ಮಂಗಳೂರು | ಮನೆಯ ಅಂಗಳದಲ್ಲಿ ವ್ಯಕ್ತಿಯ ಮೃತದೇಹ ಪತ್ತೆ
ಬೀದಿ ನಾಯಿ ದಾಳಿಯಿಂದ ಮೃತಪಟ್ಟಿರುವ ಶಂಕೆ
ಉಳ್ಳಾಲ : ಕಣ್ಣಿನ ಗುಡ್ಡೆ ಕಿತ್ತುಹೋದ ಸ್ಥಿತಿಯಲ್ಲಿ ನಿಗೂಢವಾಗಿ ಮೃತಪಟ್ಟಿರುವ ವ್ಯಕ್ತಿಯೊರ್ವರ ಮೃತದೇಹವು ಉಳ್ಳಾಲ ಠಾಣೆಯ ಕುಂಪಲ ಬೈಪಾಸ್ ಎಂಬಲ್ಲಿನ ಮನೆಯೊಂದರ ಅಂಗಳದಲ್ಲಿ ಸಿಕ್ಕಿದ್ದು, ನಾಯಿ ದಾಳಿಯಿಂದ ವ್ಯಕ್ತಿ ಮೃತಪಟ್ಟಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ.
ಕುಂಪಲ ಮೂರುಕಟ್ಟೆ ನಿವಾಸಿ ದಯಾನಂದ ಗಟ್ಟಿ (53) ಮೃತಪಟ್ಟಿರುವ ವ್ಯಕ್ತಿ ಎಂದು ಗುರುತಿಸಲಾಗಿದೆ.
ಕುಂಪಲ ಬೈಪಾಸಿನ ಸಾಯಿ ಲಾಂಡ್ರಿಯ ಸಿಟ್ ಔಟ್ ನಲ್ಲಿ ನೋಟಿನ ಕಂತೆ ಬಿದ್ದಿದ್ದು ,ನೋಟಿನ ಕಂತೆಯ ಬಳಿಯೇ ದಯಾನಂದ್ ಅವರ ಒಂದು ಕಣ್ಣಿನ ಗುಡ್ಡೆ ಬಿದ್ದಿದೆ. ಲಾಂಡ್ರಿ ಎದುರಲ್ಲೇ ದಯಾನಂದ್ ಮೇಲೆ ದಾಳಿ ನಡೆದಿರಬಹುದು ಎಂದು ಶಂಕಿಸಲಾಗಿದೆ.
ಅವರು ಇಂದು ಬೆಳಿಗ್ಗೆ ಸಾಯಿ ಲಾಂಡ್ರಿಯ ಎದುರಿನ ಖೈರುನ್ನೀಸ ಎಂಬವರ ಮನೆಯ ಅಂಗಳದಲ್ಲಿ ಜೀವನ್ಮರಣ ಹೋರಾಟದಲ್ಲಿ ರಕ್ತದ ಮಡುವಲ್ಲಿ ಬಿದ್ದಿದ್ದರೆನ್ನಲಾಗಿದೆ. ಪಕ್ಕದಲ್ಲೇ ಮುಖಕ್ಕೆ ರಕ್ತ ಲೇಪಿಸಿದ್ದ ಬೀದಿ ನಾಯಿಯೊಂದು ಇದ್ದು ಜನರನ್ನು ಕಂಡು ಓಡಿ ಹೋಗಿದೆ.
ಸ್ಥಳೀಯರು ಘಟನೆ ಬಗ್ಗೆ ಉಳ್ಳಾಲ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ ಬರುವಷ್ಟರಲ್ಲಿ ದಯಾನಂದ್ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಘಟನಾ ಸ್ಥಳಕ್ಕೆ ದೇರಳಕಟ್ಟೆ ಕೆ.ಎಸ್ ಹೆಗ್ಡೆ ಆಸ್ಪತ್ರೆಯ ಡಾ.ಮಹಾಬಲ ಶೆಟ್ಟಿ ನೇತೃತ್ವದ ಫಾರೆನ್ಸಿಕ್ ಮತ್ತು ಸೋಕೊ ತಂಡ ಭೇಟಿ ನೀಡಿದ್ದು, ಪರಿಶೀಲನೆ ನಡೆಸಿ ಸಾಕ್ಷ ಕಲೆ ಹಾಕಿದೆ. ಮೇಲ್ನೋಟಕ್ಕೆ ಪ್ರಾಣಿ ದಾಳಿಯಿಂದಲೇ ದಯಾನಂದ್ ಮೃತಪಟ್ಟಿರುವುದಾಗಿ ಹೇಳಲಾಗುತ್ತಿದ್ದು, ಪೊಲೀಸರು ಸಿ.ಸಿ ಕ್ಯಾಮೆರಗಳನ್ನೂ ಪರಿಶೀಲನೆ ನಡೆಸಿದ್ದಾರೆ.
ಘಟನಾ ಸ್ಥಳಕ್ಕೆ ಡಿಸಿಪಿ ಮಿಥುನ್ ಹೆಚ್.ಎನ್., ಎಸಿಪಿ ವಿಜಯ ಕ್ರಾಂತಿ,ಇನ್ಸ್ ಪೆಕ್ಟರ್ ವಿರೂಪಾಕ್ಷ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.