×
Ad

ಡಿ.21: ದಕ್ಷಿಣ ಕನ್ನಡದಲ್ಲಿ 1,41,594 ಮಕ್ಕಳಿಗೆ ಪಲ್ಸ್ ಪೋಲಿಯೊ ಲಸಿಕೆ

Update: 2025-12-18 14:52 IST

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಡಿ.21ರಂದು ನಡೆಯಲಿರುವ 2025ನೇ ಸಾಲಿನ ಪಲ್ಸ್ ಪೋಲಿಯೊ ಕಾರ್ಯಕ್ರಮದಲ್ಲಿ 1,41,594 ಮಕ್ಕಳಿಗೆ ಪಲ್ಸ್ ಪೋಲಿಯೊ ಲಸಿಕೆ ನೀಡಲಾಗುವುದು ಎಂದು ದ.ಕ. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಎಚ್.ಆರ್. ತಿಮ್ಮಯ್ಯ ತಿಳಿಸಿದ್ದಾರೆ.

ದ.ಕ. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾಹಿತಿ ನೀಡಿದರು.

ಪಲ್ಸ್ ಪೋಲಿಯೊ ಲಸಿಕೆ ನೀಡಲು ಜಿಲ್ಲೆಯಲ್ಲಿ 921 ಸ್ಥಿರ ಬೂತ್‌, 32 ಟ್ರಾನ್ಸಿಟ್, ಮಂಗಳೂರು ನಗರದಲ್ಲಿ ಮೂರು ಮೊಬೈಲ್ ಬೂತ್ ಸೇರಿದಂತೆ 956 ಬೂತ್‌ಗಳಲ್ಲಿ ಮಕ್ಕಳಿಗೆ ಪಲ್ಸ್ ಪೋಲಿಯೊ ಲಸಿಕೆ ನೀಡಲಾಗುವುದು ಎಂದರು.

ಐದು ವರ್ಷಕ್ಕಿಂತ ಕೆಳಗಿನ 29,203 ಮಕ್ಕಳಿಗೆ ಬಂಟ್ವಾಳದಲ್ಲಿ , ಬೆಳ್ತಂಗಡಿಯಲ್ಲಿ 18,091, ಮಂಗಳೂರಿನಲ್ಲಿ 66, 062, ಪುತ್ತೂರಿನಲ್ಲಿ 19, 958 ಮತ್ತು ಸುಳ್ಯದಲ್ಲಿ 8,280 ಮಕ್ಕಳಿಗೆ ಲಸಿಕೆ ನೀಡಲಾಗುವುದು ಎಂದು ವಿವರಿಸಿದರು.

ಲಸಿಕೆ ನೀಡಿಕೆಗೆ ಬಂಟ್ವಾಳದಲ್ಲಿ 202 ಬೂತ್‌, ಬೆಳ್ತಂಗಡಿ 166, ಮಂಗಳೂರಿನಲ್ಲಿ 363, ಪುತ್ತೂರಿನಲ್ಲಿ 148, ಸುಳ್ಯದಲ್ಲಿ 77 ಬೂತ್‌ಗಳ ವ್ಯವಸ್ಥೆ ಮಾಡಲಾಗಿದೆ. ಬಸ್ ನಿಲ್ದಾಣ, ರೈಲ್ವೇ ಸ್ಟೇಷನ್, ವಿಮಾನ ನಿಲ್ದಾಣಗಳಂತಹ ಸ್ಥಳಗಳಲ್ಲಿ ಟ್ರಾನ್ಸಿಟ್ ತಂಡಗಳು ಮಕ್ಕಳಿಗೆ ಲಸಿಕೆ ನೀಡಲಿದೆ ಎಂದರು.

ಡಿ.21ರಂದು ಬೆಳಗ್ಗೆ 8ರಿಂದ 5ರ ವರೆಗೆ 0-5 ವರ್ಷದೊಳಗಿನ ಪ್ರತಿಯೊಂದು ಮಗುವಿಗೂ 2 ಜೀವ ರಕ್ಷಕ ಪೋಲಿಯೊ ಲಸಿಕೆ ನೀಡಲಾಗುವುದು. ಯಾವುದೇ ಒಂದು ಮಗು ಲಸಿಕೆ ವಂಚಿತವಾಗಬಾರದು ಎಂಬ ಉದ್ದೇಶದೊಂದಿಗೆ ಗರಿಷ್ಠ ಪ್ರಯತ್ನ ನಡೆಸಲಾಗುವುದು. ಒಂದು ವೇಳೆ ಆ ದಿನ ಲಸಿಕೆ ಪಡೆಯಲು ಸಾಧ್ಯವಾಗದಿರುವ ಮಕ್ಕಳಿಗೆ ಡಿ.22, 23 ಮತ್ತು 24ರಂದು ಜಿಲ್ಲೆ ನಗರ ಪ್ರದೇಶಗಳಲ್ಲಿ , ಡಿ.22 ಮತ್ತು ಡಿ.23ರಂದು ಗ್ರಾಮೀಣ ಪ್ರದೇಶದಲ್ಲಿ ಮನೆ ಮನೆಗಳಿಗೆ ತೆರಳಿ ಪಲ್ಸ್ ಪೋಲಿಯೊ ಲಸಿಕೆ ಕೊಡಿಸಲಾಗುವುದು ಎಂದು ವಿವರಿಸಿದರು.

1995-96ರಲ್ಲಿ ಪ್ರಾರಂಭವಾದ ಪಲ್ಸ್ ಪೋಲಿಯೊ ಅಭಿಯಾನ ಅದ್ಬುತವಾಗಿ ಸಾಧನೆಯನ್ನು ಮಾಡಿದೆ. ಪೋಲಿಯೊ ಒಂದು ಸಾಂಕ್ರಾಮಿಕ ರೋಗ, ಪೋಲಿಯೊ ರೋಗಾಣುಗಳು ಕಲುಷಿತ ನೀರಿನಿಂದ ಅಥವಾ ಆಹಾರದಿಂದ ದೇಹವನ್ನು ಸೇರುತ್ತದೆ. ಈ ರೋಗಾಣುಗಳು ಮಕ್ಕಳ ದೇಹ ಪ್ರವೇಶಿಸಿದರೆ ಅವರು ಶಾಶ್ವತ ಅಂಗವಿಕಲಾಗುತ್ತಾರೆ. 0-5 ವರ್ಷದ ಒಳಗಿನ ಮಕ್ಕಳನ್ನು ಬಾಧಿಸುವ ಪೋಲಿಯೊ ವೈರಸ್ ಮುಖ್ಯವಾಗಿ ನರಮಂಡಲವನ್ನು ಬಾಧಿಸುತ್ತದೆ. ಗಂಟಲು ನೋವು, ತಲೆನೋವು,ವಾಂತಿ, ಬೆನ್ನುನೋವು, ಮಾಂಸಖಂಡಗಳ ನೋವು ಮುಂತಾದ ಸಣ್ಣ ಪ್ರಮಾಣದ ತೊಂದೆರೆಯಿಂದ ತೊಡಗಿ ನರಮಂಡಲ, ನರಗಳ ಬಲಹೀನತೆ ಉಂಟಾಗಬಹುದು. ಉಸಿರಾಟದ ತೊಂದರೆ ಕಾಣಿಸಿಕೊಳ್ಳಬಹುದು. ವ್ಯಕ್ತಿಯಿಂದ ವ್ಯಕ್ತಿಗೆ ಹರಡುವ ಈ ವೈರಸ್ ರೋಗ ಪ್ರತಿರೋಧ ಇಲ್ಲದವರನ್ನು ಬಾಧಿಸುತ್ತದೆ. ಈ ರೋಗಕ್ಕೆ ಚಿಕಿತ್ಸೆ ಇಲ್ಲ. ಆದರೆ ಈ ರೋಗವು ಬಾರದಂತೆ ಪರಿಣಾಮಕಾರಿಯಾದ ಪೋಲಿಯೊ ಲಸಿಕೆ ನೀಡುವುದರಿಂದ ಈ ರೋಗವನ್ನು ತಡೆಗಟ್ಟಬಹುದು ಎಂದು ಡಾ. ತಿಮ್ಮಯ್ಯ ಹೇಳಿದರು.

ನಮ್ಮ ದೇಶದಲ್ಲಿ 2011ರ ಜನವರಿ 13ರಂದು ಕೊನೆಯ ಬಾರಿಗೆ ಪೋಲಿಯೊ ಪ್ರಕರಣ ಕಂಡು ಬಂದಿರುತ್ತದೆ. ನಮ್ಮ ರಾಜ್ಯದಲ್ಲಿ 2007ರಲ್ಲಿ ಕೊನೆಯ ಪೋಲಿಯೊ ಪ್ರಕರಣ ಕಂಡು ಬಂದಿತ್ತು. 2014 ಮಾರ್ಚ್ 27ಕ್ಕೆ ನಮ್ಮ ದೇಶವನ್ನು ಪೋಲಿಯೊ ಸಾಂಕ್ರಾಮಿಕ ದೇಶಗಳ ಪಟ್ಟಿಯಿಂದ ಹೊರಗಿಡಲಾಗಿದೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಆರ್‌ಸಿಎಚ್ ಅಧಿಕಾರಿ ಡಾ.ರಾಜೇಶ್ ಹಾಗೂ ಆರೋಗ್ಯ ಶಿಕ್ಷಣಾಧಿಕಾರಿ ಜ್ಯೋತಿ ಉಪಸ್ಥಿತರಿದ್ದರು.



Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News