂರಿನಲ್ಲಿ ಯುವತಿಗೆ ಮದುವೆಯಾಗುವುದಾಗಿ ನಂಬಿಸಿ ಕೃಷ್ಣ ಜೆ ರಾವ್ ಮೋಸ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿ ಆತನ ತಂದೆ ಬಿಜೆಪಿಯ ನಾಯಕ ಜಗನ್ನಿವಾಸ ರಾವ್ ಅವರನ್ನು ಬಿಜೆಪಿಯಿಂದ ಉಚ್ಛಾಟನೆ ಮಾಡಲಾಗಿದೆ ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ಸತೀಶ್ ಕುಂಪಲ ಸ್ಪಷ್ಟನೆ ನೀಡಿದ್ದಾರೆ.
ಜಗನ್ನಿವಾಸ ರಾವ್ ಪುತ್ರನ ವಂಚನೆ ಪ್ರಕರಣ ಬೆಳಕಿಗೆ ಬಂದ ತಕ್ಷಣ ಅವರಿಗೆ ನೋಟಿಸ್ ನೀಡಿ ಅವರನ್ನು ಪಕ್ಷದಿಂದ ದೂರ ಇಟ್ಟಿದ್ದೆವು. ಆಗ ಅವರು ಕಾನೂನಾತ್ಮವಾಗಿ, ಡಿಎನ್‌ಎ ಪರೀಕ್ಷೆಯಲ್ಲಿ ಸಾಬೀತಾದರೆ ತೊಂದರೆಗೊಳಗಾದ ಯುವತಿಯೊಂದಿಗೆ ಮಗನ ಮದುವೆ ಮಾಡಿಸುವುದಾಗಿ ಜಗನ್ನಿವಾಸ ರಾವ್ ನಮ್ಮಲ್ಲಿ ಹೇಳಿದ್ದರು. ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಅವರಲ್ಲೂ ಭರವಸೆ ನೀಡಿದ್ದರು. ಆದರೆ ಅವರು ಕೊಟ್ಟ ಮಾತಿನಂತೆ ನಡೆದುಕೊಂಡಿಲ್ಲ. ಹೀಗಾಗಿ ಜಗನ್ನಿವಾಸ ರಾವ್ ಅವರನ್ನು ಪಕ್ಷದಿಂದ ಹೊರ ಹಾಕಲಾಗಿದೆ. ಯುವತಿಗೆ ನ್ಯಾಯ ದೊರಕಿಸಿಕೊಡುವ ತನಕ ಪ್ರಯತ್ನ ಮುಂದುವರಿಸುವುದಾಗಿ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾಜಿ ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು,ಪ್ರಮುಖರಾದ ವಸಂತ ಜೆ ಪೂಜಾರಿ, ಅರುಣ್ ಜಿ ಶೇಟ್ ಮತ್ತಿತರರು ಉಪಸ್ಥಿತರಿದ್ದರು.