×
Ad

ವಿವಾದಕ್ಕೆ ಕಾರಣವಾದ ಗ್ರಾಪಂ ಸಭೆಗಳಲ್ಲಿ ತುಳು ಬಳಕೆಗೆ ನಿಯಮಾನುಸಾರ ಕ್ರಮದ ಸುತ್ತೋಲೆ: ಆಕ್ರೋಶದ ಬೆನ್ನಲ್ಲೇ ದ.ಕ. ಜಿಪಂ ಸ್ಪಷ್ಟನೆ

Update: 2025-06-23 15:09 IST

ವಿವಾದಕ್ಕೆ ಕಾರಣವಾದ ದ.ಕ. ಜಿಪಂ ಸುತ್ತೋಲೆ | ವಿರೋಧದ ಬೆನ್ನಲ್ಲೇ ಜಿಪಂ ಸ್ಪಷ್ಟನೆ 

ಮಂಗಳೂರು: ಗ್ರಾಮ ಪಂಚಾಯತ್ ಸಾಮಾನ್ಯ ಸಭೆಗಳಲ್ಲಿ ತುಳು ಭಾಷೆ ಬಳಕೆಗೆ ಸಂಬಂಧಿಸಿ ನಿಯಮಾನುಸಾರ ಕ್ರಮ ಕೈಗೊಳ್ಳಲು ಎಂದು ದ.ಕ. ಜಿಲ್ಲಾ ಪಂಚಾಯತ್ ಹೊರಡಿಸಿದ್ದ ಸುತ್ತೋಲೆ ಭಾರೀ ವಿವಾದಕ್ಕೆ ಕಾರಣವಾಗಿದೆ. ಈ ಕ್ರಮಕ್ಕೆ ತೀವ್ರ ವಿರೋಧ ವ್ಯಕ್ತವಾಗುತ್ತಲೇ ಸ್ಪಷ್ಟೀಕರಣ ನೀಡಿರುವ ದ.ಕ. ಜಿಪಂ, ಗ್ರಾಪಂ ಸಾಮಾನ್ಯ ಸಭೆಗಳಲ್ಲಿ ತುಳು ಭಾಷೆ ಬಳಕೆ ಕುರಿತು ಯಾವುದೇ ನಿರ್ಬಂಧ\ನಿರ್ದೇಶನ ಆದೇಶ ನೀಡಿಲ್ಲ ಎಂದು  ಹೇಳಿದೆ.

ಏನಿದು ವಿವಾದ?

ಗ್ರಾಮ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ಇಲಾಖೆಯ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಚರ್ಚಿಸುವಾಗ ತುಳು ಭಾಷೆ ಬಳಕ ಮಾಡದಂತೆ ಮತ್ತು ಕನ್ನಡ ಭಾಷೆಗೆ ಪ್ರಾಮುಖ್ಯತ ನೀಡುವಂತೆ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ನಿರ್ದೇಶನ ನೀಡುವಂತೆ ಕಾರ್ಕಳದ ಯಶಸ್ವಿ ನಾಗರಿಕ ಸೇವಾ ಸಂಘದ ಸಂಚಾಲಕ ಮುರಳೀಧರ್ ಎಂಬವರು ದ.ಕ. ಜಿಪಂಗೆ ಮನವಿ ಸಲ್ಲಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಮನವಿಯ ಕುರಿತು ನಿಯಮಾನುಸಾರ ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳಲು ಈ ಮೂಲಕ ಸೂಚಿಸಿದೆ ಎಂದು ದ.ಕ. ಜಿಲ್ಲಾ ಪಂಚಾಯತ್ ಸುತ್ತೋಲೆ ಹೊರಡಿಸಿತ್ತು. ಇದರ ಪ್ರತಿಯೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಇದು ತುಳು ಪರ ಹೋರಾಟಗಾರರ ಆಕ್ರೋಶಕ್ಕೆ ಕಾರಣವಾಗಿತ್ತು.

ಮಾಜಿ ಸಿಎಂ ಡಿವಿ ವಿರೋಧ

ತುಳು ಭಾಷೆ - ಕನ್ನಡ ನಾಡಿನ ಮಣ್ಣಿನ ಭಾಷೆ. ನಮ್ಮ ಕರ್ನಾಟಕದಲ್ಲಿ ತುಳು ಮಾತನಾಡಬಾರದು ಎನ್ನುವ ಸರಕಾರದ ಆದೇಶ! ಹಾಗಾದರೆ, ಉರ್ದು ಭಾಷೆಯ ಬಳಕೆ ಸರಕಾರಿ ಕಡತದಲ್ಲಿ ಮಾಡಬಹುದೇ ? ಮಿಸ್ಟರ್ ಟ್ರೊಲ್ ಮಿನಿಸ್ಟರ್ ಎಲ್ಲಿದ್ದೀರಾ ?" ಎಂದು ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಅವರು ಜಿಪಂ ಸುತ್ತೋಲೆಯ ಫೋಟೋದೊಂದಿಗೆ ತನ್ನ ಎಕ್ಸ್' ಖಾತೆಯಲ್ಲಿ ಪೋಸ್ಟ್ ವೊಂದನ್ನು ಹಾಕಿ ವಿರೋಧ ವ್ಯಕ್ತಪಡಿಸಿದ್ದರು.

ಗ್ರಾಪಂ ಸಭೆಯಲ್ಲಿ ತುಳು ಭಾಷೆ ಬಳಕೆಗೆ ಕಾನೂನಿನ ನಿರ್ಬಂಧವಿಲ್ಲ: ತಾರಾನಾಥ್ ಗಟ್ಟಿ

ಗ್ರಾಮ ಪಂಚಾಯತ್ ಸಾಮಾನ್ಯ ಸಭೆಗಳಲ್ಲಿ ಜನಪ್ರತಿನಿಧಿಗಳು ಚರ್ಚಿಸುವ ಸಂಧರ್ಭದಲ್ಲಿ ತುಳುಭಾಷೆ ಬಳಕೆ ಮಾಡುವುದಕ್ಕೆ ಕಾನೂನಿನ ನಿಯಾಮನುಸಾರ ಯಾವುದೇ ನಿರ್ಬಂಧ ಇರುವುದಿಲ್ಲ ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡಮಿಯ ಅಧ್ಯಕ್ಷ ತಾರಾನಾಥ್ ಗಟ್ಟಿ ಕಾಪಿಕಾಡ್ ಸ್ಷಷ್ಟೀಕರಿಸಿದ್ದಾರೆ .

ಕಾರ್ಕಳದ ಯಶಸ್ವಿ ನಾಗರಿಕ ಸೇವಾ ಸಂಘದ ಸಂಚಾಲಕ ಮುರಳೀಧರ ಎಂಬವರು ದ.ಕ. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗೆ ಮನವಿ ಸಲ್ಲಿಸಿ ಗ್ರಾಮ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಚರ್ಚಿಸುವಾಗ ತುಳು ಭಾಷೆ ಬಳಕೆ ಮಾಡದಂತೆ ಹಾಗೂ ಕನ್ನಡಕ್ಕೆ ಪ್ರಾಮುಖ್ಯತೆ ನೀಡುವಂತೆ ಆಗ್ರಹಿಸಿದ್ದರು. ಈ ಬಗ್ಗೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅವರು ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಪತ್ರ ಬರೆದು ನಿಯಮಾನುಸಾರ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದರು. ಆದರೆ ಅವರು ಎಲ್ಲೂ ತಮ್ಮ ಪತ್ರದಲ್ಲಿ ತುಳು ಭಾಷೆಯನ್ನು ನಿರ್ಬಂಧಿಸಿ ಉಲ್ಲೇಖಿಸಿಲ್ಲ ಎಂಬುದನ್ನು ಗಮನಿಸಬೇಕಾಗಿದೆ. ನಿಯಾಮನುಸಾರ ಕ್ರಮ ಕೈಗೊಳ್ಳಿ ಎಂದು ಸೂಚನೆ ನೀಡಿರುವ ಪತ್ರವನ್ನು ಗಮನಿಸುವಾಗ ಗ್ರಾಮ ಪಂಚಾಯತ್ ಸಭೆಗಳಲ್ಲಿ ಜನಪ್ರತಿನಿಧಿಗಳು ಆಯಾ ಪ್ರದೇಶದ ಜನಾನುರಾಗಿ ಭಾಷೆಯನ್ನು ಬಳಕೆ ಮಾಡುವುದಕ್ಕೆ ಯಾವುದೇ ನಿರ್ಬಂಧ ಹಾಗೂ ತೊಡಕುಗಳಿರುವುದಿಲ್ಲ ಎಂಬುದನ್ನು ಸೂಚ್ಯವಾಗಿ ಉಲ್ಲೇಖಿಸುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ..

ರಾಜ್ಯದ ಬೇರೆ ಬೇರೆ ಭಾಗಗಳಲ್ಲಿ ಗ್ರಾಮ ಪಂಚಾಯತ್ ಸಾಮಾನ್ಯ ಸಭೆಗಳಲ್ಲಿ ಪಂಚಾಯತ್ ಜನಪ್ರತಿನಿಧಿಗಳು ತಮ್ಮ ಪ್ರಾದೇಶಿಕ ವ್ಯಾಪ್ತಿಯ ಭಾಷೆಗಳನ್ನು ಬಳಸುವುದು ಸರ್ವೇ ಸಾಮಾನ್ಯವಾಗಿ ನಡೆದುಕೊಂಡು ಬಂದಿರುವ ಪದ್ಧತಿಯಾಗಿದೆ. ಈ ಹಿನ್ನೆಲೆಯಲ್ಲಿ ತುಳು ಭಾಷೆ ಬಳಕೆಗೆ ಯಾವುದೇ ಅಡೆತಡೆಗಳಿರುವುದಿಲ್ಲ ಎಂಬುದನ್ನು ಗಮನಿಸಬೇಕಾಗಿದೆ ಎಂದವರು ತಿಳಿಸಿದ್ದಾರೆ.

ಎಲ್ಲಾ ಭಾಷೆ, ಸಾಂಸ್ಕ್ರತಿಕ ವೈವಿಧ್ಯಕ್ಕೆ ಗೌರವ ಕೊಡುವುದು ನಮ್ಮ ದೇಶದ ಪರಂಪರೆಯಾಗಿದೆ. ಜೊತೆಗೆ ಸಂವಿಧಾನದತ್ತ ಅವಕಾಶ ಕೂಡ ಆಗಿರುತ್ತದೆ ಎಂದು ಅಕಾಡಮಿ ಅಧ್ಯಕ್ಷರು ಪ್ರತಿಕ್ರಿಯಿಸಿದ್ದಾರೆ.

ಜಿಪಂ ಸಿಇಒ ಅವರ ಸೂಚನಾ ಪತ್ರ ಗೊಂದಲಕ್ಕೆ ಕಾರಣವಾಗುವುದರಿಂದ ಆ ಪತ್ರವನ್ನು ಹಿಂಪಡೆಯುವಂತೆ ತಾರಾನಾಥ್ ಗಟ್ಟಿ ಕಾಪಿಕಾಡ್ ಅವರು ಕೋರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News