×
Ad

ಮಂಗಳೂರು: ಹಳೆಯ‌ ಮನೆ ಕೆಡವುತ್ತಿದ್ದ ವೇಳೆ ಅವಘಡ: ಮನೆಯ ಯಜಮಾನ ಸಹಿತ ಇಬ್ಬರು ಮೃತ್ಯು

Update: 2024-09-12 16:39 IST

ಮಂಗಳೂರು: ಜೆಸಿಬಿ ಬಳಸಿಕೊಂಡು ಹಳೆಯ ಮನೆಯನ್ನು ಕೆಡಹುವ ವೇಳೆ ನಡೆದ ಅವಘಡವೊಂದರಲ್ಲಿ ಮನೆಯ ಯಜಮಾನ ಸಹಿತ ಇಬ್ಬರು ಮೃತಪಟ್ಟ ಘಟನೆ ನಗರದ ಕರಂಗಲ್ಪಾಡಿ-ಜೈಲ್ ರಸ್ತೆಯ ಕಾರಾಗೃಹದ ಬಳಿ ಗುರುವಾರ ನಡೆದಿದೆ.

ಕರಂಗಲ್ಪಾಡಿಯ ನಿವಾಸಿಗಳಾದ ಜೇಮ್ಸ್ ಸ್ಯಾಮ್ಯುವೆಲ್ ಜತ್ತನ್ನ (56) ಮತ್ತವರ ಸಹೋದರ ಸಂಬಂಧಿ ಅಡ್ವಿನ್ ಹೆರಾಲ್ಡ್ ಮಾಬೆನ್ (54) ಮೃತಪಟ್ಟವರು. ಘಟನೆಗೆ ಸಂಬಂಧಿಸಿದಂತೆ ಆರೋಪಿ ಧನಂಜಯ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ಜೇಮ್ಸ್ ಜತ್ತನ್ನ ಅವರ ಪೂರ್ವಜರ ಮನೆ ಇದಾಗಿದೆ. ಆಸ್ತಿ ಪಾಲಿನಲ್ಲಿ ಜೇಮ್ಸ್ ಜತ್ತನ್ನ ಅವರಿಗೆ ಈ ಮನೆ ಸಿಕ್ಕಿತ್ತು. ಈ ಮನೆಗೆ ತಾಗಿಕೊಂಡು ಅಡ್ವಿನ್ ಮಾಬೆನ್‌ರ ಮನೆಯೂ ಇದೆ. ಜೇಮ್ಸ್ ಜತ್ತನ್ನ ತನ್ನ ಪಾಲಿಗೆ ಬಂದಿರುವ ಪೂರ್ವಜರ ಹಳೆಯ ಮನೆಯನ್ನು ಕೆಡವಿ ಅಲ್ಲೇ ಹೊಸ ಮನೆ ಕಟ್ಟಲು ಉದ್ದೇಶಿಸಿದ್ದರು. ಅದರಂತೆ ಈ ಮನೆಯನ್ನು ಜೆಸಿಬಿ ಮೂಲಕ ಕೆಡಹುವ ಕೆಲಸವು ಬುಧವಾರ ಆರಂಭಗೊಂಡಿತ್ತು.

ಗುರುವಾರ ಬೆಳಗ್ಗೆ ಮತ್ತೆ ಜೆಸಿಬಿ ಮೂಲಕ ಮನೆ ಕೆಡಹುವ ಕೆಲಸ ಆರಂಭವಾಗಿದೆ. ಈ ಸಂದರ್ಭ ಜೇಮ್ಸ್ ಜತ್ತನ್ನ ಕೂಡ ಅಲ್ಲೇ ಇದ್ದು ಕೆಲಸ ಕಾರ್ಯ ವೀಕ್ಷಿಸುತ್ತಿದ್ದರು. ಪಕ್ಕದ ಮನೆಯ ಸೋದರ ಸಂಬಂಧಿ ಅಡ್ವಿನ್ ಮಾಬೆನ್ ಕೂಡಾ ಅಲ್ಲಿಗೆ ಬಂದಿದ್ದರು.

ಜೇಮ್ಸ್ ಜತ್ತನ್ನ ಪಕ್ಕದ ಇನ್ನೊಂದು ಮನೆಯ ಜಗುಲಿಯಲ್ಲಿದ್ದು, ಅಡ್ವಿನ್ ಮಾಬೆನ್ ಕರೆದರೆಂದು ಅಲ್ಲಿಗೆ ತೆರಳಿ ಮಾತುಕತೆ ನಡೆಸುತ್ತಿದ್ದಾಗ ಹಠಾತ್ತನೆ ಕೆಡಹುತ್ತಿದ್ದ ಮನೆಯ ಗೋಡೆ ಸಮೇತ ಲಿಂಟಲ್‌ನ ಬೀಮ್ ಇಬ್ಬರ ಮೇಲೂ ಉರುಳಿಬಿತ್ತು ಎನ್ನಲಾಗಿದೆ. ಇದರಿಂದ ಇಬ್ಬರೂ ಅದರಡಿಗೆ ಸಿಲುಕಿ ಸ್ಥಳದಲ್ಲೇ ಕೊನೆಯುಸಿರೆಳೆದಿರುವುದಾಗಿ ಪ್ರಕರಣ ದಾಖಲಿಸಿಕೊಂಡಿರುವ ಕದ್ರಿ ಪೊಲೀಸರು ಮಾಹಿತಿ ನೀಡಿದ್ದಾರೆ.

ಜೇಮ್ಸ್ ಜತ್ತನ್ನ ಬಹರೈನ್‌ನಲ್ಲಿ ಉದ್ಯೋಗದಲ್ಲಿದ್ದಾರೆ. ಅವರ ಪತ್ನಿ ಮತ್ತು ಪುತ್ರಿ ನಗರದ ಬಲ್ಮಠ ಸಮೀಪದ ಫ್ಲಾಟ್‌ನಲ್ಲಿ ವಾಸವಾಗಿದ್ದರು. ಪೂರ್ವಜರ ಕಾಲದ ಮನೆ ತೀರಾ ಹಳೆಯದಾಗಿ ಶಿಥಿಲಗೊಂಡಿದ್ದರಿಂದ ಅದನ್ನು ಕೆಡವಿ ಹೊಸ ಮನೆ ಕಟ್ಟಲು ನಿರ್ಧರಿಸಿದ್ದರು. ಹಾಗಾಗಿ ಬಹರೈನ್‌ನಲ್ಲಿದ್ದ ಜೇಮ್ಸ್ ಜತ್ತನ್ನ ರಜೆ ಹಾಕಿ ಊರಿಗೆ ಮರಳಿದ್ದರು. ಅವರ ಕುಟುಂಬ ಹೊಸ ಮನೆಯ ಕನಸು ಕಾಣುತ್ತಿದ್ದಾಗಲೇ ನಡೆದ ಈ ದುರ್ಘಟನೆಯಿಂದ ಜೇಮ್ಸ್ ಜತ್ತನ್ನರ ಕುಟುಂಬಕ್ಕೆ ಆಘಾತವಾಗಿದೆ.

ಅಡ್ವಿನ್ ಹೆರಾಲ್ಡ್ ಮಾಬೆನ್ ತಮ್ಮ ಸಂಬಂಧಿಕರೊಂದಿಗೆ ವಾಸವಾಗಿದ್ದರು ಎಂದು ತಿಳಿದುಬಂದಿದೆ.

ಮನೆಯನ್ನು ಕೆಡಹುವಾಗ ಅವಘಡ ಸಂಭವಿಸದಿರಲೆಂಬ ಮುನ್ನೆಚ್ಚರಿಕೆಯಿಂದ ಜೆಸಿಬಿ ಆಪರೇಟರ್, ಸ್ಥಳದಲ್ಲಿ ನಿಲ್ಲದಂತೆ ಜೇಮ್ಸ್ ಜತ್ತನ್ನ ಅವರಿಗೆ ಸೂಚಿಸಿದ್ದರು. ಆದರೆ ಜೇಮ್ಸ್ ಜತ್ತನ್ನ ಆ ಕಡೆ ತೆರಳಿದ ವೇಳೆಯೇ ಬೀಮ್ ಕುಸಿದು ಬಿದ್ದ ಪರಿಣಾಮ ಪ್ರಾಣ ಕಳಕೊಂಡಿದ್ದಾರೆ.

ಗುರುವಾರ ಬೆಳಗ್ಗೆ ಸುಮಾರು 10:45ಕ್ಕೆ ಈ ಘಟನೆ ಸಂಭವಿಸಿದೆ. ಆದರೆ ಮಧ್ಯಾಹ್ನದವರೆಗೆ ಪ್ರಕರಣ ಬೆಳಕಿಗೆ ಬಂದಿರಲಿಲ್ಲ.

(ಜೇಮ್ಸ್ ಜತ್ತನ್ನ ಮತ್ತು ಅಡ್ವಿನ್ ಜೆರಾಲ್ಡ್ ಮೊಬಿನ್)

 







 


 


 


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News