ಮಂಗಳೂರು | ಎನ್‌ಎಂಪಿಎಯಿಂದ ಶಿಷ್ಟಾಚಾರ ಉಲ್ಲಂಘನೆ : ಕಾಂಗ್ರೆಸ್ ಆರೋಪ
ಸಾಂದರ್ಭಿಕ ಚಿತ್ರ | PC : PTI
ಮಂಗಳೂರು, ನ.12: ನವಮಂಗಳೂರು ಬಂದರು ಪ್ರಾಧಿಕಾರ(ಎನ್‌ಎಂಪಿಎ)ವು ಸುವರ್ಣ ಮಹೋತ್ಸವ ಸಮಾರಂಭದ ಆಹ್ವಾನ ಪತ್ರಿಕೆಯಲ್ಲಿ ಸ್ಥಳೀಯ ಚುನಾಯಿತ ಪ್ರತಿನಿಧಿಗಳು ಹಾಗೂ ಸಂಸ್ಥೆಯ ಅಭಿವೃದ್ಧಿಗೆ ಕೊಡುಗೆ ನೀಡಿರುವ ಮಹನೀಯರನ್ನು ಕಡೆಗಣಿಸುವ ಮೂಲಕ ಶಿಷ್ಟಾಚಾರವನ್ನು ಉಲ್ಲಂಘಿಸಿದೆ ಎಂದು ಸುರತ್ಕಲ್ ಬ್ಲಾಕ್ ಕಾಂಗ್ರೆಸ್ ಸಮಿತಿ ಆರೋಪಿಸಿದೆ.
ಈ ಬಗ್ಗೆ ಎನ್‌ಎಂಪಿಎ ಅಧ್ಯಕ್ಷರಿಗೆ ಪತ್ರದ ಮೂಲಕ ಆಕ್ಷೇಪ ವ್ಯಕ್ತಪಡಿಸಿರುವ ಸಮಿತಿಯ ಅಧ್ಯಕ್ಷ ಪುರುಷೋತ್ತಮ ಚಿತ್ರಾಪುರ, ಸಂಸ್ಥೆಯ ಸುವರ್ಣ ಮಹೋತ್ಸವದ ಆಮಂತ್ರಣ ಪಟ್ಟಿಯಿಂದ ಸ್ಥಳೀಯ ಜನಪ್ರತಿನಿಧಿಗಳು, ಮಾಜಿ ಜನಪ್ರತಿನಿಧಿಗಳನ್ನು ದೂರ ಇರಿಸುವ ಮೂಲಕ ಅವರನ್ನು ಕಡೆಗಣಿಸಲಾಗಿದೆ ಎಂದು ಆರೋಪಿಸಿದ್ದಾರೆ.
ಎನ್‌ಎಂಪಿಎಯ ಅಡಿಪಾಯ ಮತ್ತು ಅಭಿವೃದ್ಧಿಗೆ ದಿವಂಗತ ಯು.ಎಸ್. ಮಲ್ಯ ಅವರ ದೂರದೃಷ್ಟಿ ಮತ್ತು ಪ್ರಯತ್ನ ಕಾರಣವಾಗಿದೆ. ಕಾಂಗ್ರೆಸ್‌ನ ಸ್ಥಳೀಯ ಚುನಾಯಿತ ಪ್ರತಿನಿಧಿಯಾಗಿ ಮಲ್ಯ ಅವರು ಎನ್‌ಎಂಪಿಎಯ ಸ್ಥಾಪನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಮಾಜಿ ಕೇಂದ್ರ ಸಚಿವ ಜನಾರ್ದನ ಪೂಜಾರಿ, ದಿವಂಗತ ಆಸ್ಕರ್ ಫೆರ್ನಾಂಡಿಸ್ ಸೇರಿದಂತೆ ಹಲವು ಕಾಂಗ್ರೆಸ್ ನಾಯಕರು ಎನ್‌ಎಂಪಿಎಯ ಬೆಳವಣಿಗೆ ಮತ್ತು ಸಂಬಂಧಿತ ಮೂಲಸೌಕರ್ಯಕ್ಕೆ ಅಮೂಲ್ಯ ಕೊಡುಗೆ ನೀಡಿದ್ದಾರೆ. ಆದರೆ ಸುವರ್ಣ ಮಹೋತ್ಸವದ ಆಮಂತ್ರಣ ಪತ್ರಿಕೆಯಲ್ಲಿ ಮಾಜಿ ಸಚಿವ ಜನಾರ್ದನ ಪೂಜಾರಿ, ಮಾಜಿ ಸಂಸದರಾದ ಬಿ.ಇಬ್ರಾಹೀಂ, ವಿನಯ ಕುಮಾರ್ ಸೊರಕೆ, ಡಿ.ವಿ.ಸದಾನಂದ ಗೌಡ, ಸ್ಪೀಕರ್ ಯು.ಟಿ.ಖಾದರ್, ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ವಿಧಾನಸಭೆ ಮತ್ತು ವಿಧಾನ ಪರಿಷತ್ ಶಾಸಕರಾದ ಅಶೋಕ್ ರೈ, ಐವನ್ ಡಿಸೋಜಾ, ಕಿಶೋರ್ ಕುಮಾರ್, ಮಂಜುನಾಥ ಭಂಡಾರಿ, ಉಮಾನಾಥ ಕೋಟ್ಯಾನ್, ಭಾಗೀರಥಿ ಮುರಳ್ಯ, ಹರೀಶ್ ಪೂಂಜಾ ಅವರ ಹೆಸರನ್ನು ಕೈಬಿಡಲಾಗಿದೆ.
ಇಂತಹ ಲೋಪವು ಶಿಷ್ಟಾಚಾರದ ಗಂಭೀರ ಉಲ್ಲಂಘನೆಯಾಗಿದೆ. ಎನ್‌ಎಂಪಿಎ ರಾಜಕೀಯ ಗಡಿಗಳನ್ನು ಮೀರಿದ ನಾಯಕರ ಸಾಮೂಹಿಕ ಪ್ರಯತ್ನ ಮತ್ತು ದ.ಕ. ಜಿಲ್ಲೆಯ ಜನರ ಕೊಡುಗೆಗಳಿಂದ ಸ್ಥಾಪನೆಗೊಂಡು ಪೋಷಿಸಲ್ಪಟ್ಟಿದೆ. ಇದು ಸಾರ್ವಜನಿಕ ಸಂಸ್ಥೆಯಾಗಿದ್ದು, ಅದರ ಅಧಿಕೃತ ಕಾರ್ಯಕ್ರಮ ಎಲ್ಲರನ್ನು ಒಳಗೊಂಡಿರಬೇಕು. ಆಕಸ್ಮಿಕ ಅಥವಾ ಉದ್ದೇಶಪೂರ್ವಕವಾಗಿ ನಡೆದ ಈ ದೋಷವನ್ನು ಸರಿಪಡಿಸಬೇಕು. ಇಲ್ಲವಾದಲ್ಲಿ ನಾವು ಸಮಾನ ಮನಸ್ಕರು ಕಾರ್ಯಕ್ರಮದ ದಿನ ಎನ್‌ಎಂಪಿಎ ಆವರಣದ ಹೊರಗಡೆ ಕಪ್ಪು ಬಾವುಟಗಳ ಪ್ರದರ್ಶನದೊಂದಿಗೆ ಪ್ರತಿಭಟಿಸುತ್ತೇವೆ ಎಂದು ಪುರುಷೋತ್ತಮ ಅವರು ಪತ್ರದಲ್ಲಿ ತಿಳಿಸಿದ್ದಾರೆ.