Davanagere | ಹಿಮೋಫಿಲಿಯಾ ರೋಗಿಗಳ ಆಶಾಕಿರಣ ಡಾ. ಸುರೇಶ್ ಹನಗವಾಡಿ ಅವರಿಗೆ ಪದ್ಮಶ್ರೀ ಪ್ರಶಸ್ತಿ
ದಾವಣಗೆರೆ/ಬೆಂಗಳೂರು: ವೈದ್ಯಕೀಯ ಕ್ಷೇತ್ರದಲ್ಲಿನ ಅಪಾರ ಸೇವೆಗಾಗಿ ಜಿಲ್ಲೆಯ ಖ್ಯಾತ ವೈದ್ಯ ಡಾ. ಸುರೇಶ್ ಹನಗವಾಡಿ ಅವರು ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ದಾವಣಗೆರೆಯ ಹಿಮೋಫಿಲಿಯಾ ಸೊಸೈಟಿಯ ಸಂಸ್ಥಾಪಕರಾದ ಡಾ. ಸುರೇಶ್ ಹನಗವಾಡಿ ಅವರು ಕಳೆದ ಮೂರು ದಶಕಗಳಿಂದ ರಕ್ತ ಹೆಪ್ಪುಗಟ್ಟದ ಕಾಯಿಲೆ (ಹಿಮೋಫಿಲಿಯಾ) ಯಿಂದ ಬಳಲುತ್ತಿರುವ ಬಡ ರೋಗಿಗಳಿಗೆ ನಿಸ್ವಾರ್ಥ ಸೇವೆ ಸಲ್ಲಿಸುತ್ತಿದ್ದಾರೆ.
ಇವರು ಸ್ಥಾಪಿಸಿದ ಚಿಕಿತ್ಸಾ ಕೇಂದ್ರವು ಇಂದು ದಕ್ಷಿಣ ಭಾರತದ ಪ್ರಮುಖ ಕೇಂದ್ರಗಳಲ್ಲಿ ಒಂದಾಗಿದ್ದು, ಸಾವಿರಾರು ಜನರಿಗೆ ಉಚಿತ ಹಾಗೂ ರಿಯಾಯಿತಿ ದರದಲ್ಲಿ ಜೀವ ಉಳಿಸುವ 'ಫ್ಯಾಕ್ಟರ್' ಚಿಕಿತ್ಸೆ ನೀಡಲಾಗುತ್ತಿದೆ.
ವೈದ್ಯಕೀಯ ಸೇವೆಯ ಜೊತೆಗೆ ಸಾಹಿತ್ಯ ಮತ್ತು ಸಂಶೋಧನೆಯಲ್ಲೂ ತೊಡಗಿಸಿಕೊಂಡಿರುವ ಇವರಿಗೆ ಈಗಾಗಲೇ 'ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ' ಸಂದಿದೆ. ಈಗ ಪದ್ಮಶ್ರೀ ಗೌರವದ ಮೂಲಕ ಅವರ ಸೇವೆಗೆ ರಾಷ್ಟ್ರಮಟ್ಟದ ಮನ್ನಣೆ ದೊರೆತಿದೆ.
ದಿವಂಗತ ಲೋಹಿತಮ್ಮ, ದಿವಂಗತ ಸಿ. ಹನುಮಂತಪ್ಪ ಅವರ ಪುತ್ರರಾದ ಡಾ. ಸುರೇಶ್ ಹನಗವಾಡಿ ಅವರು, ಬಳ್ಳಾರಿಯ ಸೇಂಟ್ ಜಾನ್ಸ್ ಶಾಲೆಯಲ್ಲಿ ಎಸ್‌ಎಸ್‌ಎಲ್‌ಸಿ, ವಾರ್ಡ್ಲಾ ಕಾಂಪೋಸಿಟ್ ಜೂನಿಯರ್ ಕಾಲೇಜಿನಲ್ಲಿ ಪಿಯುಸಿ , 1982-88 ದಾವಣಗೆರೆಯಲ್ಲಿ ಜೆಜೆಎಂ ವೈದ್ಯಕೀಯ ಕಾಲೇಜು ಎಂಬಿಬಿಎಸ್. ಹುಬ್ಬಳ್ಳಿಯ ಕರ್ನಾಟಕ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ (1990-1993) ಸ್ನಾತಕೋತ್ತರ (ರೋಗಶಾಸ್ತ್ರ) ಪದವಿ ಪಡೆದಿದ್ದಾರೆ.