×
Ad

Mangaluru | ಬಾಕಿ ಕನಿಷ್ಠ ಕೂಲಿ ನೀಡಲು ಒತ್ತಾಯಿಸಿ ಬೀಡಿ ಕಾರ್ಮಿಕರಿಂದ ಧರಣಿ ಸತ್ಯಾಗ್ರಹ

Update: 2025-11-24 15:31 IST

ಮಂಗಳೂರು : ಬೀಡಿ ಕಾರ್ಮಿಕರಿಗೆ ಕಳೆದ ಆರು ವರ್ಷಗಳಿಂದ ಬಾಕಿ ಇರುವ ಕನಿಷ್ಠ ಕೂಲಿ, 2024ರ ಎಪ್ರಿಲ್‌ನಿಂದ ಜಾರಿಗೊಂಡ ಹೊಸ ಕನಿಷ್ಠ ಕೂಲಿ ಸೇರಿದಂತೆ ಬಾಕಿಯನ್ನು ನೀಡುವಂತೆ ಒತ್ತಾಯಿಸಿ ಸೌತ್ ಕೆನರಾ ಬೀಡಿ ವರ್ಕರ್ಸ್ ಫೆಡರೇಶನ್(ಸಿಐಟಿಯು) ನೇತೃತ್ವದಲ್ಲಿ ಬೀಡಿ ಕಾರ್ಮಿಕರು ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಆರಂಭಿಸಿದ್ದಾರೆ.

ಮಿನಿವಿಧಾನ ಸೌಧದ ಎದುರು ಆರಂಭಗೊಂಡಿರುವ ಧರಣಿ ಸತ್ಯಾಗ್ರಹನ್ನು ಉದ್ದೇಶಿಸಿ ಮಾತನಾಡಿದ ಫೆಡರೇಷನ್ ನ ಪ್ರಧಾನ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ, ಕಾರ್ಮಿಕ ಸಚಿವರು ಮತ್ತು ಕಾರ್ಮಿಕ ಮುಖಂಡರ ಸಭೆ ನ.27ಕ್ಕೆ ನಡೆಯಲಿದೆ. ಈ ಸಭೆಯಲ್ಲಿ ಕಾರ್ಮಿಕರ ಪರವಾಗಿ ತೀರ್ಮಾನ ತೆಗೆದುಕೊಳ್ಳದಿದ್ದರೆ ನ.28ರಂದು ಕಾರ್ಮಿಕ ಆಯುಕ್ತರ ಕಚೇರಿಗೆ ಮುತ್ತಿಗೆ ಹಾಕಲಾಗುವುದು ಎಂದು ಹೇಳಿದರು.

ರಾಜ್ಯ ಸರಕಾರ 2018ರ ಎಪ್ರಿಲ್‌ನಲ್ಲಿ ಬೀಡಿ ಕಾರ್ಮಿಕರ ಕನಿಷ್ಠ ಕೂಲಿ ಅಧಿಸೂಚನೆ ಹೊರಡಿಸಿತ್ತು. ಸಾವಿರ ಬೀಡಿಗೆ ಆ ಸಮಯದಲ್ಲಿ 210 ರೂ. ಹಾಗೂ ಬೆಲೆ ಏರಿಕೆ ಸೂಚ್ಯಂಕದ ಮೇರೆಗೆ ಪಾಯಿಂಟ್‌ಗೆ 4 ಪೈಸೆಯಂತೆ ತುಟ್ಟಿಭತ್ತೆ ಸೇರಿ ಕನಿಷ್ಠ ಕೂಲಿಯನ್ನು ಬೀಡಿ ಮಾಲಕರು ನೀಡಬೇಕಿತ್ತು. ಸರ್ವಾನುಮತದಿಂದ ಒಪ್ಪಿಕೊಂಡರೂ ಬೀಡಿ ಮಾಲಕರು ಹೈಕೋರ್ಟ್‌ನಿಂದ ತಡೆಯಾಜ್ಞೆ ತಂದು ಬೀಡಿ ಕಾರ್ಮಿಕರಿಗೆ ಕಾನೂನು ಬದ್ಧ ಕೂಲಿ ನೀಡದೆ ಮೋಸ ಮಾಡಿದ್ದಾರೆ ಎಂದು ಅವರು ಆರೋಪಿಸಿದರು.

2025ರ ಫೆಬ್ರವರಿ ತಿಂಗಳಲ್ಲಿ ಹೊಸ ಕನಿಷ್ಠ ಕೂಲಿಯನ್ನು ಕರ್ನಾಟಕ ಸರಕಾರ ಅಧಿಸೂಚನೆ ಮೂಲಕ ಪ್ರಕಟಿಸಿದೆ. ಕನಿಷ್ಠ ಕೂಲಿ ನಿಗದಿಗೆ ಸೆಕ್ಷನ್ 5(1ಎ) ಅನ್ವಯ ಸಮಿತಿ ರಚಿಸಿದ್ದು, ಸಮಿತಿಯ ತೀರ್ಮಾನದಂತೆ 2024ರ ಎಪ್ರಿಲ್ 1ರಿಂದ ಸಾವಿರ ಬೀಡಿಗೆ 270 ರೂ. ಕನಿಷ್ಠ ಕೂಲಿ ಮತ್ತು ಬೆಲೆ ಏರಿಕೆ ಸೂಚ್ಯಂಕ ಪಾಯಿಂಟ್‌ಗೆ 3 ಪೈಸೆಯಂತೆ ಅಧಿಸೂಚನೆ ನೀಡಿತ್ತು. ಆ ಪ್ರಕಾರ ಸಾವಿರ ಬೀಡಿಗೆ 301.92 ರೂ.ಗಳಂತೆ ಬೀಡಿ ಕಾರ್ಮಿಕರಿಗೆ ಮಾಲಕರು ವೇತನ ನೀಡಬೇಕು. ಆದರೆ ಬೀಡಿ ಮಾಲಕರು ಸಾವಿರ ಬೀಡಿಗೆ 284.88 ರೂ.ನಂತೆ ನೀಡುತ್ತಿದ್ದಾರೆ ಎಂದವರು ಹೇಳಿದರು.

ದೇಶದ 13 ರಾಜ್ಯಗಳಲ್ಲಿ 65 ಲಕ್ಷ ಬೀಡಿ ಸುತ್ತುವವರಿದ್ದಾರೆ. ಲೇಬಲ್ ಹಾಕುವವರು, ಚಾಲಕರು, ಎಲೆ ತೆಗೆಯುವವರು ಹೀಗೆ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡವವರು ಸೇರಿದಂತೆ ಒಟ್ಟು ಮೂರು ಕೋಟಿಗೂ ಅಧಿಕ ಮಂದಿ ಬೀಡಿ ಕಾರ್ಮಿಕರಿದ್ದಾರೆ. ಇವರೆಲ್ಲರೂ ಅತೀ ಬಡವರು. ಶೇ. 95 ಮಂದಿ ಮಹಿಳೆಯರು. ಸರಕಾರಗಳು ಬಡ ಬೀಡಿ ಕಾರ್ಮಿಕರ ಬಗ್ಗೆ ಚಿಂತನೆ ಮಾಡಿಲ್ಲ. ಬೀಡಿ ಉದ್ಯಮದಿಂದ ಸಾವಿರಾರು ಕೋಟಿ ತೆರಿಗೆ ಸರಕಾರಕ್ಕೆ ಬರುತ್ತಿದೆ. ಆದರೆ ಕಾರ್ಮಿಕರಿಗೆ ಸರಿಯಾದ ವೇತನ ನೀಡದೆ ಮಾಲಕರ ಪರವಾದ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ಅವರು ಆರೋಪಿಸಿದರು.

ಸಿಐಟಿಯು ಜಿಲ್ಲಾಧ್ಯಕ್ಷ ಬಿ.ಎಂ.ಭಟ್ ಅವರು ಮಾತನಾಡಿ, ಸರಕಾರಗಳು ಬೀಡಿ ಕಾರ್ಮಿಕರ ಪರವಾಗಿಲ್ಲ. ಬದಲಾಗಿ ಮಾಲಕರ ಪರವಾಗಿವೆ ಎಂದು ಆರೋಪಿಸಿದರು.

ದ.ಕ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್, ಕಟ್ಟಡ ಕಾರ್ಮಿಕರ ಸಂಘದ ಕೆ.ಯಾದವ ಶೆಟ್ಟಿ, ವಸಂತ ಆಚಾರಿ, ಫೆಡರೇಷನ್ ಕೋಶಾಧಿಕಾರಿ ಸದಾಶಿವ ದಾಸ್, ಎಂ.ದೇವದಾಸ್ ಮತ್ತಿತರರು ಪಾಲ್ಗೊಂಡಿದ್ದರು. ಫೆಡರೇಷನ್ ಅಧ್ಯಕ್ಷ ಸುಕುಮಾರ್ ತೊಕ್ಕೊಟ್ಟು ಸ್ವಾಗತಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News