ಸಾಂದರ್ಭಿಕ ಚಿತ್ರ | PC : Image by magnific

ಹಾವೇರಿ : ಹಾವೇರಿ ವಿಶ್ವವಿದ್ಯಾಲಯದ ಕುಲಸಚಿವರು ಎಲ್ಲ ಅಧ್ಯಯನ ವಿಭಾಗಗಳ ಶಿಕ್ಷಕ, ಶಿಕ್ಷಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಮಹಾನವಮಿ ಆಯುಧಪೂಜೆಗೆ ಎಲ್ಲರೂ ಕಡ್ಡಾಯವಾಗಿ ಹಾಜರಾಗುವಂತೆ ಸುತ್ತೋಲೆ ಹೊರಡಿಸಿದೆ. ಇದನ್ನು ಖಂಡಿಸಿ ಸಾಹಿತಿ, ಪ್ರಗತಿಪರ ಚಿಂತಕರು ಹಾಗೂ ಶಿಕ್ಷಣ ತಜ್ಞರು ಉನ್ನತ ಶಿಕ್ಷಣ ಸಚಿವರಿಗೆ ಪತ್ರ ಬರೆದಿದ್ದಾರೆ.

ವಿವಿಯಲ್ಲಿ ಅಧಿಕೃತ ಧಾರ್ಮಿಕ ಆಚರಣೆಗೆ ಹಾಜರಾಗುವಂತೆ ಕಡ್ಡಾಯಗೊಳಿಸಿ ಸುತ್ತೋಲೆ ನೀಡಿರುವ ಕುಲಸಚಿವರನ್ನು ಕೂಡಲೇ ಅಮಾನತ್ತುಗೊಳಿಸಬೇಕೆಂದು ಪತ್ರದಲ್ಲಿ ಒತ್ತಾಯಿಸಿದ್ದಾರೆ.

ವಿಶ್ವ ವಿದ್ಯಾಲಯ ಒಂದು ಜಾತ್ಯತೀತ ಸಂಸ್ಥೆಯೇ ಹೊರತು ಮಠವಲ್ಲ. ವಿವಿಯಲ್ಲಿ ಎಲ್ಲಾ ಧರ್ಮ, ಜಾತಿ, ನಂಬಿಕೆಯ ವಿದ್ಯಾರ್ಥಿಗಳಿಗೆ ಸೇರಿದ್ದು. ಸಂವಿಧಾನದ 28ನೇ ವಿಧಿಯ ಪ್ರಕಾರ ಸರಕಾರಿ ಅನುದಾನಿತ ಶಿಕ್ಷಣ ಸಂಸ್ಥೆಯಲ್ಲಿ ಧಾರ್ಮಿಕ ಆಚರಣೆಯನ್ನು ಕಡ್ಡಾಯಗೊಳಿಸುವಂತಿಲ್ಲ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಕುಲಸಚಿವರ ಈ ನಡೆ ವೈಜ್ಞಾನಿಕ ಮನೋಭಾವಕ್ಕೆ ವಿರುದ್ಧವಾಗಿದ್ದು, ಸಂವಿಧಾನದ 51 A(h) ಪ್ರಕಾರ ವೈಜ್ಞಾನಿಕ ಚಿಂತನೆ, ಚಿಂತನಾಶೀಲ ಮನೋಭಾವ ಬೆಳೆಸುವುದು ವಿವಿಯ ಕರ್ತವ್ಯ. ಆಯುಧಪೂಜೆ ವ್ಯಕ್ತಿಯ ವೈಯಕ್ತಿಕ ನಂಬಿಕೆಯಾಗಿರಬಹುದು. ಆದರೆ, ಅದನ್ನು ಸಂಸ್ಥೆಯ ಕಾರ್ಯಕ್ರಮವನ್ನಾಗಿ ಮಾಡಿ ಕಡ್ಡಾಯಗೊಳಿಸುವುದು ವಿವಿಯನ್ನು ಒಂದು ಧರ್ಮದ ಆಚರಣಾ ಕೇಂದ್ರವನ್ನಾಗಿ ಪರಿವರ್ತಿಸಿದಂತಾಗುತ್ತದೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ವಿವಿಯಲ್ಲಿ ಮುಸ್ಲಿಮ್, ಕ್ರೈಸ್ತ, ಬೌದ್ಧ, ನಾಸ್ತಿಕ, ವಿವಿಧ ನಂಬಿಕೆಯ ವಿದ್ಯಾರ್ಥಿಗಳು, ಉಪನ್ಯಾಸಕರು ಇದ್ದಾರೆ. ಅವರ ಮೇಲೆ ಒಂದು ನಿರ್ದಿಷ್ಟ ಧಾರ್ಮಿಕ ಆಚರಣೆಯನ್ನು ಹೇರುವುದು ಅವರ ಆತ್ಮಸಾಕ್ಷಿಯ ಸ್ವಾತಂತ್ರ್ಯದ ಮೇಲಿನ ದಾಳಿಯಾಗಿದ್ದು, ಬಹುತ್ವಕ್ಕೆ ಧಕ್ಕೆ ತರುತ್ತದೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಕುಲಸಚಿವರು ಹೊರಡಿಸಿರುವ ಈ ಸುತ್ತೋಲೆ ಗಾಂಧಿ ಭಾರತ ಜಯಂತಿ ಲೋಗೋ ಬಳಸಿ, ಗಾಂಧೀಜಿಯವರು ಪ್ರತಿಪಾದಿಸಿದ ಸರ್ವಧರ್ಮ ಸಮಭಾವದ ತತ್ವಕ್ಕೇ ವಿರುದ್ಧವಾಗಿ ನಡೆದುಕೊಂಡಿದ್ದಾರೆ. ಉನ್ನತ ಶಿಕ್ಷಣ ಸಚಿವರು ಹಾವೇರಿ ವಿವಿಯ ಕುಲಸಚಿವರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಸಾಹಿತಿಗಳು, ಪ್ರಗತಿಪರ ಚಿಂತಕರು ಶಿಕ್ಷಣ ತಜ್ಞರು ಪತ್ರದ ಮೂಲಕ ಒತ್ತಾಯಿಸಿದ್ದಾರೆ.

ಶಿಕ್ಷಣ ತಜ್ಞರು ನಿರಂಜನಾರಾಧ್ಯ ವಿ.ಪಿ., ಬಸವರಾಜ ಸೂಳಿಬಾವಿ, ಅನಿಲ ಹೊಸಮನಿ ಸಾಮಾಜಿಕ, ಡಾ. ಎಚ್.ಎಸ್.ಅನುಪಮಾ, ಸನತ್‌ಕುಮಾರ ಬೆಳಗಲಿ, ಬಿ.ಸುರೇಶ, ದಿನೇಶ್ ಪಟವರ್ಧನ್, ಸುನೀತಾ ಬಿ.ವಿ., ವಿರೂಪಾಕ್ಷ ಪಡಿಗೋದಿ, ಕುಂ. ವೀರಭದ್ರಪ್ಪ, ಡಾ. ವೀರಣ್ಣ ರಾಜೂರು, ಕಾಳೆಗೌಡ ನಾಗಾವರ, ಪ್ರೊ. ಎಸ್.ಜಿ.ಸಿದ್ದರಾಮಯ್ಯ, ಶ್ರೀಪಾದ ಭಟ್, ಎಲ್.ಎನ್ ಮುಕುಂದರಾಜ್ ಸೇರಿದಂತೆ ನೂರಾರು ಪ್ರಗತಿಪರ ಚಿಂತಕರು, ಸಾಹಿತಿಗಳು, ಶಿಕ್ಷಣ ತಜ್ಞರು ಪತ್ರಕ್ಕೆ ಬೆಂಬಲ ಸೂಚಿಸಿದ್ದಾರೆ.

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor