ಆದಾಯ ಮೀರಿ ಆಸ್ತಿಗಳಿಕೆ ಆರೋಪ: ಹುಬ್ಬಳ್ಳಿ ಹೆಸ್ಕಾಂ ಎಇಇ ಮನೆ, ಕಚೇರಿ ಮೇಲೆ ಲೋಕಾಯುಕ್ತ ದಾಳಿ
ಹುಬ್ಬಳ್ಳಿ: ಆದಾಯಕ್ಕಿಂತ ಹೆಚ್ಚು ಆಸ್ತಿಗಳಿಕೆ ಆರೋಪದ ಹಿನ್ನೆಲೆಯಲ್ಲಿ ಹೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ (ಎಇಇ) ಕಿರಣಕುಮಾರ್ ಬೈಂದೂರ್ ಅವರ ಮನೆ, ಕಚೇರಿ ಹಾಗೂ ಧಾರವಾಡದಲ್ಲಿರುವ ಅವರ ಸಹೋದರನ ಮನೆ ಮೇಲೆ ಲೋಕಾಯುಕ್ತ ಪೊಲೀಸರು ಮಂಗಳವಾರ ಬೆಳ್ಳಂಬೆಳಗ್ಗೆ ಏಕಕಾಲದಲ್ಲಿ ದಾಳಿ ನಡೆಸಿದ್ದಾರೆ.
ಹುಬ್ಬಳ್ಳಿ ನಗರದ ಅಕ್ಷಯ ಕಾಲೋನಿಯಲ್ಲಿರುವ ಕಿರಣಕುಮಾರ್ ಬೈಂದೂರ್ ಅವರ ನಿವಾಸ, ಅವರು ಕರ್ತವ್ಯ ನಿರ್ವಹಿಸುತ್ತಿರುವ ಹೆಸ್ಕಾಂ ಕಚೇರಿ ಸೇರಿದಂತೆ ಒಟ್ಟು ನಾಲ್ಕು ಕಡೆಗಳಲ್ಲಿ ಲೋಕಾಯುಕ್ತ ಅಧಿಕಾರಿಗಳು ಶೋಧ ಕಾರ್ಯಾಚರಣೆ ನಡೆಸಿ ದಾಖಲೆಗಳು ಹಾಗೂ ಆಸ್ತಿ-ಪಾಸ್ತಿಗೆ ಸಂಬಂಧಿಸಿದ ಮಾಹಿತಿಯನ್ನು ಪರಿಶೀಲಿಸುತ್ತಿದ್ದಾರೆ.
ಕಿರಣಕುಮಾರ್ ಅವರ ಪತ್ನಿ ಪ್ರೀತಿ ಕೂಡ ಹೆಸ್ಕಾಂನಲ್ಲಿ ಇಂಜಿನಿಯರ್ ಆಗಿದ್ದು, ತಬೀಬ್ ಲ್ಯಾಂಡ್ ಪ್ರದೇಶದಲ್ಲಿರುವ ಅವರ ನಿವಾಸ, ಗೋಪನಕೊಪ್ಪ ಹೆಸ್ಕಾಂ ಕಚೇರಿ ಹಾಗೂ ಧಾರವಾಡದಲ್ಲಿರುವ ಸಹೋದರನ ಮನೆಯಲ್ಲೂ ಲೋಕಾಯುಕ್ತ ಅಧಿಕಾರಿಗಳು ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ.
ಧಾರವಾಡ ಲೋಕಾಯುಕ್ತ ಎಸ್‌ಪಿ ಸಿದ್ದಲಿಂಗಪ್ಪ ಅವರ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆಯುತ್ತಿದ್ದು, ಡಿವೈಎಸ್‌ಪಿ ಬಸವರಾಜ್ ಬುದ್ನಿ ಸೇರಿದಂತೆ ಅಧಿಕಾರಿಗಳ ತಂಡ ಶೋಧ ಕಾರ್ಯ ಮುಂದುವರಿಸಿದೆ.