ಶಾಮನೂರು ಶಿವಶಂಕರಪ್ಪ ಅಂತಿಮ ದರ್ಶನ ಪಡೆದ ಗಣ್ಯರು, ಅಭಿಮಾನಿಗಳು
ದಾವಣಗೆರೆ : ಹಿರಿಯ ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಪಾರ್ಥಿವ ಶರೀರವನ್ನು ಪುತ್ರ, ಸಚಿವ ಎಸ್.ಎಸ್ ಮಲ್ಲಿಕಾರ್ಜುನ್ ಅವರ ಮನೆಗೆ ತರಲಾಗಿದ್ದು, ಅಂತಿಮ ದರ್ಶನಕ್ಕಾಗಿ ಕುಟುಂಬಸ್ಥರು, ಗಣ್ಯರು, ವಿವಿಧ ಮಠಾಧೀಶರು ಆಗಮಿಸುತ್ತಿದ್ದಾರೆ.
ಸಚಿವರ ಮನೆಯಲ್ಲಿ ಕುಟುಂಬಸ್ಥರು, ಗಣ್ಯರಿಗೆ ಮಾತ್ರ ಅಂತಿಮ ದರ್ಶನಕ್ಕೆ ಅವಕಾಶ ಮಾಡಿಕೊಟ್ಟಿದ್ದರೂ ಸಾರ್ವಜನಿಕರು, ಅಭಿಮಾನಿಗಳು, ಬಾಪೂಜಿ ವಿದ್ಯಾಸಂಸ್ಥೆಯ ನೌಕರರು, ಸಿಬ್ಬಂದಿ ಸಹಸ್ರಾರು ಸಂಖ್ಯೆಯಲ್ಲಿ ಆಗಮಿಸಿದ್ದಾರೆ.
ಉಜ್ಜಯಿನಿಯ ಶ್ರೀಗಳು, ಸಿದ್ಧಗಂಗೆ ಶ್ರೀ ಗಳು, ಸಾಣೇಹಳ್ಳಿ ಶ್ರೀಗಳು, ಬಿ.ವೈ.ವಿಜಯೇಂದ್ರ, ಬಿ.ವೈ. ರಾಘವೇಂದ್ರ, ಕೆ.ಎಸ್. ನವೀನ್, ಶಿವಮೊಗ್ಗ ಶಾಸಕ ಚನ್ನಬಸಪ್ಪ ಇನ್ನಿತರರು ಅಂತಿಮ ದರ್ಶನ ಪಡೆದರು.
ಶಾಮನೂರು ಶಿವಶಂಕರಪ್ಪ ನಿಧನದ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದ್ದು ವಿಶ್ವವಿದ್ಯಾಲಯದ ಕೆಲ ಪರೀಕ್ಷೆ ಗಳನ್ನೂ ಮುಂದೂಡಲಾಗಿದೆ. ದಾವಣಗೆರೆ ನಗರದಲ್ಲಿ ಕೆಲ ವರ್ತಕರು ಸ್ವಯಂ ಪ್ರೇರಿತರಾಗಿ ಅಂಗಡಿಗಳನ್ನು ಬಂದ್ ಮಾಡಿದ್ದಾರೆ.
ನಗರದ ಹೈಸ್ಕೂಲ್ ಮೈದಾನದಲ್ಲಿ ಮಧ್ಯಾಹ್ನ 12ಗಂಟೆಗೆ ಸಾರ್ವಜನಿಕರ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಬಳಿಕ 3.30ಕ್ಕೆ ಅಲ್ಲಿಂದ ನಗರದ ಪ್ರಮುಖ ಬೀದಿಗಳಲ್ಲಿ ಪಾರ್ಥಿವ ಶರೀರದ ಮೆರವಣಿಗೆ ನಡೆಯಲಿದೆ. ನಗರದ ಕಲ್ಲೇಶ್ವರ ಮಿಲ್ ಬಳಿ ವೀರಶೈವ ಲಿಂಗಾಯತ ವಿಧಿವಿಧಾನದಲ್ಲಿ ಪತ್ನಿ ಪಾರ್ವತಮ್ಮ ಸಮಾಧಿ ಪಕ್ಕದಲ್ಲಿ ಅಂತ್ಯಕ್ರಿಯೆ ನಡೆಯಲಿದೆ.