ಸೆ.29ರಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮನೆಯ ಎದುರುಗಡೆ ರೈತ ಸಂಘದಿಂದ ಪ್ರತಿಭಟನೆ
ಹುಬ್ಬಳ್ಳಿ: ರೈತರ ವಿವಿಧ ಹಕ್ಕೊತ್ತಾಯಗಳನ್ನು ಜಾರಿಗೊಳಿಸುವಂತೆ ಒತ್ತಾಯಿಸಿ ಸೆ.29ರಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರ ಮನೆಯ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ರಾಜ್ಯಾಧ್ಯಕ್ಷ ಚುನಪ್ಪ ಪೂಜೇರಿ ಹೇಳಿದ್ದಾರೆ.
ನಗರದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ವಾಮಿನಾಥನ್ ಆಯೋಗದ ವರದಿ ಜಾರಿಗೊಳಿಸಬೇಕು, ರಾಜ್ಯದ ಉತ್ಪಾದನೆಗೆ ಮತ್ತು ಮಾರಾಟಕ್ಕೆ ಪೂರ್ಣ ಪ್ರಮಾಣದ ಅನುಮತಿ ನೀಡಬೇಕು, ಸಕ್ಕರೆ ಬೆಲೆ ನಿರಂತರವಾಗಿ ಹೆಚ್ಚುತ್ತಿರುವುದರಿಂದ ಹೆಚ್ಚುವರಿಯಾಗಿ 2025-26ನೇ ಸಾಲಿನ ಕಬ್ಬು ಪೂರೈಸಿದ ರೈತರಿಗೆ 300 ರೂ. ನೀಡಬೇಕು, ಕರ್ನಾಟಕ ಮಹಾದಾಯಿ ನೀರಾವರಿ ಯೋಜನೆಯನ್ನು ತ್ವರಿತಗತಿಯಲ್ಲಿ ಎಲ್ಲಾ ಪರವಾನಿಗೆಯನ್ನು ನೀಡಿ ಕಾಮಗಾರಿಯನ್ನು ಪ್ರಾರಂಭಿಸಬೇಕು ಹಾಗೂ ವಿಬಿ ಯೋಜನೆಯಲ್ಲಿ ಎಲ್ಲಾ ಕೃಷಿ ಚಟುವಟಿಕೆಗಳನ್ನು ಅಳವಡಿಸಬೇಕು ಸೇರಿದಂತೆ ರೈತರ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಶಶಿಕಾಂತ ಗುರೂಜಿ, ಕಿಶನ್ ನಂದಿ, ರಾಜು ಪೋವಾರ್, ಪ್ರಕಾಶ ನಾಯಕ, ಸಿದ್ದಣ್ಣಾ ತೇಜಿ ಉಪಸ್ಥಿತರಿದ್ದರು.