×
Ad

ವೈಸಿಎಸ್‌, ವೈಎಸ್ಎಂ ಮಾಜಿ ರಾಷ್ಟ್ರೀಯ ನಿರ್ದೇಶಕ ಫಾ. ವಿನ್ಸೆಂಟ್‌ ಮೊಂತೆರೊ ನಿಧನ

Update: 2025-08-29 14:11 IST

ಮಂಗಳೂರು,ಆ.29; ಮಂಗಳೂರು ಧರ್ಮ ಪ್ರಾಂತ್ಯದ ಧರ್ಮಗುರು ಫಾ. ವಿನ್ಸೆಂಟ್‌ ಮೊಂತೇರೊ (71) ಅವರು ಮಂಗಳೂರಿನ ಜಪ್ಪು ಸೈಂಟ್ ಜೋಸೆಫ್‌ ವಾಜ್ ಹೋಂ ನಲ್ಲಿ ಶುಕ್ರವಾರ ನಿಧನ ಹೊಂದಿದರು. 

ಮೂಲತ: ಮಂಗಳೂರಿನ ಆಂಜೆಲೋರ್ ಚರ್ಚ್ ವ್ಯಾಪ್ತಿಯ ನಿವಾಸಿಯಾಗಿದ್ದ ಫಾ. ವಿನ್ಸೆಂಟ್‌ ಮೊಂತೇರೊ ಅವರು 1981 ರಲ್ಲಿ ಧರ್ಮಗುರು ದೀಕ್ಷೆ ಸ್ವೀಕರಿಸಿದ್ದರು. ಬಳಿಕ ನಾಲ್ಕು ದಶಕಗಳ ಕಾಲ ಧರ್ಮಗುರುಗಳಾಗಿ ಸೇವೆ ಸಲ್ಲಿಸಿದ್ದರು. ಕಿನ್ನಿಗೋಳಿ ಸಮೀಪದ ಕಿರೆಮ್‌ ಚರ್ಚ್‌ ನಲ್ಲಿ ಸಹಾಯಕ ಗುರುಗಳಾಗಿ ಮತ್ತು ಬಳಿಕ ಮಂಗಳೂರಿನ ಜಪ್ಪು ಸಂತ ಅಂತೋನಿ ಆಶ್ರಮದ ಸಹಾಯಕ ನಿರ್ದೇಶಕರಾಗಿ ತಮ್ಮ ಸೇವೆಯನ್ನು ಪ್ರಾರಂಭಿಸಿದ್ದರು. ಧಾರ್ಮಿಕ ಸೇವೆಯ ಜತೆಗೆ ಮಂಗಳೂರು ಧರ್ಮ ಪ್ರಾಂತ್ಯದ ಯುವಜನರ ಸಂಘಟನೆಗಳಾದ ಐಸಿಯವೈಎಂ, ವೈಸಿಎಸ್ ಮತ್ತು ವೈಎಸ್‌ಎಂ ನಿರ್ದೇಶಕರಾಗಿ ಹಾಗೂ ಬಳಿಕ ಪ್ರಾದೇಶಿಕ ನಿರ್ದೇಶಕ ಮತ್ತು 1989–1995 ಅವಧಿಯಲ್ಲಿ ರಾಷ್ಟ್ರೀಯ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದ್ದರು. ಯುವಜನ ಸೇವೆಯಲ್ಲಿನ ಬದ್ಧತೆಯನ್ನು ಗುರುತಿಸಿ 2004 ರಲ್ಲಿ ವೈಸಿಎಸ್‌ನ ಏಷ್ಯಾ ವಿಭಾಗದ ಚಾಪ್ಲೈನ್ ಆಗಿಯೂ ಅವರನ್ನು ನೇಮಕ ಮಾಡಲಾಗಿತ್ತು.

ಉಡುಪಿ ಜಿಲ್ಲೆಯ ಪಾಂಗಾಳ, ಕಿನ್ನಿಗೋಳಿ ಹಾಗೂ ಅಂತಿಮವಾಗಿ ಮಂಗಳೂರಿನ ಬೆಂದೂರ್ ಚರ್ಚ್ ನಲ್ಲಿ ಧರ್ಮಗುರುಗಳಾಗಿ ಸೇವೆ ಸಲ್ಲಿಸಿದ್ದರು. ಕ್ಯಾಥೊಲಿಕ್ ಸಭಾ ಸಂಘಟನೆಯ ಆಧ್ಯಾತ್ಮಿಕ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದ್ದರು.

ಅವರ ಅಂತ್ಯಕ್ರಿಯೆಯ ಬಲಿಪೂಜೆ ಮತ್ತು ಅಂತ್ಯ ವಿಧಿಗಳು ಆಗಸ್ಟ್ 31 ರಂದು ಭಾನುವಾರ ಸಂಜೆ 4 ಗಂಟೆಗೆ ವೆಲೆನ್ಸಿಯಾದ ಸೈಂಟ್ ವಿನ್ಸೆಂಟ್ ಫೆರರ್ ಚರ್ಚ್‌ನಲ್ಲಿ ನಡೆಯಲಿವೆ.

ಕ್ಯಾಥೊಲಿಕ್ ಸಭಾ ಸಂಘಟನೆಯ ಆಧ್ಯಾತ್ಮಿಕ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದ್ದ ವಂ.ವಿನ್ಸೆಂಟ್‌ ಮೊಂತೇರೊ ಅವರ ನಿಧನಕ್ಕೆ ಕ್ಯಾಥೊಲಿಕ್ ಕೇಂದ್ರೀಯ ಸಮಿತಿಯ ಅಧ್ಯಕ್ಷ ಸಂತೋಷ್‌ ಡಿ'ಸೋಜಾ ಮತ್ತು ಪದಾಧಿಕಾರಿಗಳು ಸಂತಾಪ ಸೂಚಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News