ಮಂಗಳೂರು| ಬಲ್ಕುಂಜೆ ಗ್ರಾಮದಲ್ಲಿ ಮೇಲ್ವರ್ಗದವರ ಬಾವಿಯಿಂದ ನೀರನ್ನು ಕೆಳವರ್ಗದವರು ಸೇದುವಂತಿಲ್ಲ
► ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸಭೆಯಲ್ಲಿ ದಲಿತ ಮುಖಂಡರ ಆರೋಪ
ಮಂಗಳೂರು: ತಾಲೂಕಿನ ಬಲ್ಕುಂಜೆ ಗ್ರಾಮದಲ್ಲಿ ಇನ್ನೂ ಕೂಡಾ ಅಸ್ಪ್ರಶ್ಯತೆ ಉಳಿದುಕೊಂಡಿದೆ. ಮೇಲ್ವರ್ಗದವರ ಬಾವಿಯಿಂದ ನೀರನ್ನು ಸೇದುವಂತಿಲ್ಲ, ನೀರು ಎತ್ತುವ ಹಗ್ಗವನ್ನು ಮುಟ್ಟುವಂತಿಲ್ಲ ಎಂಬ ವಿಚಾರ ರವಿವಾರ ನಗರ ಪೊಲೀಸ್ ಆಯುಕ್ತರ ಕಚೇರಿ ಸಭಾಂಗಣದಲ್ಲಿ ನಡೆದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಕುಂದು ಕೊರತೆ ಸಭೆಯಲ್ಲಿ ವ್ಯಕ್ತವಾಯಿತು.
ನಗರ ಉಪ ಪೊಲೀಸ್ ಆಯುಕ್ತ ಮಿಥುನ್ ಎಚ್.ಎನ್. ಸಭೆಯ ಅಧ್ಯಕ್ಷತೆ ವಹಿಸಿದ್ದರು. ದಲಿತ ಮುಖಂಡ ಸದಾಶಿವ ಅವರು ಈ ವಿಚಾರದ ಬಗ್ಗೆ ಗಮನ ಸೆಳೆದರು.
ಕಾಟಿಪಳ್ಳದ ಜಯ ಅವರು ಬಲ್ಕುಂಜೆಯ ಗ್ರಾಮದಲ್ಲಿ ಶಾಂತಾ ಎಂಬವರ ಹೆಂಚಿನ ಮನೆ ಗಾಳಿ ಮಳೆಗೆ ಹಾನಿ ಯಾಗಿ ಆರು ತಿಂಗಳು ಕಳೆದರೂ ದುರಸ್ತಿ ಆಗಿಲ್ಲ ಎಂದು ದೂರಿದರು.
ಅತ್ಯಂತ ಬಡ ಕುಟುಂಬ ವಾಸವಾಗಿದ್ದು ತಾಯಿ-ಮಗಳು ಬೀಡಿ ಕಟ್ಟಿ ಜೀವನ ಸಾಗಿಸುತ್ತಿದ್ದಾರೆ. ಗ್ರಾಮ ಪಂಚಾಯತ್ ಕೂಡಾ ಗಮನ ಹರಿಸಿಲ್ಲ. ಮನೆಯ ಮಾಡಿಗೆ ಟರ್ಪಾಲ್ ಹಾಕಿದ್ದಾರೆ. ಮನೆಯ ಒಳಗೆ ಮಳೆ ನೀರು ಬೀಳುತ್ತಿದೆ ಎಂದರು.
ಈ ವಿಚಾರದ ಬಗ್ಗೆ ಗ್ರಾಮ ಪಂಚಾಯತ್‌ಗೆ ಇತ್ತೀಚೆಗೆ ಕೇಳಲು ಹೋದಾಗ ಗ್ರಾಮ ಪಂಚಾಯತ್‌ನ ಕಚೇರಿಯಲ್ಲಿ ಅಂಬೇಡ್ಕರ್ ಫೋಟೊ ಇಲ್ಲದಿರುವುದು ಗೊತ್ತಾಯಿತು. ನಾವು ಈ ಬಗ್ಗೆ ಪ್ರಶ್ನಿಸಿದಾಗ ಗ್ರಾಮ ಪಂಚಾಯತ್ ಅಧ್ಯಕ್ಷರು ಮನೆಗೆ ಪೂಜೆ ಮಾಡಲು ಫೋಟೊ ಕೊಂಡು ಹೋಗಿದ್ದ ಸಮಯದಲ್ಲಿ ಕೆಳಗೆ ಬಿದ್ದು ಫೋಟೊಗೆ ಹಾನಿಯಾಗಿದೆ ಎಂಬ ವಿಚಾರ ತಿಳಿಸಿದರು.
ಅಂಬೇಡ್ಕರ್ ಫೋಟೊ ಇಡಲು ಅಲ್ಲಿನ ಗ್ರಾಮ ಪಂಚಾಯತ್‌ನವರಿಗೆ ಆಸಕ್ತಿ ಇಲ್ಲ. ‘ ದೇವರ ಫೋಟೊ ಇರುವಾಗ ಅಂಬೇಡ್ಕರ್ ಫೋಟೊ ಕಚೇರಿಯಲ್ಲಿ ಇಡಬೇಕಾಗಿಲ್ಲ’ ಎಂದು ಸದಸ್ಯರೊಬ್ಬರು ಹೇಳಿದ್ದರು. ‘ಅಂಬೇಡ್ಕರ್ ಫೋಟೊ ಸರಕಾರಿ ಕಚೇರಿಯಲ್ಲಿ ಇಡಬೇಕೆಂಬ ಸುತ್ತೋಲೆ ಇದೆ ಎಂದು ಡಿಸಿಪಿ ಮಿಥುನ್ ಅವರು ತಿಳಿಸಿದರು.
ಮಂಗಳೂರಿನ ಜ್ಯೋತಿ ಬಳಿ ಅಂಬೇಡ್ಕರ್ ವೃತ್ತ ರಚನೆ ಮತ್ತು ಅಂಬೇಡ್ಕರ್ ಪ್ರತಿಮೆ ರಚನೆಗೆ ಶಿಲಾನ್ಯಾಸ ನೆರವೇರಿಸಿ ವರ್ಷ ಕಳೆದರೂ ಕಾಮಗಾರಿ ಆರಂಭಗೊಂಡಿಲ್ಲ ಎಂದು ದಲಿತ ಮುಖಂಡ ಸುಧಾಕರ್ ಸಭೆಯ ಗಮನ ಸೆಳೆದರು.
ಪ್ರವೇಶಾತಿಗೆ ಕುಲಪತಿ, ಕುಲಸಚಿವರಿಂದ ಅಡ್ಡಿ ಆರೋಪ:-
ಮಂಗಳೂರು ವಿಶ್ವ ವಿದ್ಯಾನಿಲಯದ ಕುಲಪತಿ ಮತ್ತು ಕುಲಸಚಿವರು ಎಂಸಿಜಿ ವಿಭಾಗಕ್ಕೆ ವಿದ್ಯಾರ್ಥಿಗಳ ಪ್ರವೇಶಾತಿಗೆ ಅಡಚಣೆ ಮಾಡಿ ದೌರ್ಜನ್ಯ ಎಸಗುತ್ತಿದ್ದಾರೆ ಎಂದು ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥರಾದ ಎಂ.ಪಿ. ಉಮೇಶ್ ಚಂದ್ರ ಅವರು ಸಭೆಯಲ್ಲಿ ಗಂಭೀರ ಆರೋಪ ಮಾಡಿ ದೂರು ನೀಡಿದ ಘಟನೆಯು ಸಭೆಯಲ್ಲಿ ನಡೆಯಿತು.
ಕುಲಪತಿ ಪಿ.ಎಲ್ ಧರ್ಮ ಅವರು ಹೊರರಾಜ್ಯದ ತಮಿಳು ಭಾಷಿಕರಾಗಿರುತ್ತಾರೆ. ಅಲ್ಲಿರುವ ಎಸ್‌ಸಿ ಜಾತಿ ಪ್ರಮಾಣ ಪತ್ರ ನಕಲಿ ಎಂದು ಆರೋಪಿಸಿದ ಉಮೇಶ್ ಚಂದ್ರ ಅವರು ಇದೀಗ ತಮ್ಮನ್ನು ಎಂಸಿಜೆ ವಿಭಾಗದ ಅಧ್ಯಕ್ಷ ಹುದ್ದೆಯಿಂದ ಎತ್ತಂಗಡಿ ಮಾಡಲು ಮುಂದಾಗಿದ್ದಾರೆ ಎಂದು ಆರೋಪಿಸಿದರು.
ಮಂಗಳೂರು ವಿಶ್ವವಿದ್ಯಾನಿಲಯದ ಎಂ.ಸಿ.ಜೆ ವಿಭಾಗದಲ್ಲಿ 2003 ರಲ್ಲಿ ಖಾಯಂ ನೆಲೆಯಲ್ಲಿ ಮತ್ತು ಕಾನೂನು ಯುಕ್ತಾನುಕ್ತ ಕ್ರಮದಲ್ಲಿ ಉಪನ್ಯಾಸಕನಾಗಿ (ಪ್ರಸಕ್ತ ಸಹಾಯಕ ಪ್ರಾಧ್ಯಾಪಕ) ಸೇವೆ ಮಾಡುತ್ತಿದ್ದು ಒಂದಲ್ಲ ಒಂದು ಕಾರಣಗಳನ್ನೊಡ್ಡಿ ತಮಗೆ ಕಿರುಕುಳ ಕೊಡುತ್ತಾ ಬರುತ್ತಿದ್ದಾರೆ. ಮೊದಲು ಬೋಧನಾ ಹುದ್ದೆಯಿಂದ ಬೋಧಕೇತರ ಅಧಿಕಾರಿ ಹುದ್ದೆಗೆ ಎತ್ತಂಗಡಿ ಮಾಡಿದ್ದರು. ಕಾರಣ ನಾನೊಬ್ಬ ಉತ್ತಮ ಬೋಧಕನಾಗಿದ್ದು ಅದಕ್ಕಾಗಿ ವಿದ್ಯಾರ್ಥಿಗಳ ಪ್ರಶಂಸೆ ಮತ್ತು ಅಭಿಮಾನಕ್ಕೆ ಒಳಗಾಗಿದ್ದೆ. ನನ್ನ ಮೇಲಿನ ಅಸೂಯೆಗೆ ಅಂತಹ ಅಭಿಮಾನ ಗೌರವಗಳನ್ನು ತಡೆದುಕೊಳ್ಳಲಾಗದ ನಮ್ಮ ವಿಭಾಗದ ಸಹೋದ್ಯೋಗಿಗಳು. ವಿಶ್ವವಿದ್ಯಾನಿಲಯದ ಅಧಿಕಾರಿಗಳು ನನ್ನ ಮೇಲೆ ಎತ್ತಂಗಡಿ ಪಿತೂರಿ ಮಾಡಿದರು. ಮೊದಲು ಇನ್ ಚಾರ್ಜ್ ಚೇರ್ಮೆನ್ ಆಗಿದ್ದ ಪಿ.ಎಲ್ ಧರ್ಮ ಅಸೂಯೆಯಿಂದ ಎತ್ತಂಗಡಿ ಮಾಡಲು ಪ್ರಯತ್ನಿಸಿದ್ದರು. ಆದರೆ ಅನಿವಾರ್ಯವಾಗಿ ಅವರು ನಿರ್ಗಮಿಸಿದಾಗ ನನಗೆ ಈ ವಿಭಾಗದ ಅಧ್ಯಕ್ಷನಾಗುವ ಅವಕಾಶ ಬಂತು. ಆದರೆ ಇದೀಗ ಕುಲಪತಿಯಾಗಿರುವ ಧರ್ಮ ಅವರು ಇದೀಗ ತಮ್ಮನ್ನು ಹುದ್ದೆ ಯಿಂದ ಎತ್ತಂಗಡಿ ಮಾಡುವುದಕ್ಕೆ ಮುಂದಾಗಿದ್ದಾರೆ ಎಂದು ಆರೋಪಿಸಿದರು.
ರಾಜ್ಯಪಾಲರು ಮತ್ತು ಉನ್ನತ ಶಿಕ್ಷಣ ಸಚಿವರ ಗಮನಕ್ಕೆ ತರುವಂತೆ ಡಿಸಿಪಿ ಸೂಚಿಸಿದರು.
ದೃಷ್ಟಿ ಕಳೆದುಕೊಂಡ ಪೌರ ಕಾರ್ಮಿಕ: ಪೌರಕಾರ್ಮಿಕರೊಬ್ಬರು ಹುಲ್ಲು ಕತ್ತರಿಸುವಾಗ ಅವರ ಕಣ್ಣಿಗೆ ಗಾಜಿನ ತುಂಡು ಬಿದ್ದಿದ್ದು, ಆದರೆ ಖಾಸಗಿ ಆಸ್ಪತ್ರೆಯೊಂದರಲ್ಲಿ ಸರಿಯಾದ ಚಿಕಿತ್ಸೆ ನೀಡದ ಕಾರಣದಿಂದಾಗಿ ಅವರ ಕಣ್ಣಿನ ದೃಷ್ಟಿ ಕಳೆದು ಹೋಗಿದೆ.
ಇಎಸ್‌ಐ ಮೂಲಕ ಖಾಸಗಿ ಶಸ್ತ್ರ ಚಿಕಿತ್ಸೆ ನಡೆಸಿದಾಗ ಕಣ್ಣಿಗೆ ಬಿದ್ದಿದ್ದ ಗಾಜಿನ ತುಂಡನ್ನು ತೆಗೆದಿರಲಿಲ್ಲ. ಇದರಿಂದಾಗಿ ಸಮಸ್ಯೆ ಕಾಣಿಸಿಕೊಂಡು ಇನ್ನೊಂದು ಆಸ್ಪತ್ರೆಗೆ ಹೋಗಿ ಶಸ್ತ್ರ ಚಿಕಿತ್ಸೆ ನಡೆಸಿ ಕಣ್ಣಿನಲ್ಲಿ ಉಳಿದು ಕೊಂಡಿದ್ದ ಗಾಜಿನ ತುಂಡನ್ನು ತೆಗೆಯಲಾಗಿದೆ. ಮೊದಲು ಶಸ್ತ್ರ ಚಿಕಿತ್ಸೆ ಕೈಗೊಂಡ ಖಾಸಗಿ ಆಸ್ಪತ್ರೆಯ ದಿವ್ಯ ನಿರ್ಲಕ್ಷ್ಯದ ಕಾರಣದಿಂದಾಗಿ ಪೌರಕಾರ್ಮಿಕನಿಗೆ ದೃಷ್ಟಿದೋಷ ಉಂಟಾಗಿದೆ. ಅವರು ಒಂದು ಕಣ್ಣು ಕಾಣಿಸುತ್ತಿಲ್ಲ ಇದಕ್ಕೆ ಯಾರು ಹೊಣೆ ಎಂದು ದಲಿತ ಮುಖಂಡ ಎಸ್‌ಪಿ ಆನಂದ ಪ್ರಶ್ನಿಸಿದರು.
ಉತ್ತರಿಸಿದ ಡಿಸಿಪಿ ಮಿಥುನ್ ಅವರು ಈ ಬಗ್ಗೆ ಡಿಎಚ್‌ಒ ಅವರಿಗೆ ದೂರು ನೀಡಬಹುದು ಎಂದರು. ಬೆಂಗಳೂರಿನ ಕರ್ನಾಟಕ ಮೆಡಿಕಲ್ ಕೌನ್ಸಿಲ್‌ಗೂ ದೂರು ನೀಡಿ. ಅವರು ವಿಚಾರಣೆ ನಡೆಸುತ್ತಾರೆ. ವೈದ್ಯರನ್ನು ವಜಾ ಮಾಡುವ ಅಧಿಕಾರವೂ ಅವರಿಗೆ ಇದೆ ಎಂದು ಅಪರಾಧ ವಿಭಾಗದ ಡಿಸಿಪಿ ರವಿಶಂಕರ್ ಸಲಹೆ ನೀಡಿದರು.
ಡಿಸಿಆರ್‌ಇ ಎಸ್ಪಿ ಸೈಮನ್, ಎಸಿಪಿಗಳಾದ ವಿಜಯಕ್ರಾಂತಿ , ಶ್ರೀಕಾಂತ್, ಪ್ರತಾಪ್ ಸಿಂಗ್ ಥೋರಟ್ , ವಿವಿಧ ಠಾಣಾಧಿಕಾರಿಗಳು ಉಪಸ್ಥಿತರಿದ್ದರು.