SIR ಮೂಲಕ ನಿರ್ದಿಷ್ಟ ಸಮುದಾಯಗಳ ಹಕ್ಕು ಕಸಿಯುವ ಸಂಚು : ಪ್ರಕಾಶ್ ರಾಜ್
ಧಾರವಾಡದಲ್ಲಿ ʼಫ್ಯಾಸಿಸಂ ವಿರುದ್ಧ ರಾಜ್ಯಮಟ್ಟದ ಪ್ರತಿರೋಧ ಸಮಾವೇಶ
ಧಾರವಾಡ : ಎಸ್ಐಆರ್ (ವಿಶೇಷ ತೀವ್ರ ಪರಿಷ್ಕರಣೆ) ಪ್ರಕ್ರಿಯೆ ಕೇವಲ ಮತದಾರರ ಪಟ್ಟಿಯ ಪರಿಷ್ಕರಣೆಯಲ್ಲ. ಇದು ಬಡವರು, ದಲಿತರು, ಆದಿವಾಸಿಗಳು ಹಾಗೂ ಅಲ್ಪಸಂಖ್ಯಾತರ ಮತದಾನದ ಹಕ್ಕನ್ನು ಕಸಿಯುವ ಪ್ರಯತ್ನವಾಗಿದ್ದು, ಇದರ ವಿರುದ್ಧ ನಾಗರಿಕ ಸಮಾಜ ಬೀದಿಗಿಳಿದು ಹೋರಾಟ ನಡೆಸಬೇಕು ಎಂದು ನಟ ಪ್ರಕಾಶ್ ರಾಜ್ ಹೇಳಿದರು.
ಧಾರವಾಡದಲ್ಲಿ ನಡೆದ ಫ್ಯಾಸಿಸಂ ವಿರುದ್ಧ ರಾಜ್ಯಮಟ್ಟದ ಪ್ರತಿರೋಧ ಸಮಾವೇಶದಲ್ಲಿ ಮಾತನಾಡಿದ ಅವರು, ಎಸ್ಐಆರ್ ಮೂಲಕ ನಿರ್ದಿಷ್ಟ ಸಮುದಾಯಗಳ ಮತದಾನದ ಹಕ್ಕನ್ನು ಕಸಿದುಕೊಳ್ಳುವ ಪ್ರಯತ್ನ ನಡೆಯುತ್ತಿದೆ. ಇದು ಮುಂದಿನ ಚುನಾವಣೆಯ ಗೆಲುವು-ಸೋಲಿನ ಪ್ರಶ್ನೆಯಷ್ಟೇ ಅಲ್ಲ. ಬದಲಾಗಿ ಸಂವಿಧಾನ, ಪ್ರಜಾಪ್ರಭುತ್ವ ಮತ್ತು ಸ್ವಾತಂತ್ರ್ಯದ ಅಳಿವು-ಉಳಿವಿನ ಪ್ರಶ್ನೆಯಾಗಿದೆ ಎಂದು ಹೇಳಿದರು.
“ರಾಜಕೀಯ ಪಕ್ಷಗಳು ತಮ್ಮ ಹೋರಾಟ ಮಾಡಲಿ. ಆದರೆ ನಾಗರಿಕ ಸಮಾಜ, ಸಾಹಿತಿಗಳು, ಕಲಾವಿದರು ಹಾಗೂ ಹೋರಾಟಗಾರರು ಜನರೊಂದಿಗೆ ನಿಂತು ಬೀದಿಗಿಳಿಯಬೇಕು. ಬಡವರು, ದಲಿತರು, ಆದಿವಾಸಿಗಳು ಮತ್ತು ಅಲ್ಪಸಂಖ್ಯಾತರ ಧ್ವನಿಯಾಗಬೇಕು” ಎಂದು ಕರೆ ನೀಡಿದರು.
ಎಸ್ಐಆರ್ ವಿರುದ್ಧ ರಾಜ್ಯದಾದ್ಯಂತ ಪ್ರತಿಭಟನೆಗಳನ್ನು ನಡೆಸಬೇಕು. ಸಾಮಾಜಿಕ ಜಾಲತಾಣಗಳಲ್ಲಿಯೂ ಈ ವಿಚಾರವನ್ನು ಪ್ರಮುಖವಾಗಿ ಪ್ರಸ್ತಾಪಿಸಬೇಕು ಎಂದು ಅವರು ಹೇಳಿದರು.
ಮತದಾರರನ್ನು ಕೇವಲ ಅಂಕಿ-ಅಂಶಗಳಾಗಿ ನೋಡದೆ, ಅವರ ನೋವು ಮತ್ತು ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳಬೇಕು. “ಸಂವಿಧಾನ, ಪ್ರಜಾಪ್ರಭುತ್ವ ಮತ್ತು ಸ್ವಾತಂತ್ರ್ಯವನ್ನು ಕಾಪಾಡಲು ಈಗಲೇ ಎಚ್ಚೆತ್ತುಕೊಂಡು ಹೋರಾಟ ನಡೆಸದಿದ್ದರೆ ಮುಂದಿನ ದಿನಗಳಲ್ಲಿ ದೊಡ್ಡ ಅಪಾಯ ಎದುರಾಗಲಿದೆ” ಎಂದು ಎಚ್ಚರಿಸಿದರು.
ಸಾಹಿತಿ ಕುಂ.ವೀರಭದ್ರಪ್ಪ ಮಾತನಾಡಿ, ಈ ದೇಶ ಸರ್ವಜನಾಂಗದ ಶಾಂತಿಯ ತೋಟ. ಈ ಶಾಂತಿಯನ್ನು ಕದಡತಕ್ಕಂತಹ ಕೆಲಸವನ್ನು ಆರೆಸ್ಸೆಸ್ ಮತ್ತು ಬಿಜೆಪಿಯವರು ಮಾಡುತ್ತಿದ್ದಾರೆ. 'ಒಂದು ಭಾಷೆ, ಒಂದು ಧರ್ಮ, ಒಂದು ಎಲೆಕ್ಷನ್' ಎಂಬ ಕಲ್ಪನೆ ಈ ದೇಶದ ಬಹುತ್ವವನ್ನು ನಾಶ ಮಾಡುವ ಹೆಜ್ಜೆ ಆಗಿದೆ. ನಾವಿಂದು ಬಹಳ ಅಪಾಯಕಾರಿ ಸನ್ನಿವೇಶದಲ್ಲಿದ್ದೇವೆ. ನಮಗೆ ಇಷ್ಟಪಟ್ಟಂತಹ ಬಟ್ಟೆಯನ್ನು ತೊಟ್ಟುಕೊಳ್ಳುವ, ಇಷ್ಟಪಟ್ಟ ಆಹಾರವನ್ನು ತಿನ್ನುವ ಸ್ವಾತಂತ್ರ್ಯ ಇಲ್ಲ. ಹೀಗಾಗಿ, ಅಭಿವ್ಯಕ್ತಿಯ ಸ್ವಾತಂತ್ರ್ಯಕ್ಕಾಗಿ, ವೈಚಾರಿಕ ಸ್ವಾತಂತ್ರ್ಯ ಪಡೆಯಲು ಮತ್ತೊಂದು ಸ್ವಾತಂತ್ರ್ಯ ಸಂಗ್ರಾಮದ ಅಗತ್ಯವಿದೆ ಎಂದು ಹೇಳಿದರು.
ಈ ಹೋರಾಟ ಕೇವಲ ಧಾರವಾಡಕ್ಕೆ ಮಾತ್ರ ಸಂಬಂಧಪಟ್ಟಿದ್ದಲ್ಲ. ಭಾಷಾ ಚಳುವಳಿ, ಸರ್ವಾಧಿಕಾರಿ ಶಕ್ತಿಗಳ ವಿರುದ್ಧ, ಆಮೇಲೆ ಸ್ವಯಂಘೋಷಿತ ದೇವಮಾನವರ ವಿರುದ್ಧ ನಡೆದಂತಹ ಚಳುವಳಿಗಳೆಲ್ಲ ನಡೆದಿದ್ದು ಧಾರವಾಡಲ್ಲೇ. ಈ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕಾಗಿ, ಫ್ಯಾಸಿಸಂ ವಿರುದ್ಧ ಇಂದು ಇಟ್ಟ ಹೆಜ್ಜೆಗಳು ಕೇವಲ ಕೆಲವು ಕೋಟಿಗಳಿಗೆ ಮಾತ್ರ ಸೀಮಿತವಾಗಬಾರದು. ಇದನ್ನು ಭಾರತದಾದ್ಯಂತ ವಿಸ್ತರಿಸಬೇಕು. ಎಲ್ಲ ಕಡೆಗೂ ವೈಚಾರಿಕ ಸ್ವಾತಂತ್ರ್ಯಕ್ಕಾಗಿ, ಅಭಿವ್ಯಕ್ತಿ ಸ್ವಾತಂತ್ರ್ಯಕ್ಕಾಗಿ, ಈ ಫ್ಯಾಸಿಸ್ಟ್ ಶಕ್ತಿಗಳ ವಿರುದ್ಧ ಧ್ವನಿ ಎತ್ತಬೇಕು ಎಂದು ಕರೆ ನೀಡಿದರು.
ಹಿರಿಯ ಪತ್ರಕರ್ತ ದಿನೇಶ್ ಅಮೀನಮಟ್ಟು ಮಾತನಾಡಿ, ನನ್ನನ್ನು "ಅರ್ಬನ್ ನಕ್ಸಲ್", "ದಿಮಾಗಿ ನಕ್ಸಲ್", "ಬೋಳು ಮಂಡೆಯವನು" ಅಥವಾ "ಮೀನು ತಿನ್ನುವವನು" ಎಂದು ಕರೆದರೆ ಯಾವುದೇ ಬೇಸರವಿಲ್ಲ, ಆದರೆ ನನ್ನನ್ನು "ಚಡ್ಡಿ ಗ್ಯಾಂಗ್"ನವರೆಂದಾಗಲಿ ಅಥವಾ "ಕೋಮುವಾದಿ" ಎಂದಾಗಲಿ ಕರೆದರೆ ಅದನ್ನು ಸಂಪೂರ್ಣವಾಗಿ ನಿರಾಕರಿಸುವುದಾಗಿ ಮತ್ತು ಅಂತಹವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಎಚ್ಚರಿಸಿದರು.
ಸರ್ವಾಧಿಕಾರ, ಕೋಮುವಾದ, ರಾಷ್ಟ್ರೀಯತೆಯ ಅಮಲು, ಸಾಹಿತ್ಯ ಮತ್ತು ಸಂಸ್ಕೃತಿಯ ಮೇಲಿನ ದಾಳಿ, ಅಸಹಿಷ್ಣುತೆ, ಬಲಿಷ್ಠ ನಾಯಕರ ಆರಾಧನೆ ಹಾಗೂ ಭಯವನ್ನು ಹರಡಲು ಹುಸಿ ಶತ್ರುಗಳ ಸೃಷ್ಟಿಸಿತ್ತಿರುವುದು ಫ್ಯಾಸಿಸಂನ ಲಕ್ಷಣಗಳು. 17 ವರ್ಷಗಳ ಹಿಂದೆ ಮೋಹನ್ ಭಾಗವತ್ ಅವರು ಆರೆಸ್ಸೆಸ್ ಸರಸಂಘಚಾಲಕರಾಗಿ ಅಧಿಕಾರ ಸ್ವೀಕರಿಸಿದಾಗ, ಆರೆಸ್ಸೆಸ್ ನ ದೃಷ್ಟಿಕೋನ, ಹಿಂದೂ ಧರ್ಮದ ವ್ಯಾಖ್ಯಾನ, ಅದು ನೋಂದಾಯಿತ ಸಂಸ್ಥೆಯಾಗದಿರಲು ಕಾರಣ, ಸಂಸ್ಥೆಯಲ್ಲಿ ಚುನಾವಣೆಗಳು ನಡೆಯದಿರುವುದು ಹಾಗೂ ನಾಯಕತ್ವದ ಮಿತಿಗಳ ಕುರಿತು ಪ್ರಶ್ನೆ ಕೇಳಿದ್ದೆ. ಆದರೆ, ಅಂದಿನಿಂದ ಇಂದಿನವರೆಗೂ ಆ ಪ್ರಶ್ನೆಗಳಿಗೆ ಯಾವುದೇ ಉತ್ತರ ಸಿಕ್ಕಿಲ್ಲ ಎಂದರು.
ರಾಜಕೀಯ ಪಕ್ಷಗಳು "ಮೆದು ಹಿಂದುತ್ವ" ಹಾದಿ ಹಿಡಿಯದೆ, ಸ್ಪಷ್ಟ ಜಾತ್ಯತೀತ ತತ್ವದ ಮೇಲೆ ಕೋಮುವಾದಿ ಸಿದ್ಧಾಂತಗಳ ವಿರುದ್ಧ ದೃಢವಾಗಿ ಹೋರಾಡಬೇಕು. ಪ್ರಜಾಪ್ರಭುತ್ವದ ಮೌಲ್ಯಗಳನ್ನು ಬೆಂಬಲಿಸಲು, ಅವುಗಳನ್ನು ಹಾಳುಮಾಡುವವರನ್ನು ಮುಖಾಮುಖಿಯಾಗಿ ವಿರೋಧಿಸುವುದು ಅತ್ಯಗತ್ಯ ಎಂದು ಪ್ರತಿಪಾದಿಸಿದರು.
ಚಿಂತಕ ಬಸವರಾಜ್ ಸೂಳಿಭಾವಿ ಪ್ರಾಸ್ತಾವಿಕವಾಗಿ ಮಾತನಾಡಿ, ಮಾತನಾಡುವ, ಉಡುಪು ಧರಿಸುವ ಮತ್ತು ಆಹಾರ ಸೇವಿಸುವ ಸ್ವಾತಂತ್ರ್ಯದ ಮೇಲೆ ಗಂಭೀರ ಹತೋಟಿ ಹೇರಲಾಗುತ್ತಿದ್ದು, ವೈಚಾರಿಕ ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕಾಗಿ ಹೊಸ ಸ್ವಾತಂತ್ರ್ಯ ಸಂಗ್ರಾಮದ ಅಗತ್ಯವಿದೆ ಎಂದರು.
ಸಾಮಾಜಿಕ ಹೋರಾಟಗಾರ್ತಿ ಮೀನಾಕ್ಷಿ ಬಾಳಿ ಅವರು, "ಈ ಹಿಂದೆ ನಾವು ಸಮುದಾಯದ ಒಂದು ಸಣ್ಣ ಕಾರ್ಯಕ್ರಮ ಮಾಡಿದ್ದೇವು. ಅದು ಒಂದು ಹನಿ ಇತ್ತು, ಅದನ್ನು ಡಿಸ್ಟರ್ಬ್ ಮಾಡಿದ್ದರಿಂದ ಈಗ ಸಾಗರ ಆಗಿದೆ. ದೇಶವನ್ನು ನುಂಗಿ ತಿನ್ನುವಂತಹ ಫಾಸಿಸಂಗೆ ಅನಂತ ಮುಖ, ಅನಂತ ಭಾವಗಳಿವೆ. ನಮ್ಮ ಹೋರಾಟ ಕೂಡ ಅನಂತ ಮುಖ ಮತ್ತು ಅನಂತ ಭಾವಗಳಾಗಬೇಕಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಸಿದ್ದನಗೌಡ ಪಾಟೀಲ, ಚಿಂತಕ ಶಿವಸುಂದರ ಮಾತನಾಡಿ, ಬಿಜೆಪಿ ಮತ್ತು ಆರೆಸ್ಸೆಸ್ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು, ಮಾವಳ್ಳಿ ಶಂಕರ, ನೂರ್ ಶ್ರೀಧರ, ವೀರಣ್ಣ ಮತ್ತಿಕಟ್ಟಿ ಮಾಜಿ ಸಂಸದ ಐ.ಜಿ. ಸನದಿ, ಇಸಬೆಲ್ಲಾ ಝೇವಿಯರ್, ಗುರುನಾಥ ಉಳ್ಳಿಕಾಶಿ, ಸದಾನಂದ ಡಂಗನವರ, ಸೇರಿದಂತೆ ಅನೇಕ ಮುಖಂಡರು ಭಾಗವಹಿಸಿದ್ದರು.
ಇದಕ್ಕೂ ಮೊದಲು ರವಿವಾರ ಮುಂಜಾನೆ 10.30ರ ವೇಳೆ ದಿ. ಎಂ.ಎಂ. ಕಲಬುರ್ಗಿ ಅವರ ಮನೆಯಿಂದ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕಾಗಿ ನಾವು ಬೈಕ್ ರ್ಯಾಲಿ ನಡೆಯಿತು. ಎಂ.ಎಂ. ಕಲಬುರ್ಗಿ ಅವರ ಮನೆಯಿಂದ ಆರ್ ಎನ್ ಶೆಟ್ಟಿ ಕ್ರೀಡಾಂಗಣದ ವರೆಗೆ ನಡೆದ ರ್ಯಾಲಿಯಲ್ಲಿ ನೂರಾರು ಜನ ಭಾಗವಹಿಸಿದ್ದರು. ಬಳಿಕ ಆರ್.ಎನ್. ಶೆಟ್ಟಿ ಕ್ರೀಡಾಂಗಣದಿಂದ ಬುದ್ಧ ರಕ್ಕಿತ ಶಾಲೆ ವರೆಗೆ ದಬ್ಬಾಳಿಕೆ ವಿರುದ್ಧ ಪ್ರತಿರೋಧದ ನಡಿಗೆ ಪಾದಯಾತ್ರೆ ನಡೆಯಿತು. ಈ ವೇಳೆ ಪ್ರತಿಭಟನಾಕಾರರು ಕೇಂದ್ರ ಸರಕಾರದ ಜನವಿರೋಧಿ ನೀತಿಗಳು, ಎಸ್ ಐಆರ್ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಪೊಲೀಸರು ಬಿಗಿ ಬಂದೋಬಸ್ತ್ ಏರ್ಪಡಿಸಿದ್ದರು.