ಪುತ್ತೂರು | ಲಕ್ಷಾಂತರ ರೂ. ಮೌಲ್ಯದ ಕಾಫಿ ಬೀಜ ಕಳವು ಪ್ರಕರಣ : ಐವರು ಆರೋಪಿಗಳ ಬಂಧನ, ಸೊತ್ತು ವಶ
ಪುತ್ತೂರು, ಡಿ.9: ಪಿರಿಯಾಪಟ್ಟಣದಿಂದ ಮಂಗಳೂರಿನ ಪಣಂಬೂರು ಬಂದರ್‌ಗೆ ಲಾರಿಯೊಂದರಲ್ಲಿ ಸಾಗಾಟ ಮಾಡುತ್ತಿದ್ದ ಲಕ್ಷಾಂತರ ರೂ. ಮೌಲ್ಯದ ಕಾಫಿ ಬೀಜಗಳನ್ನು ಕಳವುಗೈದ ಪ್ರಕರಣಕ್ಕೆ ಸಂಬಂಧಿಸಿ ಪುತ್ತೂರು ನಗರ ಠಾಣೆಯ ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿ ಸೊತ್ತು ವಶಪಡಿಸಿಕೊಂಡಿದ್ದಾರೆ.
ಪ್ರಮುಖ ಆರೋಪಿ ಪುತ್ತೂರು ತಾಲೂಕಿನ ನೆಟ್ಟಣಿಗೆ ಮುಡ್ನೂರು ಗ್ರಾಮದ ಪೆರ್ನಾಜೆ ನಿವಾಸಿ ಆಶ್ಲೇಷ ಭಟ್, ರಿಕ್ಷಾ ಚಾಲಕರಾದ ನಾರಾಯಣ ಶೆಟ್ಟಿಗಾರ್ ಮತ್ತು ಮಿಥುನ್ ಕುಮಾರ್, ಬ್ರೋಕರ್ ವೃತ್ತಿಯ ವಿಜಯ ಶೆಟ್ಟಿ ಮತ್ತು ಪಿಕಪ್ ಚಾಲಕ ಸುಳ್ಯದ ಮುಹಮ್ಮದ್ ಅಶ್ರಫ್ ಬಂಧಿತ ಆರೋಪಿಗಳು. ಬಂಧಿತರಿಂದ ಕಾಫಿ ಬೀಜ ತುಂಬಿದ ಚೀಲ ಮತ್ತು ಕೃತ್ಯಕ್ಕೆ ಬಳಸಿದ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.
ಪುತ್ತೂರಿನ ನೆಹರೂನಗರ ಸಮೀಪದ ಶೇವಿರೆ ನಿವಾಸಿ ತೃತೇಶ್ ಎಂಬವರು ಮಂಗಳೂರು ಪಣಂಬೂರಿನ ಭವಾನಿ ಶಿಪ್ಪಿಂಗ್ ಸರ್ವೀಸ್ ಏಜೆನ್ಸಿ ಮೂಲಕ ಪಿರಿಯಾಪಟ್ಟಣದಿಂದ ಮಂಗಳೂರಿನ ಬಂದರಿಗೆ ಕಾಫಿ ಬೀಜಗಳನ್ನು ಟ್ರಾನ್ಸ್‌ಪೋರ್ಟ್ ಮಾಡಲು ಬುಕ್ಕಿಂಗ್ ಪಡೆದುಕೊಂಡಿದ್ದರು.
ಡಿ.3ರಂದು ತನ್ನ ಲಾರಿಯಲ್ಲಿ ಪಿರಿಯಾಪಟ್ಟಣದ ಹೈರೇಂಜ್ ಕಾಫಿ ಕ್ಯೂರಿಂಗ್ ಹೌಸ್ ಕಂಪೆನಿಯಿಂದ ತಲಾ 60 ಕೆ.ಜಿ. ತೂಕದ ಕಾಫಿ ಬೀಜ ತುಂಬಿದ್ದ 320 ಗೋಣಿ ಚೀಲಗಳನ್ನು ಲೋಡ್ ಮಾಡಿಕೊಂಡು ಮಂಗಳೂರು ಬಂದರಿಗೆ ಹೊರಟು ಬಂದಿದ್ದ ಅವರು ಮಧ್ಯ ರಾತ್ರಿ ಪುತ್ತೂರಿನ ನೆಹರೂ ನಗರ ತಲುಪಿದ್ದರು. ನೆಹರೂ ನಗರದಲ್ಲಿ ಲಾರಿಯನ್ನು ರಸ್ತೆ ಬದಿ ನಿಲ್ಲಿಸಿ ತನ್ನ ಮನೆಗೆ ಹೋಗಿದ್ದ ತೃತೇಶ್ ಡಿ.4ರಂದು ಬೆಳಗ್ಗೆ ಮರಳಿ ಬಂದು ಲಾರಿ ಚಲಾಯಿಸಿಕೊಂಡು ಹೋಗಿ ಮಧ್ಯಾಹ್ನ ವೇಳೆ ಮಂಗಳೂರು ಬಂದರು ತಲುಪಿದ್ದರು. ಮಂಗಳೂರಿನ ಬಂದರಿನಲ್ಲಿ ಕಂಪೆನಿಯವರು ಕ್ವಾಲಿಟಿ ತಪಾಸಣೆ ಮಾಡಿದಾಗ ಲಾರಿಯ ಹಿಂಬದಿಯ ಸೀಲ್‌ಲಾಕ್ ತುಂಡಾಗಿರುವುದು ಕಂಡುಬಂದಿತ್ತು. ಲೋಡ್ ಪರಿಶೀಲಿಸಿದ ವೇಳೆ ಕಾಫಿ ಬೀಜ ತುಂಬಿದ್ದ 320 ಗೋಣಿ ಚೀಲಗಳ ಪೈಕಿ 80 ಗೋಣಿ ಚೀಲ ಗಳು ಕಳವಾಗಿರುವುದು ಕಂಡು ಬಂದಿತ್ತು.
ಘಟನೆಯ ಕುರಿತು ತೃತೇಶ್ ಪುತ್ತೂರು ನಗರ ಠಾಣೆಗೆ ದೂರು ನೀಡಿದ್ದರು.
ಕಳವಾಗಿರುವ ಕಾಫಿ ಬೀಜಗಳ ಅಂದಾಜು ಮೌಲ್ಯ 21.44 ಲಕ್ಷ ರೂ. ಎಂದು ದೂರಿನಲ್ಲಿ ತಿಳಿಸಿದ್ದರು. ಪ್ರಕರಣ ದಾಖಲಿಸಿಕೊಂಡ ಪುತ್ತೂರು ನಗರ ಠಾಣೆಯ ಪೊಲೀಸರು. ಸಿಸಿ ಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದ ದೃಶ್ಯಾವಳಿಗಳನ್ನಾಧರಿಸಿ ಕಳ್ಳರ ಜಾಡು ಹಿಡಿದು ಪತ್ತೆ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.