×
Ad

ಆಡಿಯೊ ವೈರಲ್ ಪ್ರಕರಣ | ಝಮೀರ್ ಅಹ್ಮದ್ ವಿರುದ್ಧ ಷಡ್ಯಂತ್ರ : ಸಿರಾಜ್ ಅಹ್ಮದ್

Update: 2026-06-01 23:19 IST

ದಾವಣಗೆರೆ : ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಸೋಲಿಸಬೇಕೆಂಬ ಸಂಭಾಷಣೆಯ ಆಡಿಯೊ ಮಾಧ್ಯಮಗಳು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಇದು ಸತ್ಯಕ್ಕೆ ದೂರವಾಗಿದೆ ಎಂದು ಬಿ.ಝಡ್. ಝಮೀರ್ ಅಹ್ಮದ್ ಖಾನ್ ಅವರೊಂದಿಗೆ ಆಡಿಯೊದಲ್ಲಿ ಮಾತನಾಡಿದ್ದಾರೆ ಎನ್ನಲಾದ ಕಾಂಗ್ರೆಸ್ ಮುಖಂಡ ಹಾಗೂ ಜಿಲ್ಲಾ ವಕ್ಫ್ ಮಂಡಳಿ ಮಾಜಿ ಅಧ್ಯಕ್ಷ ಸಿರಾಜ್ ಅಹ್ಮದ್ ಸ್ಪಷ್ಟಪಡಿಸಿದ್ದಾರೆ.

ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಮತ್ತು ಝಮೀರ್ ಅಹ್ಮದ್ ಅವರು ಫೋನ್ ಮುಖಾಂತರ ಆ ತರಹದ ಯಾವುದೇ ಮಾತುಕತೆ ನಡೆಸಿಲ್ಲ. ಝಮೀರ್ ಅವರು ಯಾವಾಗಲೂ ಪಕ್ಷದ ಗೆಲುವಿನ ಬಗ್ಗೆಯೇ ಮಾತನಾಡಿದ್ದರು ಎಂದು ತಿಳಿಸಿದರು.

ಇದು ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಹೊಸ ಸರಕಾರ ರಚನೆ ಆಗುತ್ತಿರುವ ಸಂದರ್ಭದಲ್ಲಿ ಝಮೀರ್ ಅಹ್ಮದ್ ಖಾನ್ ಅವರಿಗೆ ದೊಡ್ಡ ಮಟ್ಟದಲ್ಲಿ ಹಿನ್ನಡೆ ಉಂಟು ಮಾಡಲು ಮತ್ತು ಅವರಿಗೆ ಸೂಕ್ತ ಸ್ಥಾನ ಸಿಗಬಾರದು ಎಂದು ರೂಪಿಸಲಾಗಿರುವ ಸ್ಪಷ್ಟ ಷಡ್ಯಂತ್ರವಾಗಿದೆ. ಹಿಂದೆ ನಸೀರ್ ಅಹ್ಮದ್ ಹಾಗೂ ವಿಧಾನ ಪರಿಷತ್ ಸದಸ್ಯ ಅಬ್ದುಲ್ ಜಬ್ಬಾರ್ ಸಾಹೇಬರ ವಿಷಯದಲ್ಲೂ ಇದೇ ರೀತಿ ಮಾಡಲಾಗಿತ್ತು ಎಂದು ಆರೋಪಿಸಿದರು.

ಆಡಿಯೊ ಎಡಿಟ್ ಮಾಡಲಾಗಿದೆ?: ಈ ಆಡಿಯೊವನ್ನು ಶೇ.100 ಎಡಿಟ್ ಮಾಡಿ ಸೃಷ್ಟಿಸಲಾಗಿದೆ. ಇದನ್ನು ಯಾರು ಮಾಡಿದ್ದಾರೆ? ಮತ್ತು ಎಲ್ಲಿಂದ ಇದು ಹರಿದಾಡಿದೆ ಎಂಬುದನ್ನು ಪತ್ತೆ ಹಚ್ಚಬೇಕಿದೆ ಎಂದು ಹೇಳಿದರು.

ಶ್ರೀನಿವಾಸ್ ದಾಸಕರಿಯಪ್ಪ ಜೊತೆ ಮಾತುಕತೆ ನಡೆಸಿಲ್ಲ: ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ ಶ್ರೀನಿವಾಸ್ ದಾಸಕಯರಿಪ್ಪ ಅವರು ತಮಗೆ ಆಪ್ತರಾಗಿದ್ದರೂ, ಮತದಾನ ದಿನ ಬೂತ್‌ನಲ್ಲಿ ಭೇಟಿಯಾಗಿದ್ದು ಬಿಟ್ಟರೆ, ಈವರೆಗೂ ಅವರ ಜೊತೆ ಯಾವುದೇ ಫೋನ್ ಸಂಭಾಷಣೆ ನಡೆಸಿಲ್ಲ ಎಂದರು.

ಬಕ್ರೀದ್ ದಿನ ಝಮೀರ್ ಅಹ್ಮದ್ ಅವರಿಗೆ ಶುಭ ಹಾರೈಸಿದ್ದು ಬಿಟ್ಟರೆ, ಕಳೆದ ಒಂದು ತಿಂಗಳಿನಿಂದ ಅವರೊಂದಿಗೆ ಯಾವುದೇ ಸಂಪರ್ಕ ಅಥವಾ ಮಾತುಕತೆ ನಡೆದಿಲ್ಲ. ಆಡಿಯೊ ವೈರಲ್ ಆಗಿರುವುದು ಮತ್ತು ನಮ್ಮ ವಿರುದ್ಧ ಷಡ್ಯಂತ್ರ ನಡೆಸಿರುವವರ ವಿರುದ್ಧ ಕಾನೂನು ಹೋರಾಟ ನಡೆಸಲಾಗುವುದು. ಈ ಕುರಿತು ಕಾನೂನು ತಜ್ಞರೊಂದಿಗೆ ಚರ್ಚಿಸಿ, ಮುಂದಿನ ಕ್ರಮ ಕೈಗೊಳ್ಳುವುದಾಗಿ ಸಿರಾಜ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News