Dharwad | ಬಸ್ ಕಿಟಕಿಯಿಂದ ತಲೆ ಹೊರಹಾಕಿದ ವೇಳೆ ಟಿಪ್ಪರ್ ಢಿಕ್ಕಿ; ರುಂಡ ತುಂಡಾಗಿ ಯುವಕ ಸ್ಥಳದಲ್ಲೇ ಮೃತ್ಯು
ಹುಬ್ಬಳ್ಳಿ : ಬಸ್ ಪ್ರಯಾಣದ ವೇಳೆ ಕಿಟಕಿಯಿಂದ ತಲೆ ಹೊರಹಾಕಿದ್ದ ಯುವಕನಿಗೆ ಹಿಂದಿನಿಂದ ಬಂದ ಟಿಪ್ಪರ್ ಢಿಕ್ಕಿ ಹೊಡೆದ ಪರಿಣಾಮ ಯುವಕನ ರುಂಡ ತುಂಡಾಗಿ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಶೆರೆವಾಡ ಗ್ರಾಮದ ಸಮೀಪ ಇಂದು(ಬುಧವಾರ) ಸಂಜೆ ನಡೆದಿದೆ.
ಮೃತ ಯುವಕನನ್ನು ಶಿರೂರು ಗ್ರಾಮದ ಪಕ್ಕಿರಯ್ಯ ಚನ್ನಯ್ಯ ಮುತ್ತಳ್ಳಿಮಠ (18) ಎಂದು ಗುರುತಿಸಲಾಗಿದೆ.
ಪಕ್ಕಿರಯ್ಯ ಹುಬ್ಬಳ್ಳಿಯಲ್ಲಿ ಐಟಿಐ ವ್ಯಾಸಂಗ ಮಾಡುತ್ತಿದ್ದು, ಲಕ್ಷ್ಮೇಶ್ವರ ಕಡೆಗೆ ತೆರಳುತ್ತಿದ್ದ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ. ಬಸ್‌ನ ಹಿಂಬದಿ ಆಸನದಲ್ಲಿ ಕುಳಿತಿದ್ದ ಆತ ಕಿಟಕಿಯಿಂದ ತಲೆ ಹೊರಹಾಕಿದ್ದಾನೆ ಎನ್ನಲಾಗಿದೆ. ಇದೇ ವೇಳೆ ಹಿಂದಿನಿಂದ ವೇಗವಾಗಿ ಬಂದ ಟಿಪ್ಪರ್, ಬಸ್‌ಗೆ ಸಮೀಪವಾಗಿ ಹಾದುಹೋಗುವಾಗ ಯುವಕನ ತಲೆಗೆ ತಗುಲಿ ಯುವಕನ ರುಂಡ ತುಂಡಾಗಿ ಕೆಳಗಡೆ ಬಿದ್ದಿದ್ದು, ಯುವಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಅಪಘಾತದ ಬಳಿಕ ಬಸ್ ಚಾಲಕ ವಾಹನವನ್ನು ನಿಲ್ಲಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಕುಂದಗೋಳ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಕುಂದಗೋಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅಪಘಾತದ ನಿಖರ ಕಾರಣದ ಕುರಿತು ತನಿಖೆ ಮುಂದುವರಿದಿದೆ.