×
Ad

ಮಂಗಳೂರು: ಗುರುವಾರ ನೀರು ಪೂರೈಕೆ ಯಥಾಸ್ಥಿತಿ; ಮನಪಾ ಆಯುಕ್ತ

Update: 2025-11-19 20:13 IST

ಮಂಗಳೂರು: ತುಂಬೆಯಿಂದ ಮಂಗಳೂರಿಗೆ ನೀರು ಸರಬರಾಜು ಮಾಡುವ ಮುಖ್ಯ ಕೊಳವೆಯಲ್ಲಿ ಉಂಟಾಗಿರುವ ಹಾನಿಯ ದುರಸ್ತಿ ಕಾರ್ಯ ಬುಧವಾರ ಸಂಜೆ ಪೂರ್ಣಗೊಂಡಿದ್ದು, ಗುರುವಾರ ನೀರು ಪೂರೈಕೆ ಯಥಾಸ್ಥಿತಿಗೆ ಮರಳಲಿದೆ ಎಂದು ಮನಪಾ ಆಯುಕ್ತರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಮುಖ್ಯ ಕೊಳವೆಯಲ್ಲಿ ಹಾನಿಯಾದ ಪರಿಣಾಮ ಸೋಮವಾರ, ಮಂಗಳವಾರ, ಬುಧವಾರ ನಗರದ ಮಂಗಳಾದೇವಿ, ಶಕ್ತಿನಗರ, ಬೆಂದೂರ್, ಪಾಂಡೇಶ್ವರ, ಜಪ್ಪಿನಮೊಗರು ಸಹಿತ ಅನೇಕ ಕಡೆಗಳಿಗೆ ನೀರು ಸರಬರಾಜು ಇರಲಿಲ್ಲ. ಹಾಗಾಗಿ ಜನರು ನೀರಿಲ್ಲದೆ ಪರದಾಡಿದರು. ಹಲವರು ಟ್ಯಾಂಕರ್ ಮೂಲಕ ನೀರು ತರಿಸುತ್ತಿರುವುದು ಕಂಡು ಬಂತು.

ನೀರು ಸರಬರಾಜು ವ್ಯವಸ್ಥೆಯ ತುಂಬೆ (80 MLD) ರೇಚಕ ಸ್ಥಾವರದಿಂದ ನಗರಕ್ಕೆ ನೀರು ಪೂರೈಸುವ 1100 ಮಿ.ಮೀ. ವ್ಯಾಸದ ಮುಖ್ಯ ಕೊಳವೆಯ ತುರ್ತು ದುರಸ್ತಿ ಕಾರ್ಯಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಬುಧವಾರ ಸಂಜೆ ದುರಸ್ತಿ ಕಾರ್ಯ ಪೂರ್ಣಗೊಳಿಸಿದ್ದು ಗುರುವಾರ ಬೆಳಗ್ಗೆ ನೀರು ಸರಬರಾಜು ಯಥಾಸ್ಥಿತಿಗೆ ಮರಳಲಿದೆ ಎಂದು ಮನಪಾ ಆಯುಕ್ತರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ನಗರಕ್ಕೆ ಪೂರೈಕೆಯಾಗುವ ಕುಡಿಯುವ ನೀರಿನ ಕೊಳವೆ ಒಡೆದು ಎರಡ್ಮೂರು ದಿನಗಳು ಕಳೆದಿದ್ದರೂ ದುರಸ್ತಿ ಕಾರ್ಯ ಪೂರ್ಣಗೊಳಿಸದ ಬಗ್ಗೆ ಶಾಸಕರಾದ ವೇದವ್ಯಾಸ ಕಾಮತ್ ಹಾಗೂ ಭರತ್ ಶೆಟ್ಟಿ ಸ್ಥಳಕ್ಕೆ ಭೇಟಿ ನೀಡಿ ಪಾಲಿಕೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿರುವುದಾಗಿ ವರದಿಯಾಗಿದೆ.

ಕೇವಲ ಒಂದು ದಿನದೊಳಗೆ ದುರಸ್ತಿಗೊಳಿಸಬಹುದಾದ ಕಾರ್ಯವು ಪಾಲಿಕೆಯ ನಿರ್ಲಕ್ಷ್ಯದಿಂದಾಗಿ ಮೂರು ದಿನ ಕಳೆದರೂ ಪೂರ್ಣಗೊಂಡಿಲ್ಲ. ನಗರದಲ್ಲಿ ವಾಸಿಸುತ್ತಿರುವ ಲಕ್ಷಾಂತರ ಜನರಿಗೆ ನೀರಿಲ್ಲದೆ ಬೇಸಿಗೆಯ ವಾತಾವರಣ ನಿರ್ಮಾಣವಾಗಿದೆ. ನೀರಿನ ಸಮಸ್ಯೆ ಬಿಗಡಾಯಿಸಿದ್ದರೂ ಅಧಿಕಾರಿಗಳು ಟ್ಯಾಂಕರ್ ಮೂಲಕ ನೀರು ಪೂರೈಕೆಗೆ ಕ್ರಮ ಕೈಗೊಳ್ಳದಿರುವುದು ಅಕ್ಷಮ್ಯ. ಲೋಡ್ ಶೆಡ್ಡಿಂಗ್‌ನಿಂದ ನೀರಿನ ಒತ್ತಡ ಕಡಿಮೆಯಾಗುವ ಕಾರಣ ಹಲವು ಮನೆಗಳಿಗೆ ನೀರು ತಲುಪುತ್ತಿಲ್ಲ ಎಂದು ಶಾಸಕರು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News