×
Ad

ಶಾಲಾ ಹಂತದಲ್ಲೇ ಮಕ್ಕಳಲ್ಲಿ ಸಾಹಿತ್ಯದ ಅಭಿರುಚಿ ಬೆಳೆಸಬೇಕು : ಶಾಸಕ ಬಸವಂತಪ್ಪ

ದಾವಣಗೆರೆ ತಾಲೂಕು 12ನೇ ಕನ್ನಡ ಸಾಹಿತ್ಯ ಸಮ್ಮೇಳನ

Update: 2026-01-19 00:11 IST

ದಾವಣಗೆರೆ : ಈಗಿನ ಮಕ್ಕಳು ಹೆಚ್ಚು ಪ್ರಜ್ಞಾವಂತರಾಗುತ್ತಿದ್ದಾರೆ. ಶಾಲಾ-ಕಾಲೇಜುಗಳಲ್ಲಿ ವಿಭಿನ್ನ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಮಕ್ಕಳಿಗೆ ಬೇಕಾಗಿರುವ ಸಂಸ್ಕೃತಿ, ಸಂಸ್ಕಾರಗಳನ್ನು ಒಳಗೊಂಡಿರುವ ಸಾಹಿತ್ಯವನ್ನು ನೀಡಬೇಕು ಎಂದು ಮಾಯಕೊಂಡ ಶಾಸಕ ಕೆ.ಎಸ್.ಬಸವಂತಪ್ಪ ಸಲಹೆ ನೀಡಿದ್ದಾರೆ.

ತಾಲೂಕಿನ ಕುರ್ಕಿ-ಹಿರೇತೊಗಲೇರಿಯಲ್ಲಿ ರವಿವಾರ ಕನ್ನಡ ಸಾಹಿತ್ಯ ಪರಿಷತ್ತು ದಾವಣಗೆರೆ ಜಿಲ್ಲಾ ಘಟಕದ ವತಿಯಿಂದ ಆಯೋಜಿಸಿದ್ದ ದಾವಣಗೆರೆ ತಾಲೂಕು 12ನೆಯ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.

ಪೋಷಕರು ಮಕ್ಕಳಿಗೆ ಪ್ರೀತಿ, ವಿಶ್ವಾಸ ತೋರಿಸಬೇಕು. ಸಾಹಿತ್ಯದ ಬಗ್ಗೆ ಅಭಿರುಚಿ ಬೆಳೆಸಿ, ಆತ್ಮವಿಶ್ವಾಸ ತುಂಬಬೇಕು. ಮೂಢನಂಬಿಕೆ ಹೋಗಲಾಡಿಸಿ, ವೈಚಾರಿಕತೆ ಬೆಳೆಸಬೇಕು. ಉತ್ತಮ ಮೌಲ್ಯಗಳನ್ನು ಕಲಿಸಿ, ಪ್ರೋತ್ಸಾಹಿಸಬೇಕು. ಈ ನಿಟ್ಟಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಕೂಡ ಹೆಚ್ಚು ಹೆಚ್ಚು ಕಾರ್ಯ ಚಟುವಟಿಕೆಗಳನ್ನು ಶಾಲಾ- ಕಾಲೇಜು ಮಕ್ಕಳಿಗೆ ಹಮ್ಮಿಕೊಂಡು ಮಕ್ಕಳಲ್ಲಿ ಕನ್ನಡ ಸಾಹಿತ್ಯ ಓದುವ ಅಭಿರುಚಿ ಬೆಳೆಸಬೇಕೆಂದರು.

ಗ್ರಾಮೀಣ ಪ್ರದೇಶಗಳಲ್ಲಿ ತಾಲೂಕು ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನಗಳನ್ನು ಆಯೋಜಿಸುವುದು ಅತ್ಯಂತ ಅಗತ್ಯವಿದೆ. ಏಕೆಂದರೆ ಸಮ್ಮೇಳನಗಳು ಗ್ರಾಮೀಣ ಜನರ ಸಾಹಿತ್ಯ, ಸಂಸ್ಕೃತಿ, ಕಲೆಗಳನ್ನು ಪ್ರೋತ್ಸಾಹಿಸುತ್ತವೆ, ಕನ್ನಡ ಭಾಷೆಯ ಪ್ರಚಾರ ಮಾಡುತ್ತವೆ, ಗ್ರಾಮೀಣ ಸಮಸ್ಯೆಗಳನ್ನು ಮುಖ್ಯ ವೇದಿಕೆಗೆ ತರುತ್ತವೆ, ಸ್ಥಳೀಯ ಪ್ರತಿಭೆಗಳಿಗೆ ಅವಕಾಶ ನೀಡುತ್ತವೆ ಮತ್ತು ಸಾಹಿತ್ಯ ಪರಿಷತ್ತನ್ನು ಜನರ ಮನೆ ಬಾಗಿಲಿಗೆ ಕೊಂಡೊಯ್ಯುತ್ತವೆ. ಈ ಸಮ್ಮೇಳನಗಳು ಸ್ಥಳೀಯ ಅಭಿವೃದ್ಧಿ, ಶಿಕ್ಷಣ ಹಾಗೂ ಸಾಂಸ್ಕೃತಿಕ ಪುನರುಜ್ಜೀವನಕ್ಕೆ ಪ್ರಮುಖವಾಗಿವೆ ಎಂದರು.

ಪಟ್ಟಣದ ಸಮ್ಮೇಳನಗಳಿಗೆ ಹೋಗಲು ಕಷ್ಟಪಡುವ ಗ್ರಾಮಸ್ಥರು, ಮಕ್ಕಳನ್ನು ಸಾಹಿತ್ಯ ಮತ್ತು ಸಂಸ್ಕೃತಿ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಳ್ಳಲು ಸಹಕಾರಿ. ಅಲ್ಲದೇ ಸರಕಾರಿ ಶಾಲೆಗಳ ಅಭಿವೃದ್ಧಿ, ಗ್ರಾಮೀಣ ಪ್ರದೇಶಗಳಲ್ಲಿನ ಸಾಹಿತ್ಯ ಅಭಿರುಚಿ, ಸ್ಥಳೀಯ ಸಂಸ್ಕೃತಿಗಳ ರಕ್ಷಣೆ, ಪ್ರವಾಸೋದ್ಯಮ ಅಭಿವೃದ್ಧಿ ಮುಂತಾದ ಗ್ರಾಮೀಣ ಸಮಸ್ಯೆಗಳನ್ನು ಮುಖ್ಯ ವೇದಿಕೆಗೆ ತರಲು ಸಮ್ಮೇಳನಗಳು ವೇದಿಕೆ ಒದಗಿಸುತ್ತವೆ ಎಂದು ಶಾಸಕ ಬಸವಂತಪ್ಪ ತಿಳಿಸಿದರು.

ಸರಕಾರಿ ಶಾಲೆಗಳನ್ನು ಅಭಿವೃದ್ಧಿಗೊಳಿಸುವುದು ನನ್ನ ಮೊದಲ ಆದ್ಯತೆಯಾಗಿದೆ. ನಾಳೆಯಿಂದಲೇ ಶಾಲೆಯ ಅಭಿವೃದ್ಧಿಗೆ ಕ್ರಮ ಜರುಗಿಸುತ್ತೇನೆ. ರೈತರ ಹಿತವನ್ನು ಕಾಪಾಡುತ್ತೇನೆ. ಈಗಾಗಲೇ 70 ಕೋಟಿ ರೂ. ವೆಚ್ಚದಲ್ಲಿ ಭದ್ರಾ ಕಾಲುವೆಗಳ ಆಧುನೀಕರಣ ಕಾರ್ಯ ಪ್ರಾರಂಭಿಸಲಾಗಿದೆ. ಜೊತೆಗೆ 22 ಕೆರೆಗಳ ಏತನೀರಾವರಿ ಯೋಜನೆಯ ಕಾಮಗಾರಿಯನ್ನೂ ಶೀಘ್ರದಲ್ಲಿ ಪ್ರಾರಂಭಿಸುವ ಮೂಲಕ ಕೆರೆಗಳನ್ನು ತುಂಬಿಸುವ ಕೆಲಸ ಮಾಡುತ್ತೇನೆ ಎಂದು ಭರವಸೆ ನೀಡಿದರು.

ಇದೇ ಸಂದರ್ಭ ‘ವಿಜ್ಞಾನಧಾರೆ’, ‘ಸೌರ ಕುಟುಂಬ’, ‘ಅಂತಸಾಕ್ಷಿ’, ‘ಜೀವನಾಡಿ’ ಹಾಗೂ ‘ತಾತನ ಪ್ರತಿಧ್ವನಿಗಳು’ ಕೃತಿಗಳನ್ನು ಗಣ್ಯರು ಲೋಕಾರ್ಪಣೆಗೊಳಿಸಿದರು. ಬಳಿಕ ಕೃತಿಗಳನ್ನು ರಚಿಸಿದ ಸಾಹಿತಿಗಳನ್ನು ಸನ್ಮಾನಿಸಲಾಯಿತು.

ಸಮ್ಮೇಳನದ ಸರ್ವಾಧ್ಯಕ್ಷ ಎಸ್.ಸಿದ್ದೇಶ್ ಕುರ್ಕಿ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭ ದಾವಣಗೆರೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಬಿ. ವಾಮದೇವಪ್ಪ ತೊಗಲೇರಿ, ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷೆ ಸುಮತಿ ಜಯ್ಯಪ್ಪ, ಕುರ್ಕಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಟಿ.ಟಿ.ನಳಿನಾಕ್ಷಿ ವೆಂಕಟೇಶ್, ದೂಡ ಅಧ್ಯಕ್ಷ ದಿನೇಶ್ ಕೆ. ಶೆಟ್ಟಿ, ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಸರ್ವ ಸದಸ್ಯರು, ಪದಾಧಿಕಾರಿಗಳು, ಶಾಲಾ ಮಕ್ಕಳು ಸೇರಿದಂತೆ ಸುತ್ತ ಮುತ್ತಲಿನ ಗ್ರಾಮಸ್ಥರು ಉಪಸ್ಥಿತರಿದ್ದರು.


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News