ಮಂಗಳೂರು ತಾಲೂಕು ದಸರಾ ಕ್ರೀಡಾಕೂಟ ಉದ್ಘಾಟನೆ
ಗ್ರಾಪಂ ಮಟ್ಟದಲ್ಲೂ ಕ್ರೀಡಾಂಗಣ ನಿರ್ಮಾಣ: ಐವನ್ ಡಿಸೋಜ
ಮಂಗಳೂರು, ಆ.31: ರಾಜ್ಯದ ಎಲ್ಲಾಜಿಲ್ಲೆ, ತಾಲೂಕುಗಳಲ್ಲಿ ಈಗಾಗಲೇ ಕ್ರೀಡಾಂಗಣಗಳಿದ್ದು, ಮುಂದೆ ಗ್ರಾಪಂ ಮಟ್ಟದಲ್ಲಿಯೂ ಕ್ರೀಡಾಂಗಣ ನಿರ್ಮಾಣ ಮಾಡುವ ಯೋಜನೆ ಇದೆ ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಹೇಳಿದರು.
ದ.ಕ ಜಿಲ್ಲಾಡಳಿತ, ಜಿಪಂ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಮಂಗಳೂರು ಮಹಾನಗರ ಪಾಲಿಕೆ, ಮಂಗಳೂರು ತಾಪಂ, ಮೈ ಭಾರತ್ ದ.ಕ., ತಾಲೂಕು ಯುವಜನ ಒಕ್ಕೂಟ ಹಾಗೂ ವಿವಿಧ ಸಂಘಸಂಸ್ಥೆಗಳ ಆಶ್ರಯದಲ್ಲಿ ನಗರದ ಮಂಗಳ ಕ್ರೀಡಾಂಗಣದಲ್ಲಿ ರವಿವಾರ ನಡೆದ ಮಂಗಳೂರು ತಾಲೂಕು ಮಟ್ಟದ ದಸರಾ ಕ್ರೀಡಾಕೂಟ ಉದ್ಘಾಟಿಸಿ ಅವರು ಮಾತನಾಡಿದರು.
ರಾಜ್ಯ ಸರಕಾರ ಮಕ್ಕಳು ಮತ್ತು ಯುವಜನರ ಕ್ರೀಡಾ ಆಸಕ್ತಿಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಈಗಾಗಲೇ ಸಾಕಷ್ಟು ಯೋಜನೆಗಳನ್ನು ಹಮ್ಮಿಕೊಂಡಿದೆ. ಎಲ್ಲ ಸರಕಾರಿ, ಖಾಸಗಿ, ಅನುದಾನಿತ ಶಾಲೆಗಳಲ್ಲಿ ಕಡ್ಡಾಯವಾಗಿ ದೈಹಿಕ ಶಿಕ್ಷಣಕ್ಕೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ದೈಹಿಕ ಶಿಕ್ಷಕರ ನೇಮಕಾತಿಯನ್ನು ಹೆಚ್ಚಿಸುವ ಕೆಲಸವನ್ನು ಮಾಡಲಿದೆ ಎಂದರು.
ನಗರದ ಮಂಗಳಾ ಕ್ರೀಡಾಂಗಣಕ್ಕೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಕ್ರೀಡಾಕೂಟ ಉದ್ಘಾಟನೆಯ ವೇಳೆ ನೀಡಿದ ಹೇಳಿಕೆಯಂತೆ ಮೂರು ಕೋಟಿ ರೂ. ಅನುದಾನ ಮಂಜೂರಾಗಿದೆ. ಕ್ರೀಡಾಂಗಣದ ಕಾಮಗಾರಿಯ ಟೆಂಡರ್ ಪ್ರಕ್ರಿಯೆ ಮಾತ್ರ ಬಾಕಿ ಉಳಿದಿದೆ. ಅದು ಪೂರ್ಣಗೊಂಡ ಬಳಿಕ ನಾನಾ ಕ್ರೀಡಾಕೂಟ ಸೇರಿದಂತೆ ಇಲ್ಲಿನ ಕ್ರೀಡಾ ಪ್ರತಿಭೆಗಳಿಗೆ ಪ್ರಯೋಜನವಾಗಲಿದೆ ಎಂದು ಐವನ್ ಡಿಸೋಜ ಹೇಳಿದರು.
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಯಕ ನಿರ್ದೇಶಕ ಪ್ರದೀಪ್ ಡಿಸೋಜ ಪ್ರಸ್ತಾವಿಕವಾಗಿ ಮಾತನಾಡಿ, ದಸರಾ ಮತ್ತು ರಾಷ್ಟ್ರೀಯ ಕ್ರೀಡಾ ದಿನಾಚರಣೆಯ ಅಂಗವಾಗಿ ಜಿಲ್ಲೆಯಲ್ಲಿ ಕಳೆದ ಮೂರು ದಿನಗಳಿಂದ ರಕ್ತದಾನ, ಕ್ರೀಡಾಪಟುಗಳಿಗೆ ಸನ್ಮಾನ ಹಾಗೂ ದಸರಾ ಕ್ರೀಡಾಕೂಟ ಹಮ್ಮಿಕೊಳ್ಳಲಾಗುತ್ತಿದೆ. ಆ ಮೂಲಕ ಕ್ರೀಡಾಪಟುಗಳಿಗೆ ಸರಕಾರ ಉತ್ತಮವಾದ ವೇದಿಕೆಯನ್ನು ನೀಡಿದೆ ಎಂದರು.
ಈ ಸಂದರ್ಭ ದ.ಕ.ಜಿಲ್ಲಾ ಫುಟ್ಬಾಲ್ ಅಸೋಸಿಯೇಶನ್ ಅಧ್ಯಕ್ಷ ಡಿ.ಕೆ.ಅಸ್ಲಂ, ಬ್ಯಾಡ್ಮಿಂಟನ್ ಅಸೋಸಿಯೇಶನ್ ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ, ಮಂಗಳಾ ಬ್ಯಾಡ್ಮಿಂಟನ್ ಅಸೋಸಿಯೇಶನ್ ಅಧ್ಯಕ್ಷ ಶಿವಪ್ರಸಾದ್ ಪ್ರಭು, ದಸರಾ ಕ್ರೀಡಾಕೂಟದ ನೋಡಲ್ ಅಧಿಕಾರಿ ವಿನೋದ್ ಕುಮಾರ್, ದೈಹಿಕ ಶಿಕ್ಷಕರ ಸಂಘದ ಮಂಗಳೂರು ಉತ್ತರ ವಲಯದ ಅಧ್ಯಕ್ಷ ನಿತಿನ್ ಪುತ್ರನ್ ಮತ್ತಿತರರು ಉಪಸ್ಥಿತರಿದ್ದರು.
ಮಂಗಳೂರು ತಾಲೂಕು ದಸರಾ ಕ್ರೀಡಾಕೂಟದಲ್ಲಿ 800 ಕ್ರೀಡಾಪಟುಗಳು ಭಾಗವಹಿಸಿದ್ದಾರೆ. ಇದರಲ್ಲಿ 515 ಪುರುಷರು ಮತ್ತು 285 ಮಹಿಳಾ ಕ್ರೀಡಾಪಟುಗಳು ಸೇರಿದ್ದಾರೆ. ಬೆಳ್ತಂಗಡಿಯಲ್ಲಿ 372, ಪುತ್ತೂರು-443, ಉಳ್ಳಾಲದಲ್ಲಿ 345, ಮೂಡುಬಿದಿರೆ 373, ಸುಳ್ಯದಲ್ಲಿ 321 ಮಂದಿ ಕ್ರೀಡಾಪಟುಗಳು ಆಯಾ ತಾಲೂಕುಗಳಲ್ಲಿ ರವಿವಾರ ನಡೆದ ದಸರಾ ಕ್ರೀಡಾಕೂಟದಲ್ಲಿ ಪಾಲ್ಗೊಂಡಿದ್ದಾರೆ. ಸೆ.7ರಂದು ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟ ನಡೆಯಲಿದೆ. ಈ ಬಳಿಕ ಮೈಸೂರು ವಲಯ ಹಾಗೂ ರಾಜ್ಯ ಮಟ್ಟದ ದಸರಾ ಕ್ರೀಡಾಕೂಟ ನಡೆಯಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.