ಮಂಗಳೂರು : ಶೆಫರ್ಡ್ಸ್‌ ಶಾಹೀನ್‌ ಪಿಯು ಕಾಲೇಜಿನಲ್ಲಿ NEET-2026 ಸಾಧಕರಿಗೆ ಸನ್ಮಾನ

Update: 2026-07-24 14:53 IST

ಮಂಗಳೂರು, ಜು. 23: ಶೆಫರ್ಡ್ಸ್‌ ಶಾಹೀನ್‌ ಪಿಯು ಕಾಲೇಜು ಹಾಗೂ ಶಾಹೀನ್‌ ಗ್ರೂಪ್‌ ಆಫ್‌ ಇನ್‌ಸ್ಟಿಟ್ಯೂಷನ್ಸ್‌ ಸಂಯುಕ್ತ ಆಶ್ರಯದಲ್ಲಿ ‘NEET-2026 ಸಾಧಕರ ಸನ್ಮಾನ ಸಮಾರಂಭ’ ಗುರುವಾರ ನಡೆಯಿತು.

ಸಂಸ್ಥೆಯ ಮೊದಲ NEET ರಿಪೀಟರ್ಸ್‌ ಬ್ಯಾಚ್‌ನ ವಿದ್ಯಾರ್ಥಿಗಳ ಸಾಧನೆಯನ್ನು ಗೌರವಿಸುವ ಜೊತೆಗೆ ವೈದ್ಯಕೀಯ ಶಿಕ್ಷಣ ಕ್ಷೇತ್ರದಲ್ಲಿ ಮತ್ತಷ್ಟು ಸಾಧನೆಗೆ ಪ್ರೇರಣೆ ನೀಡುವ ಉದ್ದೇಶದಿಂದ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶೆಫರ್ಡ್ಸ್‌ ಇಂಟರ್‌ನ್ಯಾಷನಲ್‌ ಅಕಾಡೆಮಿ ಹಾಗೂ ಶೆಫರ್ಡ್ಸ್‌ ಶಾಹೀನ್‌ ಪಿಯು ಕಾಲೇಜಿನ ಅಧ್ಯಕ್ಷ ಆರ್ಕಿಟೆಕ್ಟ್‌ ಮುಹಮ್ಮದ್‌ ನಿಸಾರ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಎ.ಕೆ ಗ್ರೂಪ್‌ನ ಪೋಷಕ ನಿಯಾಝ್‌ ಎ.ಕೆ., ಡಾ. ಹಸನ್‌ ಇಮ್ರಾನ್‌ ಮೊಹ್ತೇಶಮ್‌ (Ph.D.), ಕಣಚೂರು ಇನ್‌ಸ್ಟಿಟ್ಯೂಟ್‌ ಆಫ್‌ ಮೆಡಿಕಲ್‌ ಸೈನ್ಸಸ್‌ನ ನಿರ್ದೇಶಕ ಅಬ್ದುಲ್‌ ರಹ್ಮಾನ್, ಖಜಾಂಚಿ ಸಾಜಿದ್‌ ಎ.ಕೆ., ಕಾರ್ಯದರ್ಶಿ ರಿಝ್ವಾನ್ ಪಾಂಡೇಶ್ವರ್, ಟ್ರಸ್ಟಿಗಳಾದ ಎಸ್‌.ಎಂ. ಫಾರೂಕ್‌, ನಝೀಮ್‌ ಎ.ಕೆ. ಹಾಗೂ ನೌಶಾದ್‌ ಎ.ಕೆ., ನಿರ್ದೇಶಕಿ ಡಾ. ನಫೀಸಾ ಶೆರಿನ್ ಮತ್ತು ಪ್ರಾಂಶುಪಾಲೆ ಲುಬ್ನಾ ಬಾನು ಉಪಸ್ಥಿತರಿದ್ದರು.

ಪವಿತ್ರ ಕುರ್‌ಆನ್‌ ಪಠಣದೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಪ್ರಾಂಶುಪಾಲೆ ಲುಬ್ನಾ ಬಾನು ಸ್ವಾಗತಿಸಿ, ವಿದ್ಯಾರ್ಥಿಗಳ ಸಾಧನೆಗೆ ಅಭಿನಂದನೆ ಸಲ್ಲಿಸಿದರು. ಅವರ ಯಶಸ್ಸಿನ ಹಿಂದೆ ಪೋಷಕರು, ಶಿಕ್ಷಕರು ಹಾಗೂ ಆಡಳಿತ ಮಂಡಳಿಯ ಸಮರ್ಪಣೆಯೂ ಪ್ರಮುಖ ಪಾತ್ರ ವಹಿಸಿದೆ ಎಂದು ಹೇಳಿದರು. ಕಾರ್ಯಕ್ರಮವನ್ನು ದೀಕ್ಷಾ ನಿರೂಪಿಸಿದರು.

ಮುಖ್ಯ ಅತಿಥಿಯಾಗಿ ಮಾತನಾಡಿದ ಡಾ. ಹಸನ್‌ ಇಮ್ರಾನ್‌ ಮೊಹ್ತೇಶಮ್‌, ಜೀವನದಲ್ಲಿ ಎದುರಾಗುವ ಸವಾಲುಗಳು ಯಶಸ್ಸಿನ ದಾರಿಯನ್ನು ತೆರೆದಿಡುತ್ತವೆ ಎಂದರು. ಸಂಕಷ್ಟದ ಸಂದರ್ಭದಲ್ಲಿಯೂ ಅಲ್ಲಾಹನ ಮೇಲಿನ ವಿಶ್ವಾಸ ಕಳೆದುಕೊಳ್ಳದೆ ತಾಳ್ಮೆ ಮತ್ತು ದೃಢಸಂಕಲ್ಪದಿಂದ ಗುರಿಯತ್ತ ಸಾಗುವಂತೆ ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಕಣಚೂರು ಇನ್‌ಸ್ಟಿಟ್ಯೂಟ್‌ ಆಫ್‌ ಮೆಡಿಕಲ್‌ ಸೈನ್ಸಸ್‌ನ ನಿರ್ದೇಶಕ ಅಬ್ದುಲ್‌ ರಹ್ಮಾನ್‌ ಮಾತನಾಡಿ, ವಿದ್ಯಾರ್ಥಿಗಳು AIIMS ಸೇರಿದಂತೆ ದೇಶದ ಪ್ರತಿಷ್ಠಿತ ವೈದ್ಯಕೀಯ ಶಿಕ್ಷಣ ಸಂಸ್ಥೆಗಳನ್ನು ಗುರಿಯಾಗಿಸಿಕೊಳ್ಳಬೇಕು ಎಂದು ಹೇಳಿದರು. ಈ ಬಾರಿ ನಿರೀಕ್ಷಿತ ಫಲಿತಾಂಶ ದೊರಕದ ವಿದ್ಯಾರ್ಥಿಗಳು ನಿರಾಶರಾಗದೆ ಪರಿಶ್ರಮ ಮುಂದುವರಿಸಬೇಕು ಎಂದು ಸಲಹೆ ನೀಡಿದರು.

ಜೀವಶಾಸ್ತ್ರ ವಿಭಾಗದ ಉಪನ್ಯಾಸಕ ಮುಸ್ತಫಾ ರಿಜ್ವಿ ಹಾಗೂ ರಸಾಯನಶಾಸ್ತ್ರ ವಿಭಾಗದ ಉಪನ್ಯಾಸಕ ಶೆಹ್ಜಾದ್‌ ಕರೀಂ ಮಾತನಾಡಿ, ಜೀವನದಲ್ಲಿ ಎದುರಾಗುವ ಸೋಲುಗಳಿಂದ ಹಿಂಜರಿಯದೆ, ಅಲ್ಲಾಹನ ಮೇಲಿನ ನಂಬಿಕೆ, ತಾಳ್ಮೆ ಮತ್ತು ನಿರಂತರ ಪರಿಶ್ರಮದೊಂದಿಗೆ ಮುನ್ನಡೆಯುವಂತೆ ವಿದ್ಯಾರ್ಥಿಗಳಿಗೆ ಪ್ರೇರಣೆ ನೀಡಿದರು. ಗುಣಮಟ್ಟದ ಶಿಕ್ಷಣ ಹಾಗೂ ವಿಶ್ವಮಟ್ಟದ ತರಬೇತಿಗೆ ನಿರಂತರ ಬೆಂಬಲ ನೀಡುತ್ತಿರುವ ಆಡಳಿತ ಮಂಡಳಿಗೆ ಕೃತಜ್ಞತೆ ಸಲ್ಲಿಸಿದರು.

ಟ್ರಸ್ಟಿ ಎಸ್‌.ಎಂ. ಫಾರೂಕ್‌ ಮಾತನಾಡಿ, ವಿದ್ಯಾರ್ಥಿಗಳ ಪರಿಶ್ರಮ, ತ್ಯಾಗ ಹಾಗೂ ತಾಳ್ಮೆಯನ್ನು ಶ್ಲಾಘಿಸಿದರು. ಇದೇ ಮನೋಭಾವದಿಂದ ಮುಂದಿನ ದಿನಗಳಲ್ಲಿಯೂ ಉನ್ನತ ಸಾಧನೆ ಮುಂದುವರಿಸಬೇಕೆಂದು ಹಾರೈಸಿದರು.

NEET ಸಾಧಕರ ಪೋಷಕರು ಮಾತನಾಡಿ, ವಿದ್ಯಾರ್ಥಿಗಳ ಯಶಸ್ಸಿಗೆ ಮಾರ್ಗದರ್ಶನ ನೀಡಿದ ಆಡಳಿತ ಮಂಡಳಿ, ಶಿಕ್ಷಕರು ಹಾಗೂ ಮಾರ್ಗದರ್ಶಕರಿಗೆ ಕೃತಜ್ಞತೆ ಸಲ್ಲಿಸಿದರು.

ಅಧ್ಯಕ್ಷ ಆರ್ಕಿಟೆಕ್ಟ್‌ ಮೊಹಮ್ಮದ್‌ ನಿಸಾರ್‌ ಮಾತನಾಡಿ, ಸಾಧನೆ ಮಾಡಿದ ವಿದ್ಯಾರ್ಥಿಗಳು ಹಾಗೂ ಅವರ ಪೋಷಕರನ್ನು ಅಭಿನಂದಿಸಿದರು. ಶಿಕ್ಷಕರ ಶ್ರಮವನ್ನು ಶ್ಲಾಘಿಸಿದ ಅವರು, ಗುಣಮಟ್ಟದ ಶಿಕ್ಷಣ, ಶಿಸ್ತುಬದ್ಧ ಕಲಿಕೆ ಹಾಗೂ ಮೌಲ್ಯಾಧಾರಿತ ಶಿಕ್ಷಣದ ಮೂಲಕ ವಿದ್ಯಾರ್ಥಿಗಳನ್ನು ಉನ್ನತ ಸಾಧನೆಯತ್ತ ಕೊಂಡೊಯ್ಯುವ ಬದ್ಧತೆಯನ್ನು ಸಂಸ್ಥೆ ಹೊಂದಿದೆ ಎಂದು ಹೇಳಿದರು.

ಸಂಸ್ಥೆಯ ಮೊದಲ NEET ರಿಪೀಟರ್ಸ್‌ ಬ್ಯಾಚ್‌ನ 15 ವಿದ್ಯಾರ್ಥಿಗಳು NEET-2026ರಲ್ಲಿ ಅರ್ಹತೆ ಪಡೆದಿದ್ದು, ಅವರಲ್ಲಿ ಐವರು ಉಚಿತ ವೈದ್ಯಕೀಯ ಸೀಟು ಪಡೆದಿದ್ದಾರೆ. ಅಲ್ಲದೆ, 46 ಶೇಕಡಾ ಅಂಕಗಳೊಂದಿಗೆ ಓರ್ವ ವಿದ್ಯಾರ್ಥಿ ಅಲ್ಪಸಂಖ್ಯಾತರ ಕೋಟಾದಡಿ ವೈದ್ಯಕೀಯ ಪ್ರವೇಶ ಪಡೆದಿರುವುದು ಸಂಸ್ಥೆಯ ಗಮನಾರ್ಹ ಸಾಧನೆಯಾಗಿದೆ.

ಕಾರ್ಯಕ್ರಮದಲ್ಲಿ ಸಾಧಕರನ್ನು ಸನ್ಮಾನಿಸಲಾಯಿತು. ಬಳಿಕ ಕೃತಜ್ಞತಾ ಸಮರ್ಪಣೆಯೊಂದಿಗೆ ಕಾರ್ಯಕ್ರಮ ಸಮಾಪ್ತಿಗೊಂಡಿತು. ಪೋಷಕರು, ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಹಿತೈಷಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

 

 

 

 

 

 

 

 

 

 

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News