×
Ad

ಸೆ.22ರಿಂದ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ| ಸಿದ್ಧತೆ ಬಗ್ಗೆ ಸ್ಪೀಕರ್ ಯು.ಟಿ.ಖಾದರ್ ನೇತೃತ್ವದಲ್ಲಿ ಸಭೆ

Update: 2025-09-17 20:57 IST

ಮಂಗಳೂರು: ರಾಜ್ಯ ಹಿಂದುಳಿದ ವರ್ಗಗ ಆಯೋಗದ ವತಿಯಿಂದ ಸೆ. 22ರಿಂದ ಅ. 7ರವರೆಗೆ ಹಮ್ಮಿಕೊಳ್ಳಲಾ ಗಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ವೇಳೆ ಪಡಿತರ ಚೀಟಿ ಇಲ್ಲದ ಮತ್ತು ಪಡಿತರ ಚೀಟಿಯಲ್ಲಿ ಹೆಸರು ಇಲ್ಲದ ಕುಟುಂಬದ ಸದಸ್ಯರಿಗೆ ಇ- ಕೆವೈಸಿ ಕಡ್ಡಾಯ. ಅದಕ್ಕಾಗಿ ಆಧಾರ್ ಕಾರ್ಡ್‌ಗೆ ಮೊಬೈಲ್ ನಂಬರ್ ಲಿಂಕ್ ಆಗಿರುವುದನ್ನು ಎಲ್ಲರೂ ಖಾತರಿಪಡಿಸಿಕೊಂಡಿರಬೇಕು ಎಂದು ವಿಧಾನಸಭೆ ಸ್ಪೀಕರ್ ಯು.ಟಿ.ಖಾದರ್ ಹೇಳಿದ್ದಾರೆ.

ದ.ಕ. ಜಿಲ್ಲಾ ಪಂಚಾಯತ್‌ನ ನೇತ್ರಾವತಿ ಸಭಾಂಗಣದಲ್ಲಿ ಬುಧವಾರ ಸಮೀಕ್ಷೆಯ ಕುರಿತಂತೆ ಶಾಸಕರು, ವಿವಿಧ ಧರ್ಮ, ಜಾತಿ, ಸಮುದಾಯಗಳ ಮುಖ್ಯಸ್ಥರನ್ನು ಒಳಗೊಂಡ ಮಾಹಿತಿ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ನಿಗದಿತ ಸಮಯದಲ್ಲಿ ಸಮೀಕ್ಷೆ ನಡೆಸಲು ಆಯೋಗ ನಿರ್ಧರಿಸಿದೆ. ಸಮೀಕ್ಷೆ ಕುರಿತಂತೆ ಈಗಾಗಲೇ ಸ್ಟಿಕ್ಕರ್ ಅಂಟಿಸುವ ಮೂಲಕ ಮಾಹಿತಿ ನೀಡಲಾಗಿದೆ. ಮುಂದೆ ಸಮೀಕ್ಷೆಯ ಕುರಿತಂತೆ 60 ಪ್ರಶ್ನಾವಳಿಗಳನ್ನು ಒಳಗೊಂಡ ಫಾರಂ ಅನ್ನು ಪ್ರತಿ ಮನೆಗಳಿಗೆ ಆಶಾ ಕಾರ್ಯಕರ್ತರು ತಲುಪಿಸಲಿದ್ದಾರೆ. ಈ ಪ್ರಶ್ನಾವಳಿಗೆ ಪೂರಕವಾದ ಮಾಹಿತಿ ಯನ್ನು ಮನೆಯವರು ಸಿದ್ಧಪಡಿಸಿಕೊಂಡಿರಬೇಕು. ಬಳಿಕ ತರಬೇತು ಹೊಂದಿದ, ಆಯೋಗದಿಂದ ಅಧಿಕೃತ ಐಡಿ ಕಾರ್ಡ್ ಪಡೆದ ಶಿಕ್ಷಕರು ಮನೆಗಳಿಗೆ ಭೇಟಿ ನೀಡಿ ಮೊಬೈಲ್‌ಗಳಲ್ಲಿಯೇ ಮನೆಯವರಿಂದ ಮಾಹಿತಿಯನ್ನು ಅಪ್‌ಲೋಡ್ ಮಾಡಿಕೊಳ್ಳುತ್ತಾರೆ. ಈ ಸಂದರ್ಭ ಮನೆಯಲ್ಲಿ ಲಭ್ಯ ಇರುವವರು ಕುಟುಂಬದ ಸದಸ್ಯರ ಸಮಗ್ರ ಮಾಹಿತಿಯನ್ನು ಸಮರ್ಪಕವಾಗಿ ಒದಗಿಸಬೇಕು. ಈ ಕಾರ್ಯಕ್ಕೆ ನಿಯೋಜನೆಗೊಂಡ ಶಿಕ್ಷಕರಿಗೆ ಮನೆಯೊಂದರ ಮಾಹಿತಿ ಸಂಗ್ರಹಿಸಲು ಗರಿಷ್ಟ 1 ಗಂಟೆಯ ಸಮಯಾವಕಾಶ ಬೇಕಿದೆ. ದಿನಕ್ಕೆ ಅವರು 10 ಮನೆ ಗಳಿಂದ ಮಾಹಿತಿ ಸಂಗ್ರಹಿಸಲಿದ್ದಾರೆ. ಮಾಹಿತಿಗಳು ಸಿದ್ಧವಾಗಿದ್ದರೆ ಮಾಹಿತಿ ಭರ್ತಿ ಮಾಡಿಕೊಳ್ಳಲು ಸುಲಭವಾ ಗಲಿದೆ ಎಂದು ಯು.ಟಿ.ಖಾದರ್ ತಿಳಿಸಿದರು.

ಪೂರ್ವ ತಯಾರಿ ಇಲ್ಲದ ಸಮೀಕ್ಷೆ:-

ಸಮೀಕ್ಷೆ ನಡೆಸುವ ಕುರಿತಂತೆ ಸಾರ್ವಜನಿಕರಿಗೆ ಸೂಕ್ತವಾದ ಮಾಹಿತಿಯನ್ನೇ ಒದಗಿಸದೆ ಮನೆಗಳಿಗೆ ಸ್ಟಿಕರ್ ಅಂಟಿಸುವ ಕಾರ್ಯ ನಡೆದಿದೆ. ಇದನ್ನು ಹರಿಯಬಾರದು ಎಂದು ಅದರಲ್ಲಿ ಹೇಳಿದ್ದರೂ ಅರಿವು ಇಲ್ಲದ ಅನೇಕ ಮನೆಗಳವರು ಹರಿದು ಬಿಸಾಡಿದ್ದಾರೆ. ಈ ಸಭೆಯ ಬಗ್ಗೆಯೂ ನಿನ್ನೆ ಮಾಹಿತಿ ನೀಡಲಾಗಿದೆ. ಸಮೀಕ್ಷೆ ಕುರಿತಂತೆಯೂ ಸಾಕಷ್ಟು ಗೊಂದಲಗಳು ಇರುವಾಗ ಸಾರ್ವಜನಿಕವಾಗಿ ಈ ಬಗ್ಗೆ ಮಾಹಿತಿ ನೀಡದೆ ಈ ಸಮೀಕ್ಷೆ ನಡೆಸಲಾಗುತ್ತಿದೆ ಎಂದು ಶಾಸಕರಾದ ವೇದವ್ಯಾಸ ಕಾಮತ್ ಮತ್ತು ಡಾ. ಭರತ್ ಶೆಟ್ಟಿ ಆಕ್ಷೇಪಿಸಿದರು.

ಈ ಬಗ್ಗೆ ಮಾಹಿತಿ ನೀಡುವುದಕ್ಕಾಗಿಯೇ ದ.ಕ. ಜಿಲ್ಲೆಯಲ್ಲಿ ಪ್ರಥಮವೆಂಬಂತೆ ಈ ಸಭೆಯನ್ನು ಕರೆಯಲಾಗಿದೆ. ಸಭೆಯಲ್ಲಿ ಜನಪ್ರತಿನಿಧಿಗಳು, ವಿವಿಧ ಸಮುದಾಯಗಳ ನಾಯಕರಿಂದ ವ್ಯಕ್ತವಾಗುವ ಅಭಿಪ್ರಾಯ, ಆಕ್ಷೇಪ, ಸಲಹೆಗಳನ್ನು ಆಯೋಗದ ಗಮನಕ್ಕೆ ತಂದು ಸರಿಪಡಿಸುವ ಕಾರ್ಯ ನಡೆಸಲಾಗುವುದು ಎಂದು ಯು.ಟಿ.ಖಾದರ್ ತಿಳಿಸಿದರು.

*ಎಸ್‌ಸಿ, ಎಸ್‌ಟಿಗೆ ಉಪಜಾತಿ ನಮೂದು ಇರದು

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರು ಉಪಜಾತಿಗಳನ್ನು ನಮೂದು ಮಾಡಲು ಅವಕಾಶ ಇರುವುದಿಲ್ಲ. ಕೇಂದ್ರ ಸರಕಾರದಿಂದ ಈಗಾಗಲೇ ಅಧಿಸೂಚಿತವಾಗಿರುವ ಎಸ್‌ಸಿ ಎಸ್‌ಟಿ ಜಾತಿಗಳಡಿಯಲ್ಲಿಯೇ ಸಂಬಂಧಪಟ್ಟ ಜಾತಿಗಳನ್ನು ನಮೂದು ಮಾಡಿಕೊಳ್ಳಬೇಕು ಎಂದು ಆದಿದ್ರಾವಿಡ ಸಮುದಾಯದ ಮುಖಂಡರಾದ ಶೀನ ಎಂಬವರ ಪ್ರಶ್ನೆಗೆ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಕಾರ್ಯದರ್ಶಿ ಉರ್ಮಿಳಾ ಬಿ. ಸ್ಪಷ್ಟನೆ ನೀಡಿದರು.

ಜಾತಿಯ ಎರಡು ಹೆಸರಿದ್ದರೆ ಸಮಾನಾರ್ಥ ಕಾಲಂನಲ್ಲಿ ಅವಕಾಶ

ದ.ಕ. ಜಿಲ್ಲೆಯಲ್ಲಿ ಬಂಟರು ಯಾನೆ ನಾಡವರ ಹೆಸರಿನಲ್ಲಿ ನಾವು ಗುರುತಿಸಿಕೊಂಡಿದ್ದೇವೆ. ಜಾತಿ ಕಾಲಂನಲ್ಲಿ ಬಂಟ್ಸ್ ಎಂದು ಇದೆ, ಉಪಜಾತಿಯಲ್ಲಿ ನಾಡವರು ಎಂದು ನಮೂದಿಸಿದರೆ, ಇದು ನಮ್ಮ ಸಂಖ್ಯೆಯಲ್ಲಿ ಗೊಂದಲಕ್ಕೆ ಕಾರಣ ವಾಗಲಿದೆ ಎಂದು ಬಂಟರ ಯಾನೆ ನಾಡವರ ಮಾತೃತ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ ಆಕ್ಷೇಪಿಸಿದರು.

ಬಂಟ್ಸ್ ಎಂಬುದನ್ನು ಜಾತಿಯ ಕಾಲಂನಲ್ಲಿ ನಮೂದಿಸಿ, ಇತರೆ ಕಾಲಂನಡಿ ಬರುವ ‘ಸ್ಪೆಸಿಫೈ’ ಎಂಬಲ್ಲಿ ನಾಡವ ಎಂದು ನಮೂದಿಸಿದರೆ ಸಮಾನಾರ್ಥ ಪದದಲ್ಲಿ ಸೇರಿಕೊಳ್ಳುತ್ತದೆ. ಗೊಂದಲ ಆಗದು ಎಂದು ಉರ್ಮಿಳಾ ಬಿ. ತಿಳಿಸಿದರು.

ಮನೆಗೆ ಬರುವವರು ಅಧಿಕೃತರೇ ಹಾಗೂ ಮಾಹಿತಿ ಸೋರಿಕೆ ಆಗದಿರುವುದನ್ನು ಯಾರು ಖಾತರಿ ಪಡಿಸುತ್ತಾರೆಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಉರ್ಮಿಳಾ, ಈಗಾಗಲೇ ತರಬೇತು ನೀಡಲಾದ ಹಾಗೂ ಆಯೋಗದಿಂದ ಗುರುತು ಪತ್ರ ಹೊಂದಿದ ಶಿಕ್ಷಕರೇ ಮನೆಗಳಿಗೆ ಸಮೀಕ್ಷೆಗೆ ಭೇಟಿ ನೀಡಲಿದ್ದಾರೆ. ಮಾಹಿತಿಯು ಕೂಡಾ ಆಯೋಗದ ಅಧಿಕೃತ ವೆಬ್‌ಸೈಟ್‌ನಲ್ಲಿ ಸಂಗ್ರಹವಾಗಿರುತ್ತದೆ ಎಂದು ತಿಳಿಸಿದರು.

ಗಟ್ಟಿ, ತೀಯಾ, ಮನ್ಸ, ಜೈನ ಸಮುದಾಯದ ಗೊಂದಲಗಳ ಬಗ್ಗೆಯೂ ನಾಯಕರು ಸಭೆಯ ಗಮನ ಸೆಳೆದರು.

ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯ ಡಾ. ಮಂಜುನಾಥ ಭಂಡಾರಿ, ಮೂಡ ಅಧ್ಯಕ್ಷ ಸದಾಶಿವ ಉಳ್ಳಾಲ, ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಗಟ್ಟಿ, ಜಿಲ್ಲಾಧಿಕಾರಿ ದರ್ಶನ್ ಎಚ್.ವಿ., ಜಿ.ಪಂ. ಸಿಇಒ ನರ್ವಡೆ ವಿನಾಯಕಂ ಖರ್ಬೂರಿ, ಮಂಗಳೂರು ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ, ಡಿಸಿಪಿ ಮಿಥುನ್, ಎಡಿಸಿ ರಾಜು ಕೆ., ಎಸಿ ಮೀನಾಕ್ಷಿ ಆರ್ಯ ಉಪಸ್ಥಿತರಿದ್ದರು.

ಮೊಗವೀರ, ಮೊಗೇರರ ಗೊಂದಲ ನಿವಾರಿಸಿ

ದ.ಕ. ಜಿಲ್ಲೆಯ ಮೊಗೇರರು ಪರಿಶಿಷ್ಟ ಜಾತಿಗೆ ಸೇರಲ್ಪಟ್ಟವರಾಗಿದ್ದು, ಉತ್ತರ ಕನ್ನಡ ಜಿಲ್ಲೆಯ ಮೀನುಗಾರಿಕೆ ಸಮುದಾಯ ಮೊಗವೀರರು ಕೂಡಾ ಮೊಗೇರ ಜಾತಿ ಪ್ರಮಾಣ ಪತ್ರ ಪಡೆದು ವಂಚನೆಯಾಗಿದೆ. 17433 ಮಂದಿ ಈ ರೀತಿ ನಕಲಿ ಜಾತಿ ಪ್ರಮಾಣಪತ್ರ ಪಡೆದಿರುವುದರಿಂದ ಇದು ಮೀಸಲಾತಿಯ ವೇಳೆ ಅರ್ಹ ಫಲಾನುಭವಿಗಳ ಮೇಲೆ ಪರಿಣಾಮ ಬೀರುತ್ತದೆ. ಸಾಕಷ್ಟು ಮನವಿಯನ್ನು ಈ ಬಗ್ಗೆ ನೀಡಲಾಗಿದೆ ಎಂದು ಅಶೋಕ್ ಕೊಂಚಾಡಿಯ ವರು ಸಭೆಯಲ್ಲಿ ತಿಳಿಸಿದಾಗ, ಈ ಬಗ್ಗೆ ಆಯೋಗದ ಗಮನಕ್ಕೆ ತರುವುದಾಗಿ ಕಾರ್ಯದರ್ಶಿ ಉರ್ಮಿಳಾ ತಿಳಿಸಿದರು.

ಸಮೀಕ್ಷೆಗೆ ಸಂದರ್ಭ ಇರಬೇಕಾದ ಮಾಹಿತಿ

*ಆಧಾರ್ ಕಾರ್ಡ್ ಮೊಬೈಲ್ ಸಂಖ್ಯೆಗೆ ಲಿಂಕ್ ಆಗಿರಬೇಕು.

*ಒಂದು ಕುಟುಂಬದ 9 ಸದಸ್ಯರ ಆಧಾರ್ ಕಾರ್ಡ್‌ಗಳನ್ನು ಒಂದು ಸಂಖ್ಯೆಗೆ ಲಿಂಕ್ ಮಾಡಬಹುದು.

*ಆಧಾರ್ ಕಾರ್ಡ್ ಸಂಖೆಯಯನ್ನು ಆಧಾರ್ ನೋಂದಣಿ ಕೇಂದ್ರ, ಗ್ರಾಮ ವನ್ ಕೇಂದ್ರ, ಮಂಗಳೂರು ವನ್ ಕೇಂದ್ರ ಅಥವಾ ಅಂಚೆ ಕಚೇರಿಯಲ್ಲಿ ಮೊಬೈಲ್ ಸಂಖ್ಯೆಗೆ ಲಿಂಕ್ ಮಾಡಬಹುದು.

*18 ವರ್ಷ ಮೇಲ್ಪಟ್ಟ ಎಲ್ಲರಿಗೆ ಮತದಾರರ ಗುರುತಿನ ಚೀಟಿ ಬಗ್ಗೆ ಮಾಹಿತಿ ಕೇಳಾಗುತ್ತದೆ. ಇದ್ದರೆ ತೆಗೆದಿಟ್ಟುಕೊಳ್ಳುವುದು.

*ಸಮೀಕ್ಷೆದಾರರು ಬೆಳಗ್ಗೆ 9ರಿಂದ ಸಂಜೆ 5 ಗಂಟೆಯವರೆಗೆ ಮನೆಗಳಿಗೆ ಭೇಟಿ ನೀಡಲಿದ್ದು, ಆಸಮಯ ಮನೆಯಲ್ಲಿರುವವರು ಕುಟುಂಬದ ಸದಸ್ಯರ ದಾಖಲೆಗಳು ಲಭ್ಯವಿರುವಂತೆ ನೋಡಿಕೊಳ್ಳುವುದು.

‘ ತರಬೇತಿ ಪಡೆದ ಶಿಕ್ಷಕರು ಸೆ.22ರಿಂದ ಅ. 7ರ ನಡುವೆ ಮನೆಗಳಿಗೆ ಭೇಟಿ ನೀಡಿ ಕುಟುಂಬದ ಮಾಹಿತಿಯನ್ನು ಸಂಗ್ರಹಿಸಲಿದ್ದಾರೆ. ಬಿಟ್ಟು ಹೋದವರ ಮಾಹಿತಿಯನ್ನು ಕುಟುಂಬದ ಇತರ ಸದಸ್ಯರಿಂದ ಪಡೆಯಲಾದ ಮೊಬೈಲ್ ಸಂಖ್ಯೆಯ ಮೂಲಕ ಮಾಹಿತಿ ಸಂಗ್ರಹಿಸುವ ಕಾರ್ಯ ನಡೆಯಲಿದೆ. ಈ ಸಂದರ್ಭದಲ್ಲಿಯೂ ಬಿಟ್ಟು ಹೋದ ಮಾಹಿತಿಯನ್ನು ಬಳಿಕ ಗ್ರಾ.ಪಂ. ಮಟ್ಟದಲ್ಲಿ ಶಿಬಿರಗಳ ಮೂಲಕ ಸಂಗ್ರಹಿಸಲಾಗುತ್ತದೆ. ಸಮುದಾಯಗಳಲ್ಲಿ ಯಾವುದೇ ರೀತಿಯ ಗೊಂದಲ, ಆಕ್ಷೇಪ, ಮಾಹಿತಿ, ಸಲಹೆಗಳಿದ್ದಲ್ಲಿ ಆಯೋಗಕ್ಕೆ ಲಿಖಿತವಾಗಿ ಸಲ್ಲಿಸಬಹುದು. ಸಹಾಯವಾಣಿ ಸಂ. 8050770004 ಅಥವಾ ವೆಬ್‌ಸೈಟ್ kscbc.karnataka.gov.in| ಮೂಲಕವೂ ಸಂಪರ್ಕಿಸಬಹುದು.’

*ಉರ್ಮಿಳಾ ಬಿ., ಕಾರ್ಯದರ್ಶಿ, ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News