ದಾವಣಗೆರೆ : ಗುಟ್ಕಾ-ಪಾನ್ ಮಸಾಲ ನಿಷೇಧ ಹಾಗೂ ಭದ್ರಾ ಡ್ಯಾಂನಿಂದ ಭದ್ರಾ ಮೇಲ್ದಂಡೆಗೆ ಪ್ರಾಯೋಗಿಕವಾಗಿ 3 ಟಿಎಂಸಿ ನೀರು ಬಿಡುಗಡೆ ಆದೇಶ ವಿರೋಧಿಸಿ ಬಿಜೆಪಿ ಹಾಗೂ ಅಡಿಕೆ ಬೆಳೆಗಾರರ ಒಕ್ಕೂಟ ಮಂಗಳವಾರ ಕರೆ ನೀಡಿದ್ದ ದಾವಣಗೆರೆ ಬಂದ್‌ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು.

ನಗರದ ವಿದ್ಯಾರ್ಥಿ ಭವನ, ಶಾಬನೂರು ರಸ್ತೆ, ಕಿತ್ತೂರು ಚನ್ನಮ್ಮ ವೃತ್ತ, ರೇಣುಕಾ ಮಂದಿರ, ಈರುಳ್ಳಿ ಮಾರುಕಟ್ಟೆ ವೃತ್ತ, ಹರಳೆಣ್ಣೆ ಕೊಟ್ರಬಸಪ್ಪವೃತ್ತ, ಜಯದೇವ ವೃತ್ತ ಸೇರಿದಂತೆ ಪ್ರಮುಖ ವೃತ್ತ, ರಸ್ತೆಗಳಲ್ಲಿ ಪ್ರತಿಭಟನಾಕಾರರು ನಸುಕಿನಿಂದಲೇ  ಟಯರ್‌ಗಳನ್ನು ಸುಟ್ಟು ಹಾಕುವ ಮೂಲಕ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ, ಲೋಕಿಕೆರೆ ನಾಗರಾಜ, ಬಿ.ಜಿ.ಅಜಯಕುಮಾರ, ಎಂ.ಬಸವರಾಜ ನಾಯ್ಕ, ಬಿ.ಎಸ್.ಜಗದೀಶ, ಮೆಳ್ಳೆಕಟ್ಟೆ ಎ.ಇ.ನಾಗರಾಜ, ಚಂದ್ರಶೇಖರ ಪೂಜಾರ ಇತರರ ನೇತೃತ್ವದಲ್ಲಿ ಕರೆ ನೀಡಿದ್ದ ದಾವಣಗೆರೆ ನಗರ ಬಂದ್ ಹಿನ್ನೆಲೆಯಲ್ಲಿ ವಿವಿಧೆಡೆ ರಸ್ತೆ ತಡೆ ನಡೆಸುವ ಮೂಲಕ ರಾಜ್ಯ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುವ ಮೂಲಕ ಘೋಷಣೆ ಕೂಗಲಾಯಿತು. ಜಿಲ್ಲಾ ಕೇಂದ್ರದ ಬಹುತೇಕ ಕಡೆ ಪೊಲೀಸರು ಹಾಗೂ ಪ್ರತಿಭಟನಾಕಾರರ ಮಧ್ಯೆ ಮಾತಿನ ಚಕಮಕಿಯೂ ನಡೆಯಿತು.

ಬಂದ್ ಹಿನ್ನೆಲೆಯಲ್ಲಿ ನಗರದ ಮಾರುಕಟ್ಟೆ ಪ್ರದೇಶ, ಅಶೋಕ ರಸ್ತೆ, ಕುವೆಂಪು ರಸ್ತೆ, ಹದಡಿ ರಸ್ತೆ, ನಿಟುವಳ್ಳಿ ರಸ್ತೆ, ಹಳೆ ಪಿಬಿ ರಸ್ತೆ, ಕೆಆರ್ ಮಾರುಕಟ್ಟೆ, ಕಾಳಿಕಾದೇವಿ ರಸ್ತೆ, ಮಂಡಿಪೇಟೆ, ಚಾಮರಾಜಪೇಟೆ, ಚೌಕಿಪೇಟೆ, ಕಾಯಿಪೇಟೆ ಸೇರಿದಂತೆ ವಿವಿಧೆಡೆ ಬೆಳಗ್ಗೆಯಿಂದಲೇ ಅಂಗಡಿ ಮುಂಗಟ್ಟುಗಳು ಬಂದ್ ಆಗಿದ್ದವು. ಆಟೊ ರಿಕ್ಷಾಗಳು, ಸರಕು ಸಾಗಾಟ, ವಾಹನಗಳು, ನಗರ ಸಾರಿಗೆ ಬಸ್‌ಗಳು, ಕೆಎಸ್ಸಾರ್ಟಿಸಿ, ಖಾಸಗಿ ಬಸ್‌ಗಳು, ಗ್ರಾಮೀಣ ಬಸ್‌ಗಳು ಅಲ್ಲಲ್ಲಿ ಸಂಚರಿಸುತ್ತಿದ್ದುದು ಸಾಮಾನ್ಯವಾಗಿತ್ತು.

ಕೆಎಸ್ಸಾರ್ಟಿಸಿ ಬಸ್ ನಿಲ್ದಾಣಕ್ಕೆ ನುಗ್ಗಿದ ಪ್ರತಿಭಟನಾಕಾರರು ಬಸ್‌ಗಳು ನಗರ ಪ್ರವೇಶಕ್ಕೆ, ನಿಲ್ದಾಣದಿಂದ ಹೊರಕ್ಕೆ ಹೋಗದಂತೆ ತಡೆಯಲು ಯತ್ನಿಸಿದರು. ಬಸ್ ನಿಲ್ದಾಣದೊಳಗಿದ್ದ ಬೇಕರಿ, ಹೋಟೆಲ್‌ಗಳನ್ನು ಬಂದ್ ಮಾಡುವಂತೆ ಆಗ್ರಹಿಸಿದರು. ಪ್ರಮುಖ ರಸ್ತೆಯ ಬಹುತೇಕ ಎಲ್ಲ ಹೋಟೆಲ್, ಅಂಗಡಿ ಮುಗ್ಗಟ್ಟುಗಳು ಮಧ್ಯಾಹ್ನದವರೆಗೂ ಬಂದ್ ಆಗಿದ್ದವು. ರೇಣುಕಾಚಾರ್ಯ ಸೇರಿದಂತೆ ಸುಮಾರು 50ಕ್ಕೂ ಹೆಚ್ಚು ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದ ನಂತರ ಎಂದಿನಂತೆ ಅಂಗಡಿ ಮುಂಗಟ್ಟು ತೆರೆದು, ವ್ಯಾಪಾರ ವಹಿವಾಟನ್ನು ವ್ಯಾಪಾರಸ್ಥರು ಮುಂದುವರಿಸಿದರು. ವಶಕ್ಕೆ ಪಡೆದಿದ್ದ ಮುಖಂಡರನ್ನು ಪೊಲೀಸ್ ಕವಾಯಿತು ಮೈದಾನಕ್ಕೆ ಕರೆದೊಯ್ದು, ಮಧ್ಯಾಹ್ನದ ನಂತರ ಬಿಡುಗಡೆ ಮಾಡಿದರು.

ದಾವಣಗೆರೆ ಬಂದ್ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್ ಇಲಾಖೆಯಿಂದ ವ್ಯಾಪಕ ಬಂದೋಬಸ್ತ್ ಕಲ್ಪಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor