ಅಂತಿಮ ಮತದಾರರ ಪಟ್ಟಿ ಪ್ರಕಟ: ಧಾರವಾಡ ಜಿಲ್ಲೆಯಲ್ಲಿ 13.78 ಲಕ್ಷ ಮತದಾರರು : ಸ್ನೇಹಲ್ ಆರ್.
6,305 ಹೆಸರು ಡಿಲೀಟ್; 30,375 ಹೊಸ ಮತದಾರರ ಸೇರ್ಪಡೆ
Photo Credit : PTI
ಧಾರವಾಡ : ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆ ಪೂರ್ಣಗೊಂಡಿದ್ದು, ಧಾರವಾಡ ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳ ಅಂತಿಮ ಮತದಾರರ ಪಟ್ಟಿಯನ್ನು ಮಂಗಳವಾರ (ಅ. 27) ಪ್ರಕಟಿಸಲಾಗಿದೆ. ಜಿಲ್ಲೆಯಲ್ಲಿ ಒಟ್ಟು 13,78,016 ಮತದಾರರು ಉಳಿದಿದ್ದಾರೆ ಎಂದು ಚುನಾವಣಾಧಿಕಾರಿ ಸ್ನೇಹಲ್ ಆರ್. ತಿಳಿಸಿದ್ದಾರೆ.
ಆಗಸ್ಟ್ 24ರಂದು ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಲಾಗಿತ್ತು. ಬಳಿಕ ಹಕ್ಕು ಮತ್ತು ಆಕ್ಷೇಪಣೆಗಳನ್ನು ಸಲ್ಲಿಸಲು ಹಾಗೂ ನೋಟಿಸ್ಗಳ ವಿಲೇವಾರಿಗೆ ಅಕ್ಟೋಬರ್ 22ರವರೆಗೆ ಅವಕಾಶ ನೀಡಲಾಗಿತ್ತು. ಈ ಪ್ರಕ್ರಿಯೆ ಪೂರ್ಣಗೊಂಡ ನಂತರ ಚುನಾವಣಾ ಆಯೋಗದ ನಿರ್ದೇಶನದಂತೆ ಅಕ್ಟೋಬರ್ 27ರಂದು ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಲಾಗಿದೆ.
ಮತಗಟ್ಟೆ ಅಧಿಕಾರಿಗಳು ಮನೆಮನೆಗೆ ತೆರಳಿ ಗಣತಿ ನಮೂನೆಗಳನ್ನು ವಿತರಿಸಿ, ಮತದಾರರಿಂದ ಭರ್ತಿ ಮಾಡಿದ ನಮೂನೆಗಳನ್ನು ಸಂಗ್ರಹಿಸಿದ್ದರು. ಬಳಿಕ ಪರಿಶೀಲನೆ ನಡೆಸಿ ಮಾಹಿತಿಯನ್ನು ಆನ್ಲೈನ್ನಲ್ಲಿ ದಾಖಲಿಸಿ ಕರಡು ಪಟ್ಟಿ ಸಿದ್ಧಪಡಿಸಲಾಗಿತ್ತು. ಕರಡು ಪಟ್ಟಿಯನ್ನು ಚುನಾವಣಾ ಆಯೋಗದ ವೆಬ್ಸೈಟ್ ಹಾಗೂ ಜಿಲ್ಲಾಡಳಿತದ ವೆಬ್ಸೈಟ್ನಲ್ಲಿ ಪ್ರಕಟಿಸಿ, ಸಾರ್ವಜನಿಕರಿಂದ ಹಕ್ಕು ಮತ್ತು ಆಕ್ಷೇಪಣೆಗಳನ್ನು ಸ್ವೀಕರಿಸಲಾಗಿತ್ತು.
ಮಹಿಳಾ ಮತದಾರರೇ ಹೆಚ್ಚು :
ಜಿಲ್ಲೆಯ ಅಂತಿಮ ಮತದಾರರ ಪಟ್ಟಿಯಲ್ಲಿ ಮಹಿಳಾ ಮತದಾರರ ಸಂಖ್ಯೆ ಪುರುಷರಿಗಿಂತ ಹೆಚ್ಚಿದೆ. ಪ್ರತಿ 1,000 ಪುರುಷ ಮತದಾರರಿಗೆ 1,006 ಮಹಿಳಾ ಮತದಾರರಿದ್ದಾರೆ. ಒಟ್ಟು ಮತದಾರರಲ್ಲಿ 66 ತೃತೀಯ ಲಿಂಗಿಗಳು ನೋಂದಣಿಯಾಗಿದ್ದಾರೆ.
ಮೊದಲ ಬಾರಿಗೆ ಮತದಾರರಾಗಿ ನೋಂದಾಯಿಸಿಕೊಂಡಿರುವ 15,151 ಯುವ ಮತದಾರರು ಪಟ್ಟಿಯಲ್ಲಿದ್ದಾರೆ. ಅಲ್ಲದೆ, 63 ಅನಿವಾಸಿ ಭಾರತೀಯ ಮತದಾರರು ಹಾಗೂ 20,807 ವಿಶೇಷ ಚೇತನ ಮತದಾರರು ಅಂತಿಮ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.
30,375 ಹೊಸ ಮತದಾರರ ಸೇರ್ಪಡೆ :
ಮತದಾರರ ಪಟ್ಟಿ ಪರಿಷ್ಕರಣೆ ಸಂದರ್ಭದಲ್ಲಿ ಒಟ್ಟು 30,375 ಹೊಸ ಮತದಾರರನ್ನು ಸೇರ್ಪಡೆ ಮಾಡಲಾಗಿದೆ. ವಿವಿಧ ಕಾರಣಗಳಿಂದ 6,305 ಮತದಾರರ ಹೆಸರುಗಳನ್ನು ಪಟ್ಟಿಯಿಂದ ತೆಗೆದುಹಾಕಲಾಗಿದೆ. ಮತದಾರರ ವಿವರಗಳ ತಿದ್ದುಪಡಿಗಾಗಿ ನಮೂನೆ-8 ಸಲ್ಲಿಸಿದವರ ಮಾಹಿತಿಯಲ್ಲಿಯೂ ಅಗತ್ಯ ಬದಲಾವಣೆಗಳನ್ನು ಮಾಡಲಾಗಿದೆ.
ಹೆಸರು ಡಿಲೀಟ್ ಸಂಬಂಧಿಸಿದಂತೆ, ಮೃತಪಟ್ಟಿರುವ ಒಂಬತ್ತು ಮತದಾರರ ಹೆಸರುಗಳನ್ನು ತೆಗೆದುಹಾಕಲಾಗಿದೆ. ಈಗಾಗಲೇ ಬೇರೆಡೆ ನೋಂದಣಿಯಾಗಿರುವ ಕಾರಣ 14 ಹೆಸರುಗಳನ್ನು ಹಾಗೂ ಶಾಶ್ವತವಾಗಿ ಸ್ಥಳಾಂತರಗೊಂಡಿರುವ ಕಾರಣ 4,494 ಮತದಾರರ ಹೆಸರುಗಳನ್ನು ಪಟ್ಟಿಯಿಂದ ಕೈಬಿಡಲಾಗಿದೆ. ಹಿಂದಿನ ಮತದಾರರ ಪಟ್ಟಿಯ ವಿವರಗಳು ಅಥವಾ ಅಗತ್ಯ ಮಾಹಿತಿ ಲಭ್ಯವಾಗದಿರುವುದು ಸೇರಿದಂತೆ ಇತರ ಕಾರಣಗಳಿಂದ 1,787 ಹೆಸರುಗಳನ್ನು ತೆಗೆದುಹಾಕಲಾಗಿದೆ.
ಹಕ್ಕು ಮತ್ತು ಆಕ್ಷೇಪಣೆಗಳ ಅವಧಿಯಲ್ಲಿ 2,470 ಹೊಸ ಮತದಾರರನ್ನು ಸೇರ್ಪಡೆ ಮಾಡಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
1,707 ಮತಗಟ್ಟೆಗಳು
ಜಿಲ್ಲೆಯಲ್ಲಿ ಮತಗಟ್ಟೆಗಳ ತರ್ಕಬದ್ಧ ಮರುಹಂಚಿಕೆ ಮತ್ತು ಪರಿಷ್ಕರಣೆ ಬಳಿಕ ಪ್ರಸ್ತುತ ಒಟ್ಟು 1,707 ಮತಗಟ್ಟೆಗಳಿವೆ. ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳ ಅಂತಿಮ ಮತದಾರರ ಪಟ್ಟಿಯನ್ನು ಸಾರ್ವಜನಿಕರ ಮಾಹಿತಿಗಾಗಿ ಚುನಾವಣಾ ಆಯೋಗದ ವೆಬ್ಸೈಟ್ ಹಾಗೂ ಜಿಲ್ಲಾಡಳಿತದ ಚುನಾವಣಾ ವಿಭಾಗದ ವೆಬ್ಸೈಟ್ನಲ್ಲಿ ಪ್ರಕಟಿಸಲಾಗಿದೆ.
ಮತದಾರರು ತಮ್ಮ ಹೆಸರು, ವಿಳಾಸ ಹಾಗೂ ಇತರ ವಿವರಗಳನ್ನು ಅಂತಿಮ ಪಟ್ಟಿಯಲ್ಲಿ ಪರಿಶೀಲಿಸಿಕೊಳ್ಳಬಹುದು ಎಂದು ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.