ಜಾತ್ಯತೀತ ತತ್ವ, ಸಂವಿಧಾನ ರಕ್ಷಿಸಲು ಭಿನ್ನ ರಾಜಕೀಯ ಸಿದ್ಧಾಂತದವರು ಒಂದಾಗಲಿ : ಬಿ.ಕೆ.ಹರಿಪ್ರಸಾದ್
ಧಾರವಾಡ : ದೇಶದ ಬಹುತ್ವ, ಜಾತ್ಯತೀತ ತತ್ವ ಮತ್ತು ಸಂವಿಧಾನವನ್ನು ರಕ್ಷಿಸಲು ಭಿನ್ನ ರಾಜಕೀಯ ಸಿದ್ಧಾಂತದವರು ಒಂದಾಗಬೇಕು ಎಂದು ಕಾಂಗ್ರೆಸ್ ಹಿರಿಯ ನಾಯಕ, ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಕರೆ ನೀಡಿದರು.
ಧಾರವಾಡದಲ್ಲಿ ನಡೆದ ಪ್ರತಿರೋಧ ಸಮಾವೇಶದಲ್ಲಿ ಮಾತನಾಡಿದ ಅವರು, ಧಾರವಾಡವು ಸಾಹಿತ್ಯ, ಸಂಗೀತ, ಶಿಕ್ಷಣ ಹಾಗೂ ಕನ್ನಡದ ವೈಚಾರಿಕ ಚಳವಳಿಗಳಿಗೆ ದಿಕ್ಸೂಚಿಯಾಗಿರುವ ನೆಲ ಎಂದರು.
ಆರೆಸ್ಸೆಸ್ ಮತ್ತು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಹರಿಪ್ರಸಾದ್, ಸ್ವಾತಂತ್ರ್ಯ ನಂತರ ಭಾರತದಲ್ಲಿ ಗಾಂಧೀಜಿ ಕೊಂದ ನಾಥುರಾಮ್ ಗೋಡ್ಸೆ ಪ್ರಥಮ ಉಗ್ರ, ದೇಶ ಭಕ್ತಿ ಪಾಠ ಹೇಳುವ ಬಿಜೆಪಿ ಮತ್ತು ಆರೆಸ್ಸೆಸ್ ನವರು ಅವನ ಫೋಟೋ ಇಟ್ಟು ಪೂಜಿಸುತ್ತಾರೆ. ಇವರು ದೇಶವನ್ನು ಹಿಂದೂ ರಾಷ್ಟ್ರ ಮಾಡಲು ಹೊರಟಿದ್ದಾರೆ. ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿ ಕಳೆದ ಹಲವು ದಶಕಗಳಿಂದ ಪ್ರಯತ್ನಗಳು ನಡೆಯುತ್ತಿದ್ದವು. 1925ರಿಂದಲೇ ಈ ಪ್ರಯತ್ನ ಮುಂದುವರಿದಿದ್ದು, 2014ರಲ್ಲಿ ಅವರಿಗೆ ರಾಜಕೀಯ ಅವಕಾಶ ದೊರೆತಿದೆ ಎಂದು ಹೇಳಿದರು.
ಗಾಂಧೀಜಿ, ಅಂಬೇಡ್ಕರ್, ನೆಹರೂ, ಸುಭಾಷ್ ಚಂದ್ರ ಬೋಸ್ ಹಾಗೂ ಸರ್ದಾರ್ ಪಟೇಲ್ ಸೇರಿದಂತೆ ಸ್ವಾತಂತ್ರ್ಯ ಹೋರಾಟದ ಪ್ರಮುಖರು ಜಾತ್ಯತೀತ ಮತ್ತು ಬಹುತ್ವದ ಭಾರತವನ್ನು ಪ್ರತಿಪಾದಿಸಿದ್ದರು. ಆ ಆಶಯವನ್ನು ಉಳಿಸುವುದು ಎಲ್ಲರ ಜವಾಬ್ದಾರಿ ಎಂದರು.
ಸಂವಿಧಾನದ ಮೂಲಕ ಬಡವರು, ಹಿಂದುಳಿದವರು, ದಲಿತರು, ಅಲ್ಪಸಂಖ್ಯಾತರು ಹಾಗೂ ಮಹಿಳೆಯರಿಗೆ ಹಕ್ಕುಗಳು ಮತ್ತು ಅವಕಾಶಗಳು ದೊರೆತಿವೆ. ಇದೇ ಕಾರಣಕ್ಕೆ ಸಂವಿಧಾನದ ಆಶಯಗಳ ಮೇಲೆ ದಾಳಿ ನಡೆಯುತ್ತಿದೆ ಎಂದು ಹರಿಪ್ರಸಾದ್ ಆರೋಪಿಸಿದರು.
“ರಾಜಕೀಯ ಭಿನ್ನಾಭಿಪ್ರಾಯಗಳಿದ್ದರೂ ಭಾರತದ ಬಹುತ್ವದ ಆತ್ಮದ ವಿರುದ್ಧ ಯಾರಾದರೂ ನಿಂತರೆ, ಕಮ್ಯುನಿಸ್ಟ್, ಕಾಂಗ್ರೆಸ್ ಸೇರಿದಂತೆ ಎಲ್ಲರೂ ಒಗ್ಗೂಡಿ ಪ್ರತಿರೋಧಿಸಬೇಕು” ಎಂದು ಅವರು ಕರೆ ನೀಡಿದರು.