ಹುಬ್ಬಳ್ಳಿ : ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆಯಿಂದಾಗಿ ದುಡಿಯುವ ಹಾಗೂ ಶೋಷಿತ ವರ್ಗದ ಅನೇಕ ಮತದಾರರು ಮತದಾನದ ಹಕ್ಕಿನಿಂದ ವಂಚಿತರಾಗುವ ಆತಂಕವಿದೆ. ಈ ಹಿನ್ನೆಲೆಯಲ್ಲಿ ಎಸ್‌ಐಆರ್‌ ಪ್ರಕ್ರಿಯೆಯನ್ನು ಮರುಪರಿಶೀಲಿಸುವಂತೆ ರಾಜ್ಯ ಸರಕಾರ ಹಾಗೂ ಚುನಾವಣಾ ಆಯೋಗವನ್ನು ಒತ್ತಾಯಿಸಲಾಗುವುದು ಎಂದು ನಾಗರಿಕ ಮತ ಕಾವಲು ಸಮಿತಿ ಮುಖಂಡ ನೂರ್ ಶ್ರೀಧರ್‌ ಹೇಳಿದರು.

ಹುಬ್ಬಳ್ಳಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಸ್‌ಐಆರ್‌ ಪ್ರಕ್ರಿಯೆ ಪ್ರಜಾಪ್ರಭುತ್ವದ ಬುನಾದಿಗೆ ಧಕ್ಕೆ ಉಂಟುಮಾಡುವ ಸಾಧ್ಯತೆ ಇದೆ ಎಂದು ಆರಂಭದಿಂದಲೂ ಎಚ್ಚರಿಸಲಾಗಿತ್ತು. ಬಿಹಾರ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಮತದಾರರ ಹೆಸರುಗಳನ್ನು ಕೈಬಿಟ್ಟಿರುವ ಕುರಿತು ಹಲವು ಆಕ್ಷೇಪಗಳು ಕೇಳಿಬಂದಿವೆ. ಕರ್ನಾಟಕದಲ್ಲಿಯೂ ಹೆಚ್ಚಿನ ಸಂಖ್ಯೆಯ ಮತದಾರರ ಹೆಸರುಗಳು ಪಟ್ಟಿಯಿಂದ ಹೊರಗುಳಿದಿರುವ ಬಗ್ಗೆ ಅನುಮಾನಗಳಿವೆ ಎಂದು ಹೇಳಿದರು.

ಗ್ರಾಮಸಭೆ ಹಾಗೂ ವಾರ್ಡ್ ಸಭೆಗಳಲ್ಲಿ ಕರಡು ಮತದಾರರ ಪಟ್ಟಿಯನ್ನು ಮಂಡಿಸಿ, ಆಕ್ಷೇಪಣೆಗಳನ್ನು ಸ್ವೀಕರಿಸಿ ತಿದ್ದುಪಡಿ ಮಾಡುವ ವ್ಯವಸ್ಥೆ ಚುನಾವಣಾ ಪ್ರಕ್ರಿಯೆಯಲ್ಲಿದೆ. ಆದರೆ ಈ ಕ್ರಮ ಸಮರ್ಪಕವಾಗಿ ನಡೆದಿಲ್ಲ. ಸರಕಾರದ ವತಿಯಿಂದ ಹೆಲ್ಪ್‌ಡೆಸ್ಕ್‌ ಹಾಗೂ ಮನೆಮನೆಗೆ ದಾಖಲೆ ಒದಗಿಸುವ ವ್ಯವಸ್ಥೆ ಮಾಡುವುದಾಗಿ ಹೇಳಲಾಗಿದ್ದರೂ ಅದು ಪರಿಣಾಮಕಾರಿಯಾಗಿ ಜಾರಿಯಾಗಿಲ್ಲ ಎಂದು ಆರೋಪಿಸಿದರು.

ರಾಜ್ಯದಲ್ಲಿ ಮತದಾರರ ಸಂಖ್ಯೆ ಹಾಗೂ ಎಸ್‌ಐಆರ್‌ ನಂತರದ ಪಟ್ಟಿಯಲ್ಲಿನ ಸಂಖ್ಯೆಯಲ್ಲಿನ ವ್ಯತ್ಯಾಸದ ಕುರಿತು ಸ್ಪಷ್ಟತೆ ನೀಡಬೇಕು. ಹೆಸರುಗಳನ್ನು ಕೈಬಿಡುವ ಸಂದರ್ಭದಲ್ಲಿ ಸೂಕ್ತ ಪರಿಶೀಲನೆ ನಡೆಸಬೇಕು. ಜೀವಂತ ವ್ಯಕ್ತಿಗಳನ್ನು ಮೃತಪಟ್ಟವರು ಎಂದು ನಮೂದಿಸಿರುವುದು, ಶಾಶ್ವತವಾಗಿ ಸ್ಥಳಾಂತರಗೊಂಡಿದ್ದಾರೆ ಎಂಬ ಕಾರಣ ಸೇರಿದಂತೆ ಹಲವು ಕಾರಣಗಳಿಂದ ಮತದಾರರ ಹೆಸರುಗಳನ್ನು ಕೈಬಿಡಲಾಗಿದೆ ಎಂಬ ದೂರುಗಳು ಬಂದಿವೆ. ಸುಮಾರು ಶೇ.90ರಷ್ಟು ಜನರಿಗೆ ತಮ್ಮ ಹೆಸರು ಮತದಾರರ ಪಟ್ಟಿಯಿಂದ ಕೈಬಿಟ್ಟಿರುವುದೇ ತಿಳಿದಿಲ್ಲ ಎಂದು ಅವರು ಹೇಳಿದರು.

ಎಸ್‌ಐಆರ್‌ ಪ್ರಕ್ರಿಯೆಯ ಪರಿಣಾಮವನ್ನು ಪರಿಶೀಲಿಸಲು ರಾಜ್ಯದ 25 ಜಿಲ್ಲೆಗಳಿಂದ 100 ಬೂತ್‌ಗಳನ್ನು ಮಾದರಿಯಾಗಿ ಆಯ್ಕೆ ಮಾಡಲಾಗಿದೆ. ಎಸ್‌ಐಆರ್‌ಗೂ ಮುನ್ನ ಇದ್ದ ಮತದಾರರ ಸಂಖ್ಯೆ, ಪ್ರಸ್ತುತ ಪಟ್ಟಿಯಲ್ಲಿರುವ ಸಂಖ್ಯೆ ಹಾಗೂ ಕೈಬಿಡಲಾದ ಮತದಾರರ ಸಂಖ್ಯೆಯ ಕುರಿತು ಅಧ್ಯಯನ ನಡೆಸಿ, ಸೆ.30ರಂದು ಪ್ರಾಥಮಿಕ ವರದಿಯನ್ನು ರಾಜ್ಯ ಸರ್ಕಾರ ಹಾಗೂ ಚುನಾವಣಾ ಆಯೋಗಕ್ಕೆ ಸಲ್ಲಿಸಲಾಗುವುದು ಎಂದರು.

ವಕೀಲ ತಾಹಿರ್ ಹುಸೇನ್ ಮಾತನಾಡಿ, ಎಸ್‌ಐಆರ್‌ನಿಂದ ಅನ್ಯಾಯಕ್ಕೊಳಗಾದವರಿಗೆ ನ್ಯಾಯ ಒದಗಿಸುವ ಉದ್ದೇಶದಿಂದ ಪ್ರತಿರೋಧ ಪ್ರವಾಸ ಕೈಗೊಳ್ಳಲಾಗಿದೆ ಎಂದರು.

ಕೆ.ಎಲ್. ಅಶೋಕ್‌ ಮಾತನಾಡಿ, ಬಿಹಾರ ಚುನಾವಣೆಗೂ ಮುನ್ನವೇ ಕರ್ನಾಟಕದಲ್ಲಿ ಎಸ್‌ಐಆರ್‌ ವಿರುದ್ಧ ಜಾಗೃತಿ ಅಭಿಯಾನ ನಡೆಸಲಾಗುತ್ತಿದೆ. ಇದು ಜನವಿರೋಧಿ ಹಾಗೂ ಸಂವಿಧಾನ ವಿರೋಧಿ ಪ್ರಕ್ರಿಯೆ ಎಂಬ ತಮ್ಮ ವಾದವನ್ನು ಸಾಕ್ಷ್ಯಾಧಾರಗಳೊಂದಿಗೆ ಜನರ ಮುಂದಿಡಲಾಗುತ್ತಿದೆ. ಹಲವು ಸಂಘಟನೆಗಳು ಅಭಿಯಾನಕ್ಕೆ ಕೈಜೋಡಿಸಿವೆ. ಸೆ.29ರಂದು ಮಂಡ್ಯದಲ್ಲಿ ಅಭಿಯಾನ ಅಂತ್ಯಗೊಳ್ಳಲಿದ್ದು, ಸೆ.30ರಂದು ಬೆಂಗಳೂರಿನಲ್ಲಿ ಸಚಿವ ಸಂಪುಟದ ಸದಸ್ಯರನ್ನು ಭೇಟಿಯಾಗಿ ಮುಂದಿನ ಹೋರಾಟದ ಕುರಿತು ಚರ್ಚಿಸಲಾಗುವುದು ಎಂದು ತಿಳಿಸಿದರು.

ದೂರವಾಣಿ ಮೂಲಕ ಮಾತನಾಡಿದ ನಟ ಪ್ರಕಾಶ್ ರಾಜ್‌, ಎಸ್‌ಐಆರ್‌ ಪ್ರಕ್ರಿಯೆಯಿಂದ ಅನೇಕರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಕಡಿಮೆ ಅವಧಿಯಲ್ಲಿ ದೊಡ್ಡ ಪ್ರಮಾಣದ ಮತದಾರರ ಸಮಸ್ಯೆಗಳನ್ನು ಪರಿಹರಿಸುವುದು ಕಷ್ಟ. ತರಾತುರಿಯಲ್ಲಿ ಪ್ರಕ್ರಿಯೆ ನಡೆಸುತ್ತಿರುವುದೇಕೆ ಎಂಬುದಕ್ಕೆ ಸ್ಪಷ್ಟನೆ ನೀಡಬೇಕು. ಅಸಹಾಯಕ ಹಾಗೂ ದುಡಿಯುವ ವರ್ಗದ ಜನರಿಗೆ ಅನ್ಯಾಯವಾಗದಂತೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಗುರುನಾಥ ಉಳ್ಳಿಕಾಶಿ, ಮಹೇಶ ಪತ್ತಾರ, ಬಸವರಾಜ ಸೂಳೆಬಾವಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor