ಹುಬ್ಬಳ್ಳಿ: ರೈತರ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ಮಂಗಳವಾರ ನಡೆದ ಬೃಹತ್ ಪ್ರತಿಭಟನೆಯಿಂದ ವಾಣಿಜ್ಯ ನಗರಿ ಹುಬ್ಬಳ್ಳಿ ಅಕ್ಷರಶಃ ಸ್ತಬ್ಧಗೊಂಡಿತು. ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ರೈತರು ಚೆನ್ನಮ್ಮ ವೃತ್ತದಲ್ಲಿ ಸಮಾವೇಶಗೊಂಡು ಕೇಂದ್ರ ಸರ್ಕಾರದ ರೈತ ವಿರೋಧಿ ನೀತಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಇಂಚಿಗೇರಿ ಮಠದ ಶಶಿಕಾಂತ ಗುರೂಜಿ ಮಾತನಾಡಿ, ಕಬ್ಬಿಗೆ ಹೊಸ ಎಫ್‌ಆರ್‌ಪಿ ₹5,500 ನಿಗದಿಪಡಿಸುವುದು, ಸಕ್ಕರೆಗೆ ₹60 ಕನಿಷ್ಠ ಬೆಲೆ ಘೋಷಿಸುವುದು, ಸ್ವಾಮಿನಾಥನ್ ವರದಿ ಜಾರಿಗೊಳಿಸುವುದು, ಎಥನಾಲ್ ಖರೀದಿಗೆ ಸೂಕ್ತ ಕ್ರಮ ಕೈಗೊಳ್ಳುವುದು ಹಾಗೂ ಕಳಸಾ-ಬಂಡೂರಿ ಯೋಜನೆ ಜಾರಿಗೊಳಿಸುವುದು ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿದರು.

ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಖುದ್ದಾಗಿ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ರೈತರ ಮನವಿ ಸ್ವೀಕರಿಸಬೇಕು ಎಂದು ಒತ್ತಾಯಿಸಿದರು.

ರೈತ ಮುಖಂಡ ಚೂನಪ್ಪ ಪೂಜೇರಿ ಮಾತನಾಡಿ, ರೈತರ ಬೇಡಿಕೆಗಳ ಕುರಿತು ಸಚಿವ ಸಂಪುಟ ಸಭೆಯಲ್ಲೇ ನಿರ್ಧಾರ ಕೈಗೊಳ್ಳಬೇಕು. ಮಾತುಕತೆಗೆ ಕರೆದರೂ ರೈತರು ಹೋಗುವುದಿಲ್ಲ. ಬೇಡಿಕೆಗಳು ಈಡೇರದಿದ್ದರೆ ಕೇಂದ್ರ ಸಚಿವರ ನಿವಾಸ, ರೈಲು ನಿಲ್ದಾಣ ಹಾಗೂ ರಾಷ್ಟ್ರೀಯ ಹೆದ್ದಾರಿ ತಡೆದು ಹೋರಾಟ ತೀವ್ರಗೊಳಿಸಲಾಗುವುದು ಎಂದು ಎಚ್ಚರಿಸಿದರು.

ಜೋಶಿ ನಿವಾಸಕ್ಕೆ ಮುತ್ತಿಗೆ:

ಮಧ್ಯಾಹ್ನದವರೆಗೆ ಬೇಡಿಕೆ ಈಡೇರಿಸಲು ರೈತರು ಗಡುವು ನೀಡಿದ್ದರು. ಆದರೆ ಯಾವುದೇ ಸ್ಪಂದನೆ ದೊರೆಯದ ಹಿನ್ನೆಲೆಯಲ್ಲಿ ಚೆನ್ನಮ್ಮ ವೃತ್ತದಿಂದ ಅಂಬೇಡ್ಕರ್ ವೃತ್ತ, ಸರ್ವೋದಯ ಸರ್ಕಲ್ ಮಾರ್ಗವಾಗಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರ ನಿವಾಸದತ್ತ ರೈತರು ಮೆರವಣಿಗೆ ನಡೆಸಿದರು.

ಮಹಾನಗರ ಪೊಲೀಸ್ ಆಯುಕ್ತ ಭೂಷನ್ ಗುಲಾಬ್ ಭೋರ್ಸೆ ನೇತೃತ್ವದಲ್ಲಿ ಪೊಲೀಸರು ರೈತರನ್ನು ಸಮಾಧಾನಪಡಿಸಲು ಪ್ರಯತ್ನಿಸಿದರು. ರೈತರು ಈ ವೇಳೆ 20 ನಿಮಿಷಗಳ ಕಾಲಾವಕಾಶ ನೀಡಿದರೂ ಮಾತುಕತೆ ನಡೆಯದ ಹಿನ್ನೆಲೆಯಲ್ಲಿ ಕೆಲವರು ಬ್ಯಾರಿಕೇಡ್‌ಗಳನ್ನು ಭೇದಿಸಿ ಜೋಶಿ ನಿವಾಸದತ್ತ ತೆರಳಿ ಮುತ್ತಿಗೆ ಹಾಕಿದರು. ಒಂದು ಗಂಟೆಗೂ ಹೆಚ್ಚು ಕಾಲ ಅಲ್ಲಿ ಪ್ರತಿಭಟನೆ ನಡೆಸಿದರು.

ಈ ವೇಳೆ ಕೇಶ್ವಾಪುರದ ರಮೇಶ ಭವನದ ಬಳಿಯೂ ಸಾಕಷ್ಟು ರೈತರು ಜಮಾಯಿಸಿದ್ದರು. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ನಗರದಲ್ಲಿರಲಿಲ್ಲ.

ಸಂಜೆ ಶಾಸಕ ಮಹೇಶ ಟೆಂಗಿನಕಾಯಿ, ಶಾಸಕ ಎಂ.ಆರ್. ಪಾಟೀಲ ಹಾಗೂ ಜಿಲ್ಲಾಧಿಕಾರಿ ಸ್ನೇಹಲ್ ಅವರು ರೈತರೊಂದಿಗೆ ಮಾತುಕತೆ ನಡೆಸಿದರೂ ಅದು ಫಲಪ್ರದವಾಗಲಿಲ್ಲ. ಹೀಗಾಗಿ ಸಂಜೆ 7 ಗಂಟೆಯವರೆಗೂ ರೈತರು ಪ್ರತಿಭಟನೆ ಮುಂದುವರಿಸಿದರು.

ಕೇಶ್ವಾಪುರದ ರಮೇಶ ಭವನದ ಬಳಿ ಕೆಲ ರೈತರು ರಸ್ತೆಯ ಮೇಲೆಯೇ ಕುಳಿತು ಪ್ರತಿಭಟನೆ ನಡೆಸಿದರೆ, ಮತ್ತಷ್ಟು ರೈತರು ಚೆನ್ನಮ್ಮ ವೃತ್ತ ಹಾಗೂ ನೆಹರು ಮೈದಾನದಲ್ಲಿ ಸೇರಿದ್ದರು.

ಜನಜೀವನ ಅಸ್ತವ್ಯಸ್ತ:

ಚೆನ್ನಮ್ಮ ವೃತ್ತದಲ್ಲಿ ಬೆಳಿಗ್ಗೆ 11 ಗಂಟೆಯಿಂದಲೇ ರೈತರು ದೊಡ್ಡ ಸಂಖ್ಯೆಯಲ್ಲಿ ಜಮಾಯಿಸಿದ್ದರಿಂದ ಚೆನ್ನಮ್ಮ ವೃತ್ತ, ಸಂಗೊಳ್ಳಿ ರಾಯಣ್ಣ ವೃತ್ತ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳು ರೈತರಿಂದ ತುಂಬಿ ತುಳುಕಿದವು.

ಹಠಾತ್ ನಡೆದ ಬೃಹತ್ ಪ್ರತಿಭಟನೆಯಿಂದ ಸಾರ್ವಜನಿಕರು ಪರದಾಡುವಂತಾಯಿತು. ವಾಹನ ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡಿದ್ದು, ಮಾರುಕಟ್ಟೆ ಸೇರಿದಂತೆ ವಿವಿಧೆಡೆ ತೆರಳಿದ್ದ ಜನರು ಮನೆ ಸೇರಲು ತೊಂದರೆ ಅನುಭವಿಸಿದರು. ಸುಮಾರು ನಾಲ್ಕರಿಂದ ಐದು ಗಂಟೆಗಳ ಕಾಲ ಚೆನ್ನಮ್ಮ ವೃತ್ತ ರೈತರ ಪ್ರತಿಭಟನೆಯ ಕೇಂದ್ರವಾಗಿತ್ತು.

ಪ್ರತಿಕೃತಿ ದಹಿಸಿ ಆಕ್ರೋಶ:

ಪ್ರತಿಭಟನೆ ಆರಂಭಕ್ಕೂ ಮುನ್ನ ರೈತರ ಮನವಿ ಸ್ವೀಕರಿಸಲು ಕೇಂದ್ರ ಸಚಿವರು ಸ್ಥಳಕ್ಕೆ ಆಗಮಿಸದ ಹಿನ್ನೆಲೆಯಲ್ಲಿ ಮಹಿಳಾ ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿದರು. ಸಚಿವರ ಪ್ರತಿಕೃತಿಗೆ ಸೀರೆ, ಬಳೆ, ಮೂಗುತಿ ಹಾಗೂ ಮಾಂಗಲ್ಯ ಸರ ಹಾಕಿ ಅಣಕು ಶವಯಾತ್ರೆ ನಡೆಸಿದರು. ಬಳಿಕ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು.

ಏಳು ರಸ್ತೆಗಳಲ್ಲಿ ಸಂಚಾರ ಸ್ಥಗಿತ:

ಬೆಳಗಾವಿ, ಬಾಗಲಕೋಟೆ, ಧಾರವಾಡ ಸೇರಿದಂತೆ ವಿವಿಧ ಜಿಲ್ಲೆಗಳಿಂದ ಟ್ರಕ್, ಕ್ರೂಸರ್, ಟೆಂಪೋ, ಬಸ್ ಹಾಗೂ ರೈಲುಗಳ ಮೂಲಕ ಸಾವಿರಾರು ರೈತರು ಹುಬ್ಬಳ್ಳಿಗೆ ಆಗಮಿಸಿದ್ದರು. ಹಲವು ವಾಹನಗಳನ್ನು ನಗರದ ಹೊರವಲಯದಲ್ಲೇ ಪೊಲೀಸರು ತಡೆದ ಹಿನ್ನೆಲೆಯಲ್ಲಿ ಕೆಲವರು ನಡೆದುಕೊಂಡೇ ಪ್ರತಿಭಟನಾ ಸ್ಥಳ ತಲುಪಿದರು.

ಚೆನ್ನಮ್ಮ ವೃತ್ತಕ್ಕೆ ಸಂಪರ್ಕ ಕಲ್ಪಿಸುವ ಏಳು ಪ್ರಮುಖ ರಸ್ತೆಗಳಲ್ಲಿ ಸಂಚಾರ ಸ್ಥಗಿತಗೊಂಡಿದ್ದರಿಂದ ನಗರದಾದ್ಯಂತ ವಾಹನ ದಟ್ಟಣೆ ಉಂಟಾಯಿತು. ಚೆನ್ನಮ್ಮ ವೃತ್ತ ಹಾಗೂ ನೆಹರು ಮೈದಾನ ರೈತರಿಂದ ತುಂಬಿಹೋಗಿದ್ದರಿಂದ ನಗರದ ವಿವಿಧೆಡೆ ಹಸಿರು ಶಾಲು ಹೊದ್ದ ರೈತರ ಗುಂಪುಗಳು ಕಂಡುಬಂದವು.

ಭರವಸೆ ಬಳಿಕ ಪ್ರತಿಭಟನೆ ತಾತ್ಕಾಲಿಕ ಹಿಂದಕ್ಕೆ:

ಬೆಳಗ್ಗೆಯಿಂದ ಸಂಜೆಯವರೆಗೂ ಪಟ್ಟುಬಿಡದೆ ಪ್ರತಿಭಟನೆ ನಡೆಸಿದ ರೈತರು, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರ ಭರವಸೆ ಹಿನ್ನೆಲೆಯಲ್ಲಿ ಹೋರಾಟವನ್ನು ತಾತ್ಕಾಲಿಕವಾಗಿ ಹಿಂಪಡೆದರು.

ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ಸದ್ಯ ಅಧಿಕೃತವಾಗಿ ಯಾವುದೇ ಸಭೆ ನಡೆಸಲು ಸಾಧ್ಯವಾಗುವುದಿಲ್ಲ. ಅಕ್ಟೋಬರ್ 10ರೊಳಗೆ ರೈತರನ್ನು ದೆಹಲಿಗೆ ಕರೆಸಿಕೊಂಡು ಚರ್ಚೆ ನಡೆಸಿ ಸಮಸ್ಯೆ ಬಗೆಹರಿಸುವುದಾಗಿ ಪ್ರಹ್ಲಾದ್ ಜೋಶಿ ಭರವಸೆ ನೀಡಿದ್ದಾರೆ ಎಂದು ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿದ ಶಾಸಕ ಮಹೇಶ ಟೆಂಗಿನಕಾಯಿ ರೈತರಿಗೆ ತಿಳಿಸಿದರು.

ಈ ವೇಳೆ ಮಧ್ಯಪ್ರವೇಶಿಸಿದ ಶಶಿಕಾಂತ ಗುರೂಜಿ ಹಾಗೂ ಸಂಘಟನೆಯ ರಾಜ್ಯಾಧ್ಯಕ್ಷ ಚೂನಪ್ಪ ಪೂಜೇರಿ ಸೇರಿದಂತೆ 30 ರೈತ ಮುಖಂಡರು ದೆಹಲಿಯಲ್ಲಿ ನಡೆಯುವ ಸಭೆಯಲ್ಲಿ ಭಾಗವಹಿಸುವುದಾಗಿ ತಿಳಿಸಿದರು. ರೈತ ಮುಖಂಡರ ವಿಮಾನ ಪ್ರಯಾಣದ ಸಂಪೂರ್ಣ ಟಿಕೆಟ್ ಹಾಗೂ ಇತರ ಖರ್ಚು-ವೆಚ್ಚವನ್ನು ಶಾಸಕ ಎಂ.ಆರ್. ಪಾಟೀಲ ಅವರು ಭರಿಸಬೇಕು ಎಂದು ಒತ್ತಾಯಿಸಿದರು.

ಇದೇ ವೇಳೆ ಬೆಂಬಲ ಬೆಲೆ ಸೇರಿದಂತೆ ರೈತರ ಪ್ರಮುಖ ಬೇಡಿಕೆಗಳು ಈಡೇರುವವರೆಗೆ ಕಬ್ಬಿನ ಕಾರ್ಖಾನೆಗಳನ್ನು ತೆರೆಯಬಾರದು ಹಾಗೂ ಕಬ್ಬು ಅರೆಯುವ ಕಾರ್ಯ ಆರಂಭಿಸಬಾರದು ಎಂದು ರೈತರು ಎಚ್ಚರಿಕೆ ನೀಡಿದರು.

ಜೋಶಿ ಅವರ ಭರವಸೆ ಹಿನ್ನೆಲೆಯಲ್ಲಿ ಪ್ರತಿಭಟನೆಯನ್ನು ತಾತ್ಕಾಲಿಕವಾಗಿ ಹಿಂಪಡೆದ ರೈತರು, ಬೇಡಿಕೆಗಳು ಈಡೇರದಿದ್ದರೆ ಮುಂದಿನ ಹಂತದಲ್ಲಿ ಹೋರಾಟ ತೀವ್ರಗೊಳಿಸುವುದಾಗಿ ಎಚ್ಚರಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor