ಜೂ.5ರಂದು ತೆಂಕುತಿಟ್ಟು ಚಿಕ್ಕ ಮೇಳಗಳ ತಿರುಗಾಟಕ್ಕೆ ಚಾಲನೆ
ಮಂಗಳೂರು,ಜೂ.3: ತೆಂಕುತಿಟ್ಟು ಚಿಕ್ಕ ಮೇಳಗಳ ಒಕ್ಕೂಟ ನೇತೃತ್ವದಲ್ಲಿ 2025ನೇ ಸಾಲಿನ ಚಿಕ್ಕಮೇಳಗಳ ತಿರುಗಾಟಕ್ಕೆ ಜೂ.5ರಂದು ಬಜ್ಪೆ ತಳಕಳ ಕಾಶೀ ಶ್ರೀ ವಿಶ್ವನಾಥ ದೇವಸ್ಥಾನದಲ್ಲಿ ಗೆಜ್ಜೆ ಮುಹೂರ್ತದೊಂದಿಗೆ ಚಾಲನೆ ನೀಡಲಾಗುವುದು ಎಂದು ಒಕ್ಕೂಟದ ಅಧ್ಯಕ್ಷ ಸರಪಾಡಿ ಅಶೋಕ ಶೆಟ್ಟಿ ತಿಳಿಸಿದರು.
ತೆಂಕುತಿಟ್ಟಿನಲ್ಲಿ ಸುಮಾರು 60 ಚಿಕ್ಕಮೇಳ ತಂಡ ಇದೆ. ಈ ಪೈಕಿ 49 ತಂಡಗಳು ಒಕ್ಕೂಟದಲ್ಲಿ ನೋಂದಣಿ ಮಾಡಿಕೊಂಡಿವೆ. ಚಿಕ್ಕಮೇಳದಲ್ಲಿ ಶಿಸ್ತು, ನಿಯಮ ಇರಬೇಕು. ಅರ್ಹ ಕಲಾವದರಿಗೆ ಅನ್ಯಾಯ ಆಗಬಾರದು ಎಂಬ ದೃಷ್ಟಿಯಿಂದ ಕಳೆದ ಎರಡು ವರ್ಷಗಳ ಹಿಂದೆ ಒಕ್ಕೂಟ ಅಸ್ತಿತ್ವಕ್ಕೆ ಬಂದಿತ್ತು. ಚಿಕ್ಕಮೇಳಗಳಲ್ಲಿ ನಡೆಯುತ್ತಿದ್ದ ಕೆಲ ಅಪಸವ್ಯ, ಅನಪೇಕ್ಷಿತ ಘಟನೆಗಳು ನಡೆಯಬಾರದು ಎಂಬ ದೃಷ್ಟಿಯಿಂದ ಎಲ್ಲ ಚಿಕ್ಕಮೇಳಗಳನ್ನು ಒಗ್ಗೂಡಿಸಿ ನಿಯಮದಂತೆ ತಿರುಗಾಟ ನಡೆಸಬೇಕು ಎಂದು ಸೂಚಿಸಲಾಗಿದೆ. ಶಿಸ್ತು ಸಂಪ್ರದಾಯಕ್ಕೆ, ಸಭ್ಯತೆಗೆ ಆಡಚಣೆಯಾಗದಂತೆ ನೀತಿ ನಿಯಮಾವಳಿ ರೂಪಿಸಿಕೊಳ್ಳಲಾಗಿದೆ. ಒಕ್ಕೂಟದಲ್ಲಿ ನೋಂದಣಿಯಾದ ಎಲ್ಲ ಚಿಕ್ಕಮೇಳಗಳನ್ನು ಗೆಜ್ಜೆ ಮುಹೂರ್ತಕ್ಕೆ ಆಹ್ವಾನಿಸಲಾಗಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸಂಜೆ 5.30ರಿಂದ ರಾತ್ರಿ 10.30ರವರೆಗೆ ಚಿಕ್ಕಮೇಳಗಳ ಪ್ರದರ್ಶನ ನಡೆಯುತ್ತದೆ. ಮನೆ ಮನೆ ಯಕ್ಷಗಾನದಲ್ಲಿ 5 ಜನರ ತಂಡ ಪ್ರತಿ ಮನೆಗಳಿಗೂ ಭೇಟಿ ನೀಡಿ ಸುಮಾರು 20 ನಿಮಿಷ ದಿವ್ಯ ಸಂದೇಶ ಇರುವ ಒಂದು ಯಕ್ಷಗಾನದ ತುಣುಕನ್ನು ಪ್ರದರ್ಶಿಸಿ ಆ ಮನೆಯವರು ನೀಡುವ ದೇಣಿಗೆಯನ್ನು ಸ್ವೀಕರಿಸಿ, ಮುಂದಿನ ಮನೆಗೆ ತೆರಳುತ್ತಾರೆ.
ದ.ಕ. ಜಿಲ್ಲಾದ್ಯಂತ ಸಂಚರಿಸುವ ಬಡ ಕಲಾವಿದರ ಚಿಕ್ಕಮೇಳದ ಕಲಾ ತಂಡದಲ್ಲಿರುವ ಕಲಾವಿದರಿಗೆ ಕಾನೂನಿನಡಿಯಲ್ಲಿ ರಕ್ಷಣೆ ನೀಡಬೇಕು. ಒಕ್ಕೂಟದಲ್ಲಿ ನೋಂದಾಯಿಸದೆ ಅಶಿಸ್ತು, ಅಸಭ್ಯತೆಯ ಮೂಲಕ ನೋಂದಾಯಿತ ಚಿಕ್ಕಮೇಳದ ಒಕ್ಕೂಟದ ವ್ಯವಸ್ಥೆಗೆ ಭಂಗ ತರುವ ಅನಧಿಕೃತ ‘ಚಿಕ್ಕ ಮೇಳ’ದ ಹೆಸರಿನಲ್ಲಿ ತಿರುಗಾಟ ಮಾಡಿದರೆ ಅವರ ಮೇಲೆ ಶಿಸ್ತು ಕ್ರಮ ಕೈಗೊಂಡು ನೈಜ ಕಲಾವಿದರ ಬದುಕಿಗೆ ಸಹಕರಿಸಬೇಕಿದೆ. ಕಳೆದ ವರುಷ ಅನಧಿಕೃತ ಚಿಕ್ಕಮೇಳದ ಹೆಸರಿನಲ್ಲಿ ಕೆಲವು ಭಾಗಗಳಲ್ಲಿ ಅನಪೇಕ್ಷಿತ ಘಟನೆಗಳು ನಡೆದಿವೆ. ಈ ಎಲ್ಲಾ ಕಾರಣಕ್ಕಾಗಿ ಚಿಕ್ಕಮೇಳಗಳ ಒಕ್ಕೂಟದ ನಿಯಮಾವಳಿಗೆ ವಿರುದ್ಧವಾಗಿ ತಿರುಗಾಟ ಮಾಡಬಾರದು ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಮನವಿ ಮಾಡಲಾಗಿದೆ ಎಂದರು.
ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಕುಮಾರ್ ಮಾಲೆಮಾರ್, ಉಪಾಧ್ಯಕ್ಷರಾದ ರಮೇಶ ಕುಲಶೇಖರ, ಮೋಹನ ಕಲಂಬಾಡಿ, ಪ್ರಮುಖರಾದ ಸುದರ್ಶನ್ ಸೂರಿಂಜೆ, ಸಂತೋಷ್, ಶರಣ್ ಪೂಜಾರಿ ತಳಕಳ ಉಪಸ್ಥಿತರಿದ್ದರು.
ತೆಂಕುತಿಟ್ಟು ಚಿಕ್ಕ ಮೇಳಗಳ ಒಕ್ಕೂಟದ ಪರವಾನಿಗೆ ಪತ್ರ ಇದ್ದವರಿಗೆ ಮಾತ್ರ ಚಿಕ್ಕಮೇಳಗಳ ಪ್ರದರ್ಶನಕ್ಕೆ ಅವಕಾಶ ನೀಡಬೇಕು. ಚಿಕ್ಕಮೇಳ ಮನೆಗೆ ಬಂದಾಗ ಅವರಲ್ಲಿ ಪರವಾನಿಗೆ ಪತ್ರ ಇದೆಯೇ ಎಂಬುದನ್ನು ಪರಿಶೀಲಿಸಿದ ಬಳಿಕ ಮನೆಯವರು ಪ್ರದರ್ಶನಕ್ಕೆ ಅವಕಾಶ ನೀಡಬೇಕು. ಆಯಾ ಚಿಕ್ಕಮೇಳಕ್ಕೆ ನಿಗದಿಪಡಿಸಿದ ನಿರ್ದಿಷ್ಟ ವ್ಯಾಪ್ತಿ ಪ್ರದೇಶದಲ್ಲಿ ಮಾತ್ರ ತಿರುಗಾಟ ನಡೆಸಬೇಕು ಎಂದು ಸರಪಾಡಿ ಅಶೋಕ ಶೆಟ್ಟಿ ವಿನಂತಿಸಿದರು.