ದಾವಣಗೆರೆ: ಅಪಘಾತಕ್ಕೀಡಾಗಿ ಗಾಯಗೊಂಡು ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಬಿದ್ದಿದ್ದ ಚಿರತೆಯನ್ನು ರಕ್ಷಿಸಲು ಮುಂದಾದ ಅರಣ್ಯ ಇಲಾಖೆ ಸಿಬ್ಬಂದಿ ಮೇಲೆಯೇ ಚಿರತೆ ಎರಗಿದ ಘಟನೆ ತಾಲೂಕಿನ ಆನಗೋಡು ಹೊರವಲಯದ ಕೊಕ್ಕನೂರು ಬಳಿಯ ರಾಷ್ಟ್ರೀಯ ಹೆದ್ದಾರಿ-48ರಲ್ಲಿ ಮಂಗಳವಾರ ನಡೆದಿದೆ.

ಚಿರತೆ ರಾಷ್ಟ್ರೀಯ ಹೆದ್ದಾರಿ-48ನ್ನು ದಾಟುತ್ತಿದ್ದ ಸಂದರ್ಭದಲ್ಲಿ ಅಪರಿಚಿತ ವಾಹನವೊಂದು ಢಿಕ್ಕಿ ಹೊಡೆದಿರುವ ಶಂಕೆ ವ್ಯಕ್ತವಾಗಿದೆ. ಢಿಕ್ಕಿಯ ರಭಸಕ್ಕೆ ಗಾಯಗೊಂಡ ಚಿರತೆ ರಸ್ತೆಯ ಬದಿಯಲ್ಲಿ ಬಿದ್ದಿದ್ದು, ಇದನ್ನು ಗಮನಿಸಿದ ಸಾರ್ವಜನಿಕರು ಕೂಡಲೇ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.

ಮಾಹಿತಿ ತಿಳಿದು ಸ್ಥಳಕ್ಕೆ ಧಾವಿಸಿದ ಅರಣ್ಯ ಇಲಾಖೆ ಸಿಬ್ಬಂದಿ ಗಾಯಗೊಂಡ ಚಿರತೆಯನ್ನು ಸುರಕ್ಷಿತವಾಗಿ ರಕ್ಷಿಸಲು ಮುಂದಾಗಿದ್ದಾರೆ. ಈ ವೇಳೆ ನೋವು ಹಾಗೂ ಭಯದಿಂದ ಆಕ್ರೋಶಗೊಂಡಿದ್ದ ಚಿರತೆ ಏಕಾಏಕಿ ಸಿಬ್ಬಂದಿಯೊಬ್ಬರ ಮೇಲೆ ಎರಗಲು ಮುಂದಾಗಿದೆ. ಚಿರತೆಯ ದಾಳಿಯಿಂದ ತಪ್ಪಿಸಿಕೊಳ್ಳಲು ಸಿಬ್ಬಂದಿ ಹರಸಾಹಸಪಟ್ಟಿದ್ದು, ಕೂದಲೆಳೆ ಅಂತರದಲ್ಲಿ ಅಪಾಯದಿಂದ ಪಾರಾಗಿದ್ದಾರೆ.

ಚಿರತೆ ನೋಡಲು ಜನಜಂಗುಳಿ:

ಅಪಘಾತಕ್ಕೀಡಾದ ಚಿರತೆ ಹೆದ್ದಾರಿ ಬದಿಯಲ್ಲಿ ಬಿದ್ದಿರುವ ಸುದ್ದಿ ಹರಡುತ್ತಿದ್ದಂತೆ ಸ್ಥಳದಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದಾರೆ. ಚಿರತೆ ನೋಡಲು ಜನರು ಹೆದ್ದಾರಿ ಬದಿಯಲ್ಲಿ ಗುಂಪುಗೂಡಿದ್ದರಿಂದ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಜನರು ಚಿರತೆಯ ಸಮೀಪ ಹೋಗದಂತೆ ಅರಣ್ಯ ಇಲಾಖೆ ಸಿಬ್ಬಂದಿ ಎಚ್ಚರಿಕೆ ನೀಡಿದರು.


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor