ಅಸ್ಥಿಪಂಜರ ಪೊಲೀಸರಿಗೆ ಹಸ್ತಾಂತರ: ʼಧರ್ಮಸ್ಥಳ ದೂರುದಾರʼನ ಪರ ವಕೀಲರ ಹೇಳಿಕೆ
ಬೆಳ್ತಂಗಡಿ: ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರಿನಲ್ಲಿ ಹೇಳಲಾಗಿರುವಂತೆ ಹೂತು ಹಾಕಿದ್ದ ಅಸ್ಥಿಪಂಜರವೊಂದನ್ನು ಸಾಕ್ಷಿಯಾಗಿ ಹೊರತೆಗೆಯಲಾಗಿದ್ದು, ಅದನ್ನು ಬೆಳ್ತಂಗಡಿ ಪೊಲೀಸರಿಗೆ ಹಸ್ತಾಂತರಿಸಲಾಗಿದೆ. ಕಾನೂನು ಪ್ರಕಾರ ಎಲ್ಲ ಪ್ರಕ್ರಿಯೆಗಳನ್ನು ಪೂರೈಸಿ ನ್ಯಾಯಾಧೀಶರ ಎದುರು ಹೇಳಿಕೆ ನೀಡಲಾಗಿದೆ ಎಂದು ʼಧರ್ಮಸ್ಥಳ ದೂರುದಾರʼರ ಪರ ವಕೀಲ ಪವನ್ ಶ್ಯಾಮ್ ಹೇಳಿದ್ದಾರೆ.
ಧರ್ಮಸ್ಥಳದಲ್ಲಿ ಹಲವಾರು ಶವಗಳನ್ನು ಸಾಮೂಹಿಕವಾಗಿ ಹೂತು ಹಾಕಿದ ಆರೋಪ ಮಾಡಿರುವ ದೂರುದಾರನನ್ನು ಜು.11ರಂದು ಬೆಳ್ತಂಗಡಿ ತಾಲ್ಲೂಕಿನ ಪ್ರಧಾನ ಸಿವಿಲ್ ನ್ಯಾಯಾಧೀಶರು ಮತ್ತು ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು.
ಆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ವಕೀಲ ಪವನ್ ದೇಶಪಾಂಡೆ, ಹೆಣಗಳನ್ನು ಹೂತು ಹಾಕಿರುವ ಜಾಗಗಳನ್ನು ಸ್ಪಷ್ಟವಾಗಿ ದೂರುದಾರನು ಗುರುತಿಸಿ ತೋರಿಸಲು ಸಿದ್ಧನಿದ್ದಾನೆ. ಈ ಬಗ್ಗೆ ಪೊಲೀಸರು ಯಾವಾಗ ಬೇಕಾದರೂ ದಿನ ನಿಗದಿಪಡಿಸಿದ್ದರೂ ನಾವು ದೂರುದಾರನೊಂದಿಗೆ ಬಂದು ಸಹಕರಿಸಲಿದ್ದೇವೆ. ಘಟನೆಯ ಬಗ್ಗೆ ಮಾಹಿತಿಗಳನ್ನು ನೀಡಲಾಗಿದೆ. ಸಾಕ್ಷ್ಯ ನಾಶವಾಗುವ ಆತಂಕವೂ ಇದ್ದು, ಸಾಧ್ಯವಾದಷ್ಟು ವೇಗವಾಗಿ ಇಲ್ಲಿ ಹೇಳಿಕೆ ನೀಡಿರುವ ವ್ಯಕ್ತಿ ಹೂತು ಹಾಕಿರುವ ಮೃತದೇಹಗಳನ್ನು ಹೊರತೆಗೆಯಲು ಕ್ರಮ ಕೈಗೊಳ್ಳಬೇಕಾದ ಜವಾಬ್ದಾರಿ ಪೊಲೀಸ್ ಇಲಾಖೆಯದ್ದು ಎಂದು ಅವರು ಹೇಳಿದ್ದಾರೆ.
ಇಡೀ ಪ್ರಕರಣದ ಆರೋಪಿ ಯಾರು ಎಂಬ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ವಕೀಲರು, ಈ ಬಗ್ಗೆ ನ್ಯಾಯಾಲಯಕ್ಕೆ ನೀಡಲಾಗಿರುವ ಹೇಳಿಕೆಯಲ್ಲಿ ಸ್ಪಷ್ಟಪಡಿಸಲಾಗಿದೆ. ಅದನ್ನು ನಮಗೆ ನೀಡಿಲ್ಲ. ಅದು ನ್ಯಾಯಾಲಯದಲ್ಲಿ ಮತ್ತು ತನಿಖಾಧಿಕಾರಿಯವರ ಬಳಿ ಇದೆ ಎಂದು ಪ್ರತಿಕ್ರಿಯಿಸಿದರು.
ನ್ಯಾಯಾಲಯಲಯದಲ್ಲಿ ಹೇಳಿಕೆ ನೀಡಿರುವ ದೂರುದಾರನನ್ನು ಪೊಲೀಸರು ಬಂಧಿಸಿಲ್ಲ ಹಾಗೂ ಪೊಲೀಸ್ ಕಸ್ಟಡಿಗೆ ನೀಡಲಾಗಿಲ್ಲ. ಅವರು ನಮ್ಮೊಂದಿಗೆ ಇರುತ್ತಾರೆ. ಪೊಲೀಸರು ಯಾವಾಗ ಹಾಜರಾಗಲು ಸೂಚಿಸುತ್ತಾರೋ ಆಗ ಅವರನ್ನು ಹಾಜರುಪಡಿಸಲಾಗುವುದು ಎಂದು ವಕೀಲ ಪವನ್ ಶ್ಯಾಮ್ ಹೇಳಿದರು.