ಧರ್ಮಸ್ಥಳ ಪ್ರಕರಣ: ಮಂಗಳೂರಿಗೆ ಎಸ್‌ಐಟಿ ತಂಡ ಆಗಮನ
Update: 2025-07-25 18:31 IST
ಮಂಗಳೂರು: ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂಳಲಾಗಿದೆ ಎನ್ನಲಾದ ಪ್ರಕರಣದ ತನಿಖೆಗೆ ರಚಿಸಲಾದ ಎಸ್.ಐ.ಟಿ. ತಂಡದ ಅಧಿಕಾರಿಗಳು ಶುಕ್ರವಾರ ಮಂಗಳೂರಿನಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳ ಜೊತೆ ಸಭೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
ಪಶ್ಚಿಮ ವಲಯ ಐಜಿಪಿ ಅಮಿತ್ ಸಿಂಗ್ ಸಹಿತ ಇತರ ಪೊಲೀಸ್ ಅಧಿಕಾರಿಗಳೊಂದಿಗೆ ಎಸ್‌ಐಟಿ ತಂಡದ ಡಿಐಜಿ ಎಂ.ಎನ್. ಅನುಚೇತ್ ಸಭೆ ನಡೆಸಿರುವುದಾಗಿ ಮೂಲಗಳು ತಿಳಿಸಿವೆ.
ಧರ್ಮಸ್ಥಳದಲ್ಲಿ ನಡೆದಿರುವ ನಿಗೂಢ ಸಾವು ಪ್ರಕರಣಗಳ ತನಿಖೆಗಾಗಿ ರಚನೆಗೊಂಡಿರುವ ವಿಶೇಷ ತನಿಖಾ ತಂಡವು ಬೆಂಗಳೂರಿನಿಂದ ಮಂಗಳೂರಿಗೆ ಆಗಮಿಸಿದೆ. ಬೆಳ್ತಂಗಡಿ ಮತ್ತು ಧರ್ಮಸ್ಥಳ ಪೊಲೀಸ್ ಠಾಣೆಗೆ ತೆರಳಿ ಈ ತಂಡವು ತನಿಖೆ ಆರಂಭಿಸಲಿದೆ ಎಂದು ತಿಳಿದು ಬಂದಿದೆ.