ಮೊದಲ ಬಾರಿಗೆ ಶಾಸಕ, ಪೌರಕಾರ್ಮಿಕ ದಂಪತಿಯ ಮಗನಿಗೆ ಮಂತ್ರಿ ಪಟ್ಟ: ಕೆ.ಎಸ್.ಬಸವಂತಪ್ಪಗೆ ಒಲಿದ ಸಚಿವ ಗಿರಿ
ದಾವಣಗೆರೆ : ‘ಆಂಬ್ಯುಲೆನ್ಸ್ ಬಸವಂತಪ್ಪ’ ಎಂಬ ಜನಪ್ರಿಯತೆ ಪಡೆದಿದ್ದ ಮಾಯಕೊಂಡ ವಿಧಾನಸಭಾ ಕ್ಷೇತ್ರದ ಶಾಸಕ ಕೆ.ಎಸ್.ಬಸವಂತಪ್ಪ ಅವರಿಗೆ ಈಗ ಸಚಿವ ಸ್ಥಾನ ಲಭಿಸಿದೆ.
ದಾವಣಗೆರೆ ಜಿಲ್ಲೆಯ ಮಾಯಕೊಂಡ ಕ್ಷೇತ್ರದ ಕಾಂಗ್ರೆಸ್ ಶಾಸಕ ಬಸವಂತಪ್ಪ ಇದೇ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾದ ಬಳಿಕ ಸಚಿವರಾಗುತ್ತಿರುವುದು ವಿಶೇಷ.
ಶಾಸಕ ಕೆ.ಎಸ್.ಬಸವಂತಪ್ಪನವರ ತಂದೆ-ತಾಯಿ ಆಸ್ಪತ್ರೆಯಲ್ಲಿ ಪೌರಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು. ಮನೆಯ ಆರ್ಥಿಕ ಪರಿಸ್ಥಿತಿ ಕಾರಣದಿಂದಾಗಿ ಪಿಯುಸಿಯಲ್ಲೇ ವಿದ್ಯಾಭ್ಯಾಸ ಮುಗಿಸಿರುವ ಅವರು, ಜೀವನ ನಡೆಸಲು ಎಪಿಎಂಸಿ ಸೇರಿದಂತೆ ಹಲವು ಕಡೆ ಕೆಲಸ ಮಾಡಿದ್ದಾರೆ. ಅಲ್ಲದೇ ಸುಮಾರು 20 ವರ್ಷಗಳ ಕಾಲ ಕಾಂಗ್ರೆಸ್ ಪಕ್ಷದ ಸಾಮಾನ್ಯ ಕಾರ್ಯಕರ್ತರಾಗಿ ಸೇವೆ ಸಲ್ಲಿಸಿದ್ದಾರೆ.
ದಾವಣಗೆರೆ ತಾಲೂಕಿನ ಅನಗೋಡು ಕ್ಷೇತ್ರದಿಂದ ಜಿಲ್ಲಾ ಪಂಚಾಯಿತಿ ಸದಸ್ಯರಾಗಿ ಆಯ್ಕೆಯಾಗುವ ಮೂಲಕ ರಾಜಕೀಯದಲ್ಲಿ ತಮ್ಮ ಹೆಜ್ಜೆ ಗುರುತು ಮೂಡಿಸಿದರು.
ಪ್ರತಿದಿನ ಕ್ಷೇತ್ರದ ಒಂದೆರಡು ಹಳ್ಳಿಗಳಿಗೆ ಭೇಟಿ ನೀಡಿ ಜನರ ಯೋಗಕ್ಷೇಮ ವಿಚಾರಿಸುವುದು ಅವರ ದಿನಚರಿಯಾಗಿತ್ತು. ಇಡೀ ಕ್ಷೇತ್ರವನ್ನು ಸುತ್ತಾಡುತ್ತಾ ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಾರೆ ಎಂಬುದು ಕ್ಷೇತ್ರದ ಜನರ ಮಾತಾಗಿದೆ.