Davanagere | ಸುಟ್ಟು ಕರಕಲಾದ ಸ್ಥಿತಿಯಲ್ಲಿ ಪಾಲಿಕೆ ಮಾಜಿ ಸದಸ್ಯನ ಮೃತದೇಹ ಪತ್ತೆ : ಆತ್ಮಹತ್ಯೆ ಶಂಕೆ
ದಾವಣಗೆರೆ : ಮಹಾನಗರ ಪಾಲಿಕೆಯ ಮಾಜಿ ಬಿಜೆಪಿ ಸದಸ್ಯರೊಬ್ಬರು ಕಾರಿನಲ್ಲಿ ಸುಟ್ಟು ಕರಕಲಾದ ಸ್ಥಿತಿಯಲ್ಲಿ ತಾಲೂಕಿನ ಬಿಸ್ಲೇರಿ ಗ್ರಾಮದ ಜಮೀನಿನಲ್ಲಿ ರವಿವಾರ ಬೆಳಗ್ಗೆ ಪತ್ತೆಯಾಗಿರುವ ಕುರಿತು ವರದಿಯಾಗಿದೆ.
ಚಂದ್ರಶೇಖರ್ ಸಂಕೋಳ (56) ಮೃತಪಟ್ಟವರು. ಕಾರಿಗೆ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಶಂಕಿಸಲಾಗಿದೆ. ಹದಡಿ ಠಾಣೆಯ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಪಾಲಿಕೆಯ 43ನೇ ವಾರ್ಡ್‌ನ ಸದಸ್ಯ ಚಂದ್ರಶೇಖರ್ ಸಂಕೋಳ ವಿಪರೀತ ಸಾಲ ಮಾಡಿದ ಹಿನ್ನೆಲೆಯಲ್ಲಿ ಕೌಟುಂಬಿಕ ಕಲಹ ನಡೆದಿತ್ತು ಎನ್ನಲಾಗಿದೆ. ಇದರಿಂದ ಮನನೊಂದ ಪುತ್ರ ಹಾಗೂ ಪುತ್ರಿ ಆತ್ಮಹತ್ಯೆಗೆ ಯತ್ನಿಸಿದ್ದರು. ತಂದೆಯ ಜೊತೆಗೆ ಮಕ್ಕಳು ಶನಿವಾರ ಸಂಜೆ ಗಲಾಟೆ ಮಾಡಿದ್ದಾರೆ. ಕರೆ ಮಾಡಿ ಮನೆಗೆ ಬರುವಂತೆ ಪಟ್ಟು ಹಿಡಿದಿದ್ದಾರೆ. ಗಲಾಟೆ ಬಳಿಕ ಮಕ್ಕಳಿಬ್ಬರು ಕೊಠಡಿಗೆ ತೆರಳಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದಾರೆ. ಇದನ್ನು ಗಮನಿಸಿದ ಕುಟುಂಬದ ಸದಸ್ಯರು ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಪುತ್ರಿ ಪರಿಸ್ಥಿತಿ ಗಂಭೀರವಾಗಿದೆ. ವಿಷಯ ತಿಳಿದು ಚಂದ್ರಶೇಖರ್ ಕೂಡ ಆಸ್ಪತ್ರೆಗೆ ಭೇಟಿ ನೀಡಿದ್ದರು. ಆನಂತರ ಜಮೀನಿಗೆ ತೆರಳಿದ್ದರು ಎನ್ನಲಾಗಿದೆ.
ಸ್ಥಳಕ್ಕೆ ಭೇಟಿ ನೀಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಮಾಧ್ಯಮದ ಜೊತೆ ಮಾತನಾಡಿ, ಚಂದ್ರಶೇಖರ್ ಸಂಕೋಳ ಮೃತಪಟ್ಟಿರುವ ಅನುಮಾನದ ಮೇರೆಗೆ ತನಿಖೆ ನಡೆಸಲಾಗುತ್ತಿದೆ. ವಿಧಿವಿಜ್ಞಾನ ಪ್ರಯೋಗಾಲಯದ ಸಿಬ್ಬಂದಿ ಮಾದರಿಗಳನ್ನು ಸಂಗ್ರಹಿಸಿದ್ದು, ಪರೀಕ್ಷೆಯ ಬಳಿಕ ಮೃತರ ಗುರುತು ಪತ್ತೆಯಾಗಲಿದೆ ಎಂದು ಹೇಳಿದರು.